Advertisement

ಸ್ಥಳೀಯ ಸಂಸ್ಥೆಗಳ ಚುನಾವಣೆ: ಅನಗತ್ಯ ವಿಳಂಬ ಸಲ್ಲದು

11:07 PM Dec 15, 2022 | Team Udayavani |

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆಗಳ ಸಂಬಂಧ ಹೈಕೋರ್ಟ್‌ನಲ್ಲಿ ರಾಜ್ಯ ಸರಕಾರ ತೀವ್ರ ಮುಖಭಂಗ ಎದುರಿಸಿದ್ದು, ಬೇಕಿಲ್ಲದ ಕಾರಣಕ್ಕಾಗಿ ಮರ್ಯಾದೆ ತೆಗೆದುಕೊಂಡಂತಾಗಿದೆ. ಜಿ.ಪಂ. ಮತ್ತು ತಾ.ಪಂ.ಗಳ ಅವಧಿ ಮುಗಿಯುವ ಮುನ್ನವೇ ನಿಗದಿಯಂತೆ ಚುನಾವಣೆ ಮಾಡಿದ್ದರೆ ಇಷ್ಟೆಲ್ಲ ವಿವಾದಗಳಿಗೆ ಆಸ್ಪದವೇ ಇರುತ್ತಿರಲಿಲ್ಲ.

Advertisement

ಬುಧವಾರವಷ್ಟೆ ರಾಜ್ಯ ಹೈಕೋರ್ಟ್‌, ಜಿ.ಪಂ., ತಾ.ಪಂ.ಚುನಾವಣೆ ನಡೆಸುವ ಸಂಬಂಧ ಮತ್ತೆ ಮತ್ತೆ ಕಾಲಾವಕಾಶ ಕೇಳುತ್ತಿದೆ. ಚುನಾವಣೆ ನಡೆಸುವಲ್ಲಿ ವಿಳಂಬ ಮಾಡುತ್ತಿದೆ ಎಂಬ ವಿಚಾರವಾಗಿ 5 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಇದು ರಾಜ್ಯ ಸರಕಾರಕ್ಕೆ ಭಾರೀ ಮುಜುಗರದ ಸಂಗತಿಯೇ ಹೌದು. ಅದರಲ್ಲೂ ಚುನಾವಣೆ ನಡೆಸುವ ವಿಚಾರದಲ್ಲಿ ರಾಜ್ಯ ಸರಕಾರ ಬಸವನಹುಳುವಿನಂತೆ ತೆವಳುತ್ತಿದೆ ಎಂದು ಹೇಳಿರುವುದು ಗಂಭೀರವಾದ ಸಂಗತಿ.

ಇದುವರೆಗೆ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಸಂಬಂಧ ರಾಜ್ಯ ಸರಕಾರ 24 ವಾರಗಳ ಕಾಲಾವಕಾಶ ತೆಗೆದುಕೊಂಡಿದೆ. ಆದರೆ ಒಂದಡಿಯಷ್ಟೂ ಮುಂದಕ್ಕೆ ಹೋಗಿಲ್ಲ. ಇದು ಹೈಕೋರ್ಟ್‌ನ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ಬುಧವಾರ ಗಡುವು ನೀಡಿರುವ ಅದು,  ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಒಬಿಸಿ ಸಹಿತ ಇತರ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು 2023ರ ಫೆಬ್ರವರಿ 1ರೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರಕಾರ ಹಾಗೂ ಸೀಮಾ ನಿರ್ಣಯ ಆಯೋಗಕ್ಕೆ ಸೂಚಿಸಿದೆ.

ಇದರ ಜತೆಗೆ ಕ್ಷೇತ್ರಗಳ ಗಡಿ ಹಾಗೂ ಮೀಸಲಾತಿ ನಿಗದಿಗೆ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ತಿಂಗಳು ಕಾಲಾವಕಾಶ ಕೋರಿದ್ದ ಮನವಿಯನ್ನು ಹೈಕೋರ್ಟ್‌ ತಳ್ಳಿಹಾಕಿದೆ. ಆದರೂ ಫೆಬ್ರವರಿ 2ರ ವರೆಗೆ ಕಾಲಾವಕಾಶ ನೀಡಿ ಮನವಿಯನ್ನು ಇತ್ಯರ್ಥಪಡಿಸಿದೆ. ಹೀಗಾಗಿ ಫೆ.1ರೊಳಗೆ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಒಬಿಸಿ ಸಹಿತ ಇತರ ವರ್ಗಗಳಿಗೆ ಮೀಸಲಾತಿ ನಿಗದಿ ಪಡಿಸಿ, ಇಡೀ ಪ್ರಕ್ರಿಯೆಯನ್ನು ಮುಗಿಸಬೇಕು ಎಂದು ತಾಕೀತು ಮಾಡಿದೆ.

ಇದಷ್ಟೇ ಅಲ್ಲ, ಚುನಾವಣೆ ವಿಚಾರದಲ್ಲಿ ಸರಕಾರದ ವಿಳಂಬ ಧೋರಣೆಯನ್ನು ಪಟ್ಟಿ ಮಾಡಿ ಹೇಳಿದೆ. ಮತ್ತೆ ಮತ್ತೆ ವಿಸ್ತರಣೆಗೆ ಸಮಯ ಕೇಳುತ್ತಿರುವುದು ಏಕೆ ಎಂದೂ ಪ್ರಶ್ನಿಸಿದೆ. ಸರಕಾರದ ಈ ನಡೆಯನ್ನು ನಾವು ಸಮರ್ಥಿಸುವುದಿಲ್ಲ ಎಂದು ಪೀಠ ಹೇಳಿದ್ದು, ನ್ಯಾಯಾಲಯದ ಆದೇಶಗಳನ್ನೇ ನಿಷ್ಕ್ರಿಯಗೊಳಿಸುವ ಪ್ರಯತ್ನ ಇದು ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ ಎಂದೂ ಹೇಳಿ ಭಾರೀ ಅಸಮಾಧಾನ ಹೊರಹಾಕಿದೆ.

Advertisement

ಇಷ್ಟೆಲ್ಲ ಸಂಗತಿಗಳನ್ನು ಅವಲೋಕಿಸಿದರೆ ಇದುವರೆಗೆ ಚುನಾವಣೆ ನಡೆಸದ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್‌ ಹೆಚ್ಚು ಅಸಮಾಧಾನಗೊಂಡಿರುವುದು ಸತ್ಯ. ಅಲ್ಲದೆ ಭಾರತದಂಥ ದೇಶದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳೇ ಬೆನ್ನುಮೂಳೆ ಇದ್ದಂತೆ. ಇವುಗಳನ್ನು ಸದೃಢಪಡಿಸುವುದು ಸರಕಾರದ ಕೆಲಸವಾಗಬೇಕು. ಇದನ್ನು ಬಿಟ್ಟು ಚುನಾವಣೆ ನಡೆಸದೇ ಒಂದಲ್ಲ ಒಂದು ಕಾರಣದಿಂದ ಚುನಾವಣೆ ಮುಂದೂಡುವುದು ವೃಥಾ ಸರಿಯಾದ ಕ್ರಮ ಅಲ್ಲವೇ ಅಲ್ಲ.

ಇದೇ ಸಂಗತಿ ಬೆಂಗಳೂರಿನ ಬೃಹತ್‌ ಮಹಾನಗರ ಪಾಲಿಕೆ ಚುನಾವಣೆ ವಿಚಾರದಲ್ಲಿ ಆಗಿದೆ. ಅವಧಿ ಮುಗಿದು ಈಗಾಗಲೇ ತಿಂಗಳುಗಳೇ ಕಳೆದಿದ್ದರೂ ಇನ್ನೂ ಚುನಾವಣೆ ನಡೆಸುವ ಸಿದ್ಧತೆ ಕಾಣಿಸುತ್ತಿಲ್ಲ. ಈ ವಿಚಾರಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಖಂಡಿತವಾಗಿಯೂ ಶೋಭೆ ತರುವಂಥ ಕೆಲಸಗಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next