ಕೋಲಾರ: ಅಸ್ತಮಾ ಸಮಸ್ಯೆಯಿಂದ ನರಳುತ್ತಿದ್ದ ವೃದ್ಧರನ್ನು ಜಿಲ್ಲಾ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆ ಸಿಬ್ಬಂದಿ ವಾರ್ಡ್‌ನಿಂದ ಹೊರ ಹಾಕಿದ ಅಮಾನವೀಯ ಘಟನೆ ಜರುಗಿದೆ.
ಶ್ರೀನಿವಾಸಪುರ ತಾಲೂಕಿನ ಪಾತೂರು ಗ್ರಾಮದ ಪಿ.ಎಸ್.ಬಯ್ಯಾರೆಡ್ಡಿ ಮತ್ತು ಪಾರ್ವತಮ್ಮ ದಂಪತಿಗಳ ಮೇಲೆ ಎಸ್.ಎನ್.ಆರ್ ಆಸ್ಪತ್ರೆಯ ಸಿಬ್ಬಂದಿ ದಬ್ಟಾಳಿಕೆ ನಡೆಸಿ ವಾರ್ಡ್‌ನಿಂದ ಹೊರಕ್ಕೆ ಕಳುಹಿಸಿದ್ದು, ದಂಪತಿಗಳು ದಿಕ್ಕು ತೋಚದೆ ಆಸ್ಪತ್ರೆ ವಾರ್ಡ್‌ನ ಹೊರ ಕುಳಿತು ಕಣ್ಣೀರು ಹಾಕಿದರು.
ಶ್ರೀನಿವಾಸಪುರ ತಾಲೂಕಿನ ಪಾತೂರು ಗ್ರಾಮದ ವೃದ್ಧ ಬಯ್ಯಾರೆಡ್ಡಿ ಅಸ್ತಮಾ ರೋಗದಿಂದ ನರಳುತ್ತಿದ್ದು, ಒಂದು ವಾರದ ಹಿಂದೆ ತನ್ನ ಪತ್ನಿ ಪಾರ್ವತಮ್ಮರ ಜತೆಗೆ ಬಂದು ಎಸ್‌ಎನ್‌ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ದಾಖಲಾಗಿದ್ದರು. ಆರಂಭದಲ್ಲಿ ಆಸ್ಪತ್ರೆಯಲ್ಲಿ ಒಂದಷ್ಟು ಚಿಕಿತ್ಸೆ ದೊರೆಯಿತಾದರೂ, ನಾಲ್ಕೈದು ವಾರ್ಡ್‌ಗಳನ್ನು ಬದಲಾಯಿಸುವಂತೆ ಸಿಬ್ಬಂದಿ ಹೇಳುತ್ತಲೇ ಇದ್ದರು. ಒಂದೇ ವಾರ್ಡ್‌ನಲ್ಲಿ ಇರದ ಕಾರಣದಿಂದ ಅಸ್ತಮಾ ರೋಗಿ ಬಯ್ನಾರೆಡ್ಡಿಗೆ ಸೂಕ್ತ ಚಿಕಿತ್ಸೆಯೂ ಸಿಕ್ಕಿರಲಿಲ್ಲ. ದಿನಕ್ಕೊಂದು ಸೂಜಿಮದ್ದು ಚುಚ್ಚಿ ಹೋಗುತ್ತಿದ್ದ ಸಿಬ್ಬಂದಿ ಆನಂತರ ನಿಮ್ಮ ಪಾಡೇನು ಎಂದು ವಿಚಾರಿಸುತ್ತಿರಲಿಲ್ಲ ಎಂದು ವಾರ್ಡ್ ಬದಿ ಕುಳಿತ ವೃದ್ಧರು ವಿವರಿಸಿದರು. ಇದೇ ಅವಧಿಗೆ ಖಾಲಿ ಹುದ್ದೆ ತುಂಬಬೇಕು, ಸೇವಾ ಕಾಯಂಮಾತಿ, ವೇತನ ಹೆಚ್ಚಳ ಮತ್ತಿತರ ಬೇಡಿಕೆ ಇಟ್ಟುಕೊಂಡು ಆಸ್ಪತ್ರೆಯ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದರು.
ಆಸ್ಪತ್ರೆಯ ವಾರ್ಡ್ ಗಳಲ್ಲಿ ರೋಗಿಗಳಿದ್ದರೆ ಚಿಕಿತ್ಸೆ ಮಾಡಬೇಕಾಗುತ್ತದೆ, ಅನಾಹುತವಾದರೆ ಕಷ್ಟ ಎಂದು ಒಳರೋಗಿಗಳನ್ನು ಆಸ್ಪತ್ರೆ ಬಿಟ್ಟು ಹೋಗುವಂತೆ ನಾಲ್ಕೈದು ದಿನ ಗಳಿಂದಲೂ ತಾಕೀತು ಮಾಡಿದ್ದರು. ಉಬ್ಬಸದಿಂದ ನರಳುತ್ತಿದ್ದ ಬಯ್ನಾರೆಡ್ಡಿ ಬೇರೆ ಆಸ್ಪತ್ರೆಗೆ ಆರ್ಥಿಕ ಸೌಕರ್ಯವಿಲ್ಲದೆ ಆಸ್ಪತ್ರೆಯಲ್ಲಿಯೇ ಉಳಿದು ಕೊಂಡಿದ್ದರು. ಶನಿವಾರ ಬೆಳಗ್ಗೆ ಬಂದ ಸಿಬ್ಬಂದಿ ಎಸ್‌ಎನ್‌ಆರ್ ಆಸ್ಪತ್ರೆಯ ಹಳೇ ಕಟ್ಟಡದ 40ನೇ ವಾರ್ಡ್‌ನಲ್ಲಿದ್ದ ಬಯ್ಯಾರೆಡ್ಡಿ, ಪಾರ್ವತಮ್ಮರನ್ನು ವಾರ್ಡ್ ಸ್ವತ್ಛ ಗೊಳಿಸಬೇಕು ಹೊರ ಹೋಗುವಂತೆ ಸೂಚಿಸಿದ್ದಾರೆ. ಯಾವ ವಾರ್ಡಿಗೆ ಹೋಗಬೇಕೆಂದು ತಿಳಿಸಿಲ್ಲ. ಹೀಗಾಗಿ ವಾರ್ಡ್ ಖಾಲಿ ಮಾಡಿದರೂ ವಾರ್ಡ್ ಮುಂಭಾಗ ಕುಳಿತರು. ಆಸ್ಪತ್ರೆಸಿಬ್ಬಂದಿಯನ್ನು ಬಗೆಬಗೆಯಾಗಿ ಬೇಡಿಕೊಂಡರೂ ಯಾರೂ ವಾರ್ಡ್ ಮತ್ತು ಬೆಡ್ ತೋರಿಸಲಿಲ್ಲ. ತಮ್ಮ ಪುತ್ರ ಶನಿವಾರ ಅಥವಾ ಭಾನುವಾರ ಮಧ್ಯಾಹ್ನ ಬರುತ್ತಾನೆ ಆನಂತರ ನಿರ್ಧಾರ ತೆಗೆದುಕೊಂಡು ಆಸ್ಪತ್ರೆಯಿಂದ ಹೋಗುತ್ತೇವೆ ಅಲ್ಲಿಯವರೆಗಾದರೂ ಆಸ್ಪತ್ರೆಯಲ್ಲಿರಲು ಅವಕಾಶ ನೀಡಿ ಎಂದು ಬೇಡಿಕೊಂಡರು.
ಬೇಡಿದರೆ ಜೋರಾಗಿ ಮಾತನಾಡಬೇಡ ಎಂದು ಬಯ್ನಾರೆಡ್ಡಿಯನ್ನು ಆಸ್ಪತ್ರೆ ಸಿಬ್ಬಂದಿ ಗದರಿಸಿದ್ದರು ಎಂದರು. ಅಲ್ಲಿನ ಒಳರೋಗಿಗಳು ಮತ್ತವರ ಸಂಬಂಧಿಕರು ಆಸ್ಪತ್ರೆಯ ರೋಗಿಗಳ ಸ್ಥಿತಿಗತಿ, ಸಿಬ್ಬಂದಿಯ ನಿರ್ಲಕ್ಷ್ಯ ಕುರಿತಂತೆ ದೊಡ್ಡ ಮಟ್ಟದ ಆರೋಪಗಳನ್ನೇ ಮಾಡುತ್ತಲೇ ಇದ್ದರು. ಹಿರಿಯ ವೈದ್ಯಾಧಿಕಾರಿಗಳು ಹಬ್ಬದ ಕಾರಣ ಆಸ್ಪತ್ರೆಯಲ್ಲಿರಲಿಲ್ಲ.
ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿದರೆ ರೋಗಿಗಳು ಇಲ್ಲಿಯೇ ಠಿಕಾಣಿ ಹೂಡಿಬಿಡುತ್ತಾರೆಂದು ಸಿಬ್ಬಂದಿ ರೋಗಿಗಳನ್ನು ಇನ್ನಿಲ್ಲದಂತೆ ಕಾಡುವುದು ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಮಾಮೂಲಾಗಿದೆ. ಈಗ ಮುಷ್ಕರ ಕಾರಣ ರೋಗಿಗಳನ್ನು ಆಸ್ಪತ್ರೆ ಬಿಟ್ಟು ಹೋಗುವಂತೆ ತಾಕೀತುಮಾಡುತ್ತಿರುವ ಬಗ್ಗೆ ವೈದ್ಯಾಧಿಕಾರಿಗಳು, ಜಿಲ್ಲಾಡಳಿತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ರೋಗಿಗಳ ನೆರವಿಗೆ ಬರಬೇಕು.
-ಮುನಿಯಪ್ಪ, ಸಾರ್ವಜನಿಕ, ಕೋಲಾರ
ಆಸ್ಪತ್ರೆ ಸಿಬ್ಬಂದಿ ಮುಷ್ಕರಿಂದ ಸಮಸ್ಯೆಗಳು ಉದ್ಭವವಾಗುತ್ತಿದೆ. ಮುಷ್ಕರದಿಂದಾಗಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರು ತ್ತಿದ್ದಾರೆ. ಇಂಥ ಘಟನೆಗಳು ಆಗದಂತೆ ಎಚ್ಚರವಹಿಸಲು ಪ್ರಯತ್ನಿಸುತ್ತೇವೆ. ಆಸ್ಪತ್ರೆಗೆ ಬಂದ ಮೇಲೆ ವೃದ್ಧ ದಂಪತಿಗಳ ಸಮಸ್ಯೆಯನ್ನು ಬಗೆಹರಿಸುತ್ತೇನೆ.
-ಡಾ.ಎಸ್.ಎನ್.ವಿಜಯಕುಮಾರ್, ಎಸ್‌ಎನ್‌ಆರ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕರು