Advertisement

ಹಿರಿಯರ ಅಹವಾಲು: 17 ಪ್ರಕರಣ ಇತ್ಯರ್ಥ

09:44 AM Jul 06, 2019 | Team Udayavani |

ಧಾರವಾಡ: ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕ್ಷೇಮಾಭಿವೃದ್ಧಿ ನ್ಯಾಯ ಮಂಡಳಿ ಕಳೆದ ಒಂದು ವರ್ಷದ ಅವಧಿಯಲ್ಲಿ 29 ಪ್ರಕರಣಗಳನ್ನು ದಾಖಲಿಸಿಕೊಂಡು 17 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಆದೇಶ ಹೊರಡಿಸಿದೆ. ಇನ್ನೂ12 ಪ್ರಕರಣಗಳ ವಿಚಾರಣೆ ಹಂತದಲ್ಲಿದ್ದು, ಈ ಪೈಕಿ ಒಂದಿಷ್ಟು ಪ್ರಕರಣಗಳ ಮಾಹಿತಿ ಇಲ್ಲಿದೆ.

ಭಕ್ಷೀಸ್‌ ಪತ್ರ ರದ್ದು:
ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಬಸವ್ವ ಬಸಯ್ಯ ನಾಗಯ್ಯನವರ ಉಫರ್ ಜಂಗಮಗೌಡ್ರ ಅವರು ತಮ್ಮ ಮಗಳು ಸವದತ್ತಿ ತಾಲೂಕು ಕರಿಕಟ್ಟಿಯ ಈರವ್ವ ವಿರೂಪಾಕ್ಷಯ್ಯ ಫಕೀರಸ್ವಾಮಿಮಠ ವಿರುದ್ಧ 2018 ಜು. 2ರಂದು ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. 81 ವರ್ಷದ ಬಸವ್ವಳ ಆರೋಗ್ಯ ಸ್ಥಿತಿ ಸರಿ ಇಲ್ಲದ ಸಂದರ್ಭದಲ್ಲಿ ಆರೈಕೆ ಮಾಡಲು ಬಂದ ಮಗಳು ಮತ್ತು ಅಳಿಯ ಶಿವಳ್ಳಿ ಗ್ರಾಮದಲ್ಲಿದ್ದ 2 ಎಕರೆ 23 ಗುಂಟೆ ಹಾಗೂ ಮಾರಡಗಿ ಗ್ರಾಮದ 5 ಎಕರೆ 22 ಗುಂಟೆ ಜಮೀನನ್ನು 2018ರ ಮೇ 9ರಂದು ಭಕ್ಷೀಸ್‌ ನೋಂದಣಿ ಪತ್ರ ಮಾಡಿಸಿಕೊಂಡು ಬಿಟ್ಟಿದ್ದರು. ದೃಷ್ಟಿ, ಶ್ರವಣ ದೋಷಗಳೊಂದಿಗೆ ಮುಪ್ಪಾವಸ್ಥೆಯಲ್ಲಿ ರುವ ತಮಗೆ ಈ ಆಸ್ತಿಗಳನ್ನು ಮರಳಿ ವರ್ಗಾಯಿಸಿ ಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ್‌ ಅವರು ವಾದಿ-ಪ್ರತಿವಾದಿಗಳ ವಾದ ಆಲಿಸಿದ ಬಳಿಕ ಭಕ್ಷೀಸ್‌ ನೋಂದಣಿ ಪತ್ರಗಳನ್ನು ರದ್ದುಗೊಳಿಸಿ, ಸೂಕ್ತ ತಿದ್ದುಪಡಿ ಮಾಡಲು ಕಳೆದ ಮೇ 24ರಂದು ಆದೇಶ ಹೊರಡಿಸಿದ್ದಾರೆ. ಇದರಿಂದ ಇಳಿವಯಸ್ಸಿನಲ್ಲಿರುವ ಬಸವ್ವ ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮಗನಿಗೆ ತಕ್ಕ ಪಾಠ:
ಹುಬ್ಬಳ್ಳಿಯ ಜೋಳದ ಓಣಿಯ ಗುರುನಾಥ ಯಮನಸಾ ಜರತಾರಘರ್‌ ಅವರು ಮಗ ಗಣಪತಿ ಹಾಗೂ ಸೊಸೆ ಅಕ್ಷತಾ ತಮ್ಮನ್ನು ಸರಿಯಾಗಿ ಪಾಲನೆ-ಪೋಷಣೆ ಮಾಡುತ್ತಿಲ್ಲ. ಜೊತೆಗೆ ಸುಳ್ಳು ವರದಕ್ಷಿಣೆ ಕಿರುಕುಳ ದಾಖಲಿಸಲು ಘಂಟಿಕೇರಿ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ಊಟ-ಉಪಹಾರ ನೀಡದೇ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳ ಮೂಲಕವೂ ಅವಹೇಳನ ಮಾಡುತ್ತಿದ್ದರು. ತಮ್ಮ ಸ್ವಂತ ದುಡಿಮೆಯಿಂದ ಕಟ್ಟಿದ ಮನೆಯಲ್ಲಿ ವಾಸವಾಗಿರಲು ಬಿಡದೇ ಹೊರ ಹಾಕುತ್ತಿದ್ದಾರೆ ಎಂದು 2018ರ ಜು. 24ರಂದು ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿಗಳು ಮಗ ಹಾಗೂ ಸೊಸೆ ಸಂಪೂರ್ಣವಾಗಿ ತಂದೆ-ತಾಯಿಗೆ ಮನೆ ಬಿಟ್ಟು ಕೊಟ್ಟು ಬೇರೆಡೆ ವಾಸವಿರಬೇಕು. ಯಾವುದೇ ರೀತಿಯ ತೊಂದರೆ, ಕಿರುಕುಳ, ಅವಹೇಳನ ಮಾಡಬಾರದು. ಈ ಕೃತ್ಯಗಳು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಆದೇಶವನ್ನು 2018ರ ಸೆ. 4ರಂದು ಹೊರಡಿಸಿದ್ದಾರೆ.
5 ಮಾಸಿಕ ಭತ್ಯೆ ನೀಡಲು ಸೂಚನೆ:
ಹುಬ್ಬಳ್ಳಿಯ ವೀರಾಪುರ ಓಣಿಯ ಮಹಾರುದ್ರಪ್ಪ ಮಲ್ಲಪ್ಪ ಬಡಕಲ್ಲ ಅವರು ತಮ್ಮ ಮಗ ಕುಂದಗೋಳ ತಾಲೂಕು ಗುರುವಿನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವಿನಾಯಕ ಅವರ ವಿರುದ್ಧ 2017ರ ಡಿ. 30ರಂದು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ಮಗ ಸರ್ಕಾರಿ ಸೇವೆಯಲ್ಲಿದ್ದು ದುಡಿಯಲಾಗದ ತಂದೆ-ತಾಯಿಗಳ ಆರೈಕೆ ಮಾಡದೇ ನಿರ್ಲಕ್ಷಿಸಿದ್ದಾನೆ. ವಯೋವೃದ್ಧರಾದ ನಮಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಹಾಗೂ ದೈನಂದಿನ ಜೀವನ ಸಾಗಿಸಲು ತೊಂದರೆಯಾಗುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು. ವಾದ-ಪ್ರತಿವಾದ ಆಲಿಸಿದ ಉಪವಿಭಾಗಾಧಿಕಾರಿ ಶಿಕ್ಷಕ ಸೇವೆಯಲ್ಲಿರುವ ಮಗನು ತಂದೆ ಹಾಗೂ ತಾಯಿಗೆ ತಲಾ 2,500 ರೂ.ದಂತೆ ಮಾಸಿಕ ಒಟ್ಟು 5 ಸಾವಿರ ರೂ. ಪಾಲನೆ-ಪೋಷಣೆ ಭತ್ಯೆಯನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮೆ ಮಾಡಬೇಕೆಂದು 2018ರ ಸೆ. 9ರಂದು ಆದೇಶ ನೀಡಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next