Advertisement
ಕುಂದಾಪುರದಿಂದ 5 ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಚುನಾವಣೆ ಯಲ್ಲಿ ಸ್ಪರ್ಧಿಸೋಲ್ಲ ಎಂದು ಘೋಷಿಸಿದ ಸಂಗ ತಿಯೀಗ ಹಳ್ಳಿಕಟ್ಟೆ, ಗೂಡಂಗಡಿಗಳು, ಹೊಟೇಲ್‌ಗಳು, ಕಚೇರಿ ಸಹಿತ ಎಲ್ಲೆಡೆ ಸದ್ದು ಮಾಡುತ್ತಿದೆ.
ಅಚ್ಚರಿ ತರಿಸಿದೆ. ಅವರು “ನಿಲ್ತಾರೆ ಅಂದಿದ್ರಂತೆ, ಆದರೆ ಟಿಕೆಟ್ ಕೊಡಲ್ಲ ಅಂದ್ರಂತೆ” ಎನ್ನುವ ಮಾತು ಒಂದೆಡೆಯಾದರೆ, “ಅವರೇ ನಿಲ್ಲುವುದಿಲ್ಲ ಎಂದು ಘೋಷಿಸಿದರಂತೆ”, “ಹಿರಿಯರಾದವರು ಕಿರಿಯರಿಗೆ ಅವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ” ಎನ್ನುವ ಮೆಚ್ಚುಗೆಯ ಮಾತೂ ಇನ್ನೊಂದೆಡೆ ಕೇಳಿಬರುತ್ತಿದೆ. ಒಟ್ಟೂ ಪುಂಖಾನುಪುಂಖವಾಗಿ ಹಾಲಾಡಿಯವರ ಬಗೆಗಿನ ಮಾತುಗಳು ರೆಕ್ಕೆಪುಕ್ಕ ಸೇರಿಕೊಂಡು ಎಲ್ಲೆಡೆ ಹಾರುತ್ತಿವೆ.
ಈ ಚರ್ಚೆ ಯಾವುದೋ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಕುಂದಾಪುರ, ಬೈಂದೂರಿನ ಹಳ್ಳಿಯಲ್ಲಿರುವ ಸಣ್ಣ ಕಟ್ಟೆಯಿಂದ ಆರಂಭವಾಗಿ, ಅಂಗಡಿಗಳು, ಹೊಟೇಲ್‌ಗಳು, ಸೆಲೂನ್, ಮದುವೆ ಮನೆ, ರಿಕ್ಷಾ ನಿಲ್ದಾಣಗಳಲ್ಲೂ ಮಾತುಕತೆಗಳು ಜೋರಾಗಿ ನಡೆಯುತ್ತಿವೆ. ಇಲ್ಲಿ ಟಿಕೆಟು ಯಾರಿಗೆ ಕೊಡಬಹುದು ? ಇವರು ಹೇಳಿದವರಿಗೆ ಕೊಡಬಹುದೇ? ಬೇರೆಯವರಿಗೆ ಕೊಟ್ಟರೆ ಇವರೇನು ಮಾಡುತ್ತಾರೆ? ಇವರು ನಿಲ್ಲದಿರು ವುದು ಎದುರು ಪಕ್ಷದವರಿಗೆ ಲಾಭವಾಗಬಹುದೇ? ಇದರಿಂದ ಬೈಂದೂರು ಕ್ಷೇತ್ರದ ಮೇಲೂ ಪರಿಣಾಮವುಂಟಾ? ಇತರೆ ಕಣಗಳ ಚಿತ್ರಣವೂ ಬದಲಾಗಬಹುದಾ? ಎಂಬಿತ್ಯಾದಿ ವಿಷಯಗಳ ಕುರಿತಂತೆ ಚರ್ಚೆ, ವಾಗ್ವಾದ, ಲೆಕ್ಕಾಚಾರ ಎಲ್ಲವೂ ಭರ್ಜರಿಯಾಗಿ ಚಾಲ್ತಿಯಲ್ಲಿವೆ.