Advertisement

ಆಯ್ಕೆಯಾಗಿ 10 ತಿಂಗಳಾದ್ರೂ ಇಲ್ಲ ಅಧಿಕಾರ!10

07:59 AM Jun 18, 2019 | Suhan S |

ಹಾವೇರಿ: ಸ್ಥಳೀಯ ಸಂಸ್ಥೆ ಚುನಾವಣೆ ನಡೆದು 10 ತಿಂಗಳು ಕಳೆದರೂ ಆಯ್ಕೆಯಾದ ಸದಸ್ಯರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಲ್ಲ. ಇನ್ನು ಅಧಿಕಾರಿಗಳಂತೂ ಜನರ ಸಮಸ್ಯೆಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದ್ದು ಅಭಿವೃದ್ಧಿ ಕುಂಠಿತವಾಗಿದೆ.

Advertisement

ಕಳೆದ ಆಗಸ್ಟ್‌ ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಹಾವೇರಿ, ರಾಣಿಬೆನ್ನೂರ, ಹಿರೇಕೆರೂರ, ಸವಣೂರು, ಹಾನಗಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಯೇ ಇಲ್ಲ. ಚುನಾವಣೆ ನಡೆದು 10 ತಿಂಗಳಾಗುತ್ತ ಬಂದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇನ್ನೂ ನಡೆದಿಲ್ಲ. ಹೀಗಾಗಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ವಾರಸುದಾರರೇ ಇಲ್ಲದಂತಾಗಿದೆ.

ರಾಜ್ಯ ಸರ್ಕಾರದ ನಿರಾಸಕ್ತಿ ಮತ್ತು ಮೀಸಲು ಲಾಭದ ಹವಣಿಕೆಯಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಸ್ಥಳೀಯ ಆಡಳಿತಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದರೂ ಜನರ ಸೇವೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರ ಸಿಕ್ಕಿಲ್ಲ: ಜಿಲ್ಲೆಯ ಹಾವೇರಿ ಮತ್ತು ರಾಣಿಬೆನ್ನೂರ ನಗರಸಭೆ, ಹಾನಗಲ್ಲ, ಸವಣೂರು ಪುರಸಭೆಗಳು ಹಾಗೂ ಹಿರೇಕೆರೂರಿನ ಪಟ್ಟಣ ಪಂಚಾಯಿತಿಗಳು ಸೇರಿ ಐದು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 136 ವಾರ್ಡ್‌ಗಳಿಗೆ ಚುನಾವಣೆ ನಡೆದು ಸೆ. 3ರಂದು ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು.

ಅದೇ ದಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಪಟ್ಟಿಯನ್ನೂ ಸರ್ಕಾರ ಬಿಡುಗಡೆಗೊಳಿಸಿತ್ತು. ಆದರೆ, ಮೀಸಲಾತಿ ಪಟ್ಟಿಯನ್ನು ಮೈತ್ರಿ ಸರ್ಕಾರ ಸೆ. 6ರಂದು ಪರಿಷ್ಕೃರಿಸಿ ಆದೇಶ ಹೊರಡಿಸಿತು. ಇದು ಈಗ ಕೋರ್ಟ್‌ ಮೆಟ್ಟಿಲೇರಿದ್ದು, ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ.

Advertisement

ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿತ್ತು. ಸ್ಪಷ್ಟ ಬಹುಮತ ಗೆದ್ದಿರುವ ಕಡೆ ಕಾಂಗ್ರೆಸ್‌ ಬಾವುಟ ಹಾರಿಸಲು ಸಿದ್ಧತೆ ನಡೆಸಿದ್ದರೆ, ಅತಂತ್ರ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಕೈ-ಕಮಲ ಪೈಪೋಟಿ ನಡೆಸುತ್ತಿದ್ದವು. ಆದರೆ, ಮೀಸಲಾತಿ ಕೋರ್ಟ್‌ ಮೆಟ್ಟಿಲೇರಿದ ಬಳಿಕ ಎಲ್ಲವೂ ಸ್ಥಗಿತಗೊಂಡಿವೆ.

ಕೆಲಸಗಳಾಗುತ್ತಿಲ್ಲ: ನಗರ ಸ್ಥಳೀಯ ಚುನಾವಣೆಯಲ್ಲಿ ಆಯ್ಕೆಯಾದರೂ ಇನ್ನೂ ಅಧಿಕೃತವಾಗಿ ಸದಸ್ಯರಾಗಿಲ್ಲ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದ ಬಳಿಕವೇ ಸದಸ್ಯರ ಅಧಿಕಾರವಧಿ ಆರಂಭಗೊಳ್ಳಲಿದೆ. ಈಗ ಹೆಸರಿಗಷ್ಟೇ ಸದಸ್ಯರಾಗಿದ್ದು, ಯಾವ ಕೆಲಸ ಮಾಡಲಾಗದ ಸ್ಥಿತಿಯಲ್ಲಿ ಸದಸ್ಯರಿದ್ದಾರೆ. ಪರಿಣಾಮ ನಗರ ಸಂಸ್ಥೆಗಳು ಸಹ ಯಾವುದೇ ಕೆಲಸ ಕಾರ್ಯಗಳಿಗೆ ಮಾಡಲು ಸಾಧ್ಯವಾಗದೆ ಅತಂತ್ರವಾಗಿವೆ.

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next