Advertisement

Elder’s Diabetes: ಹಿರಿಯರ ಆರೋಗ್ಯ ಮತ್ತು ಮಧುಮೇಹ

09:04 AM Dec 17, 2023 | Team Udayavani |

ಮಧುಮೇಹವು ಬಹು ಆಯಾಮದ ಅನಾರೋಗ್ಯವಾಗಿದ್ದು, ವಂಶವಾಹಿ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅಂಶಗಳು ಇದಕ್ಕೆ ಕೊಡುಗೆ ನೀಡುತ್ತವೆ. ಅನಿಯಂತ್ರಿತ ಮಧುಮೇಹವು ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಿ ಆರೋಗ್ಯ ಆರೈಕೆಯ ವೆಚ್ಚಗಳ ಗಮನಾರ್ಹ ಹೆಚ್ಚಳವನ್ನು ಉಂಟು ಮಾಡುತ್ತದೆ. ಅಂತಾರಾಷ್ಟ್ರೀಯ ಮಧುಮೇಹ ಫೆಡರೇಶನ್‌ (ಐಡಿಎಫ್)ನ ಅಂಕಿಅಂಶಗಳ ಪ್ರಕಾರ ಜಾಗತಿಕವಾಗಿ 463 ದಶಲಕ್ಷ ಮಂದಿ ಮಧುಮೇಹದೊಂದಿಗೆ ಬದುಕುತ್ತಿದ್ದು, 2019ರಲ್ಲಿ 4.2 ದಶಲಕ್ಷ ಮಂದಿ ಇದರಿಂದಾಗಿ ಸಾವನ್ನಪ್ಪಿದ್ದಾರೆ. ವಯಸ್ಸು ಹೆಚ್ಚಿದಂತೆ ಮೇದೊಜೀರಕ ಗ್ರಂಥಿಗಳಲ್ಲಿ ಬೀಟಾ ಜೀವಕೋಶಗಳ ಕಾರ್ಯಚಟುವಟಿಕೆ ಕ್ಷೀಣಿಸುವುದರಿಂದ ಮೇದೋಜೀರಕ ಗ್ರಂಥಿಗಳ ಇನ್ಸುಲಿನ್‌ ಉತ್ಪಾದನೆಯ ಸಾಮರ್ಥ್ಯ ಕುಗ್ಗುವುದರಿಂದ ಮಧುಮೇಹವು ವಯಸ್ಕರಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತದೆ. ಮಧುಮೇಹ ಉಂಟಾಗಲು ಕೊಡುಗೆ ನೀಡುವ ಇತರ ಅಂಶಗಳೆಂದರೆ ಕಡಿಮೆ ದೈಹಿಕ ಚಟುವಟಿಕೆ ಮತ್ತು ಸ್ನಾಯು ಪರಿಮಾಣ ಕಡಿಮೆಯಾಗುವುದು.

Advertisement

65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಪ್ರಮಾಣವು ಶೇ. 22-23 ಆಗಿದ್ದು, ಇವರಲ್ಲಿ ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಸಕ್ಕರೆಯ ಅಂಶ ಭಾರೀ ಹೆಚ್ಚಳ ಸಾಮಾನ್ಯ ಸಮಸ್ಯೆಯಾಗಿರುತ್ತದೆ.

ವಯಸ್ಕರಲ್ಲಿ ಮಧುಮೇಹ ಸಂಬಂಧಿ ಸಮಸ್ಯೆಗಳು

ಹಿರಿಯ ವಯಸ್ಕರಲ್ಲಿ ಮಧುಮೇಹದಿಂದಾಗಿ ಕಾರ್ಯಚಟುವಟಿಕೆಯ ಸಾಮರ್ಥ್ಯ ಕುಗ್ಗುತ್ತದೆ ಮತ್ತು ಹಲವು ಸಹ ಅನಾರೋಗ್ಯಗಳಿಂದಾಗಿ ಆಸ್ಪತ್ರೆ ವಾಸದ ಅಪಾಯ ಹೆಚ್ಚುತ್ತದೆ. ಹಲವಾರು ಸಹ ಅನಾರೋಗ್ಯಗಳಿಂದಾಗಿ ಇಂತಹ ರೋಗಿಗಳು ಒಬ್ಬರಿಗಿಂತ ಹೆಚ್ಚು ಸಂಖ್ಯೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗಿ ಬರುತ್ತದೆ; ಇದರಿಂದಾಗಿ ಹಲವು ಔಷಧಗಳನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ, ಔಷಧಗಳು ಪರಸ್ಪರ ಪ್ರತಿಕ್ರಿಯಿಸುವ ಸಾಧ್ಯತೆಗಳು ಹೆಚ್ಚಬಹುದಾಗಿದ್ದು, ಈ ಅಂಶವನ್ನು ಹೆಚ್ಚು ಕೂಲಂಕಷವಾಗಿ ಗಮನಿಸಬೇಕಾಗಿರುತ್ತದೆ.

ಕೆಲವೊಮ್ಮೆ, ಹಲವು ಔಷಧಗಳನ್ನು ತೆಗೆದುಕೊಳ್ಳಬೇಕಾಗಿರುವ ಕಾರಣದಿಂದ ವೈದ್ಯಕೀಯ ಚಿಕಿತ್ಸೆಯನ್ನು ಯಥಾವತ್‌ ಪಾಲಿಸುವ ಸಂಭವ ಕಡಿಮೆಯಾಗುತ್ತದೆ – ಆದ್ದರಿಂದ ಔಷಧ ಪ್ರಮಾಣ-ಸಮಯ ಇತ್ಯಾದಿಗಳನ್ನು ಸರಳಗೊಳಿಸಬೇಕಾದ ಅಗತ್ಯ ಇರುತ್ತದೆ. ನ್ಯೂರೋಪಥಿ, ಸ್ನಾಯು ಕೀಣಗೊಳ್ಳುವುದು ಮತ್ತು ದೃಷ್ಟಿ ಶಕ್ತಿ ನಷ್ಟದಿಂದಾಗಿ ಹಿರಿಯರು ಬೀಳುವ ಮತ್ತು ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕಡಿಮೆ ಚಲನ ಸಾಮರ್ಥ್ಯ, ದೃಷ್ಟಿ ಮತ್ತು ಶ್ರವಣ ಶಕ್ತಿ ನಷ್ಟದಿಂದಾಗಿ ಇತರರ ಮೇಲೆ ಅವರ ಅವಲಂಬನೆ ಹೆಚ್ಚುತ್ತದೆ. ಆದ್ದರಿಂದ ನಮ್ಮ ವಯೋವೃದ್ಧ ಮಧುಮೇಹಿಗಳಿಗೆ ಉತ್ತಮ ಸಾಮಾಜಿಕ ವಾತಾವರಣವನ್ನು ನಾವು ಕಲ್ಪಿಸಬೇಕಾಗಿದೆ. ಈ ಹಿರಿಯ ರೋಗಿಗಳು ಮೂತ್ರಾಂಗ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಪದೇಪದೆ ಆಸ್ಪತ್ರೆ ಭೇಟಿಗೆ ಇದು ಕಾರಣವಾಗುತ್ತದೆ. ಈ ಹಿರಿಯ ರೋಗಿಗಳು ಹೈಪೊಗ್ಲೆ„ಸೇಮಿಯಾ (ರಕ್ತದಲ್ಲಿ ಸಕ್ಕರೆಯಂಶ ಕುಸಿಯುವುದು)ಕ್ಕೆ ತುತ್ತಾಗುವ ಸಾಧ್ಯತೆಗಳು ಕೂಡ ಅಧಿಕವಿದ್ದು, ಇದರಿಂದ ಮಧುಮೇಹ ನಿಯಂತ್ರಣದ ಗುರಿಗಳನ್ನು ಸಾಧಿಸುವುದು ಕಷ್ಟವಾಗುತ್ತದೆ.

Advertisement

ಚಿಕಿತ್ಸೆಯ ಗುರಿಗಳು

ಹಿರಿಯರಲ್ಲಿ ಮಧುಮೇಹ ಚಿಕಿತ್ಸೆಯ ಗುರಿಗಳು ಕಿರಿಯ ಮಧುಮೇಹ ರೋಗಿಗಳಂತೆಯೇ ಇರುತ್ತವೆ. ಖಾಲಿ ಹೊಟ್ಟೆಯಲ್ಲಿ ರಕ್ತದಲ್ಲಿ ಸಕ್ಕರೆಯಂಶ 80-100 ಎಂಜಿ/ಡಿಎಲ್‌ ಮತ್ತು ಆಹಾರ ಸೇವನೆಯ ಬಳಿಕ ರಕ್ತದಲ್ಲಿ ಸಕ್ಕರೆಯಂಶವು 100-160 ಎಂಜಿ/ಡಿಎಲ್‌ ಇರಬೇಕು. ಎಚ್‌ಬಿಎ1ಸಿ ಪ್ರಮಾಣವನ್ನು ಶೇ. 7ರ ಒಳಗೆ ಇರಿಸಿಕೊಳ್ಳುವ ಗುರಿ ಹೊಂದಿರಬೇಕು. ಆದರೆ ದುರ್ಬಲರಾದ ವಯೋವೃದ್ಧ ಹಿರಿಯರು ಮತ್ತು ಬಹು ಸಹ ಅನಾರೋಗ್ಯಗಳನ್ನು ಹೊಂದಿರುವವರಿಗೆ ಈ ಗುರಿಗಳನ್ನು ಕೊಂಚ ಸಡಿಲಿಸಬಹುದು; ಎಚ್‌ಬಿಎ1ಸಿ ಪ್ರಮಾಣವು ಶೇ. 7.5-8.0ಕ್ಕಿಂತ ಕಡಿಮೆ ಮತ್ತು ಆಹಾರ ಸೇವ ನೆಯ ಬಳಿಕ ರಕ್ತದಲ್ಲಿ ಸಕ್ಕರೆಯಂಶವು 180 ಎಂಜಿ/ಡಿಎಲ್‌ಗಿಂತ ಕಡಿಮೆ ಇದ್ದರೆ ಸಾಕು.

ಶಿಫಾರಸುಗಳ ಸಾರಾಂಶ

ವಯೋವೃದ್ಧ ಮಧುಮೇಹಿಗಳಲ್ಲಿ ಕಾರ್ಯಚಟುವಟಿಕೆಗಳ ಸಾಮರ್ಥ್ಯ ಮತ್ತು ಇಂದ್ರಿಯ ಗ್ರಹಣಾತ್ಮಕ ಚಟುವಟಿಕೆಗಳನ್ನು ತಪಾಸಣೆಗೆ ಒಳಪಡಿಸಿ ವಿಶ್ಲೇಷಿಸಬೇಕು. ಈ ರೋಗಿಗಳಲ್ಲಿ ಅವರ ವೈಯಕ್ತಿಕ ಅಗತ್ಯಗಳು ಮತ್ತು ಗುರಿಗಳನ್ನು ಆಧರಿಸಿ ಚಿಕಿತ್ಸೆಯ ಯೋಜನೆಗಳನ್ನು ಸರಳ ಮತ್ತು ವ್ಯಕ್ತಿನಿರ್ದಿಷ್ಟಗೊಳಿಸಬೇಕು. ಹೈಪೊಗ್ಲೈಸೇಮಿಯಾ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ಔಷಧ ಚಿಕಿತ್ಸೆಯನ್ನು ರೂಪಿಸಬೇಕು. ರೋಗಿಯ ರಕ್ತದ ಸಕ್ಕರೆಯಂಶದ ಮೇಲೆ ಸತತ ನಿಗಾ ಇರಿಸಲು ಮತ್ತು ಸಂಕೀರ್ಣ ಸಮಸ್ಯೆಗಳು ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ಕುಟುಂಬ ಮತ್ತು ಆರೈಕೆದಾರರಿಗೆ ಅರಿವು ಮೂಡಿಸಬೇಕು.

ಮುನ್ನೆಚ್ಚರಿಕೆಗಳು

  1. ಹೈಪೊಗ್ಲೈಸೇಮಿಯಾ ಉಂಟಾಗದಂತೆ ಮುನ್ನೆಚ್ಚರಿಕೆಗಳು
  •  ಹೈಪೊಗ್ಲೈಸೇಮಿಯಾ ಉಂಟಾಗುವುದನ್ನು ತಡೆಯಲು ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು.
  •  ರಾತ್ರಿ ಕಾಲದಲ್ಲಿ ಹೈಪೊಗ್ಲೈಸೇಮಿಯಾ ಉಂಟಾಗದಂತೆ ಕಾಪಾಡಿಕೊಳ್ಳುವ ಸಲುವಾಗಿ ಮಲಗುವುದಕ್ಕೆ ಮುನ್ನ ಹಾಲು, ಬಿಸ್ಕತ್ತು, ಹಣ್ಣುಗಳನ್ನು ಸೇವಿಸಬೇಕು.
  1. ರಕ್ತದಲ್ಲಿ ಸಕ್ಕರೆಯಂಶ ಪದೇಪದೆ ಏರುಪೇರಾಗುವ ರೋಗಿಗಳು ಸಿಜಿಎಸ್‌ಎಂ (ಕಂಟಿನ್ಯೂವಸ್‌ ಗ್ಲುಕೋಸ್‌ ಮಾನಿಟರಿಂಗ್‌ ಸಿಸ್ಟಮ್‌) ಸಹಾಯ ಪಡೆಯಬೇಕು.
  2. ಔಷಧ ಸೇವನೆಯಲ್ಲಿ ತಪ್ಪುಗಳಾಗುವುದನ್ನು ತಡೆಯಲು ಸಂಕೀರ್ಣ ಔಷಧ ಸೂತ್ರಗಳನ್ನು ಅವಲಂಬಿಸಬಾರದು.
  3. ಸಾಮಾಜಿಕ ನೆರವು ಪಡೆಯಬೇಕು.
  4. ದೇಹದ ಇತರ ವ್ಯವಸ್ಥೆಗಳ ತಪಾಸಣೆ
  • ಹೃದಯ ತಪಾಸಣೆ
  •  ಮಧುಮೇಹಿ ರೆಟಿನೋಪಥಿ ಮತ್ತು ಕ್ಯಾಟರ್ಯಾಕ್ಟ್ ಉಂಟಾಗುವುದನ್ನು ತಡೆಯಲು ನೇತ್ರಗಳ ತಪಾಸಣೆ.
  1. ವೈದ್ಯಕೀಯ ಚಿಕಿತ್ಸೆ
  •  ಹೈಪೊಗ್ಲೈಸೇಮಿಯಾಕ್ಕೆ ಕಾರಣವಾಗುವ ಔಷಧಗಳಿಗೆ ಬದಲಾಗಿ ಹೈಪೊಗ್ಲೈಸೇಮಿಯಾ ಉಂಟುಮಾಡದ ಮೆಟ್‌ಮಾರ್ಫಿನ್‌, ಗ್ಲಿಪ್ಟಿನ್‌ನಂತಹ ಔಷಧಗಳನ್ನು ಉಪಯೋಗಿಸಬೇಕು.
  •  ಗ್ಲೈಸೇಮಿಕ್‌ ವ್ಯತ್ಯಯ ಸಾಧ್ಯತೆ ಕಡಿಮೆ ಇರುವ (ಗ್ಲೈಸೇಮಿಕ್‌ ವೇರಿಯೇಬಿಲಿಟಿ-ಜಿವಿ) ಔಷಧಗಳಿಗೆ ಆದ್ಯತೆ ನೀಡಬೇಕು.

-ಡಾ| ಹರೂನ್‌ ಎಚ್‌.,

ಕನ್ಸಲ್ಟಂಟ್‌ ಇಂಟರ್ನಲ್‌ ಮೆಡಿಸಿನ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next