ಪಣಜಿ: ನಾನು ಪಕ್ಷೇತರನಾಗಿ ಚುನಾವಣೆಯಲ್ಲಿ ಆಯ್ಕೆಯಾಗಿರುವುದು ನನ್ನ ಜೀವನದಲ್ಲಿ ನಡೆದ ಒಂದು ಪವಾಡ ಎಂದು ಕುರ್ಚೊರೆಮ್ ಕ್ಷೇತ್ರದ ಪಕ್ಷೇತರ ಶಾಸಕ ಅಲೆಕ್ಸ್ ರೆಜಿನಾಲ್ಡೊ ಲಾರೆನ್ಸ್ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇವರ ಆಶೀರ್ವಾದ ಮತ್ತು ಮತದಾರರ ನಂಬಿಕೆಯಿಂದಾಗಿ ನಾನು ಮತ್ತೆ ಆಯ್ಕೆಯಾದೆ ಎಂದರು.
ನಾನು ಕಾಂಗ್ರೇಸ್ ಪಕ್ಷ ತೊರೆದು ಟಿಎಂಸಿ ಪಕ್ಷ ಸೇರುವಾಗ ಮತ್ತು ಟಿಎಂಸಿ ಪಕ್ಷ ತೊರೆದಾಗ ನನ್ನ ಉದ್ದೇಶಗಳು ಸ್ವಚ್ಛವಾಗಿದ್ದವು. ನನ್ನ ಕ್ಷೇತ್ರದ ಜನತೆಗಾಗಿ ನಾನು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಅಲೆಕ್ಸ್ ಹೇಳಿದರು.
ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದ ಅಲೆಕ್ಸ್ ಟಿಎಂಸಿ ಸೇರಿದ್ದರು. ನಂತರ ಕಾಂಗ್ರೆಸ್ ಸೇರಲು ಟಿಎಂಸಿ ತೊರೆದರು. ಆದರೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು. ಗೆಲುವು ಸಾಧಿಸಿರುವ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.
ಬಹುಮತಕ್ಕೆ 21 ಸೀಟುಗಳ ಅವಶ್ಯಕತೆಯಿರುವಲ್ಲಿ 20 ಕ್ಷೇತ್ರಗಳನ್ನು ಗೆದ್ದುಕೊಂಡು ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ ವಾದರೂ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗಿದೆ . ಎರಡು ಸ್ಥಾನ ಗೆದ್ದಿರುವ ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿದ್ದು, ಪಕ್ಷೇತರರಾದ ಆಂಟೋನಿಯೊ ವಾಸ್, ಚಂದ್ರಕಾಂತ್ ಶೆಟ್ಟಿ ಬೆಂಬಲ ನೀಡಿದ್ದಾರೆ.