Advertisement

ನಾಯಕಿ ಮೇಲೆ ಹಿರಿಯರ ಮುನಿಸು

12:25 PM Jul 05, 2018 | Team Udayavani |

ವಿಧಾನ ಪರಿಷತ್ತು: ಸಭಾನಾಯಕಿ ನೇಮಕ ವಿಚಾರದಲ್ಲಿ ಪಕ್ಷದ ನಾಯಕತ್ವದ ವಿರುದ್ಧವೇ ಮುನಿಸಿಕೊಂಡಿರುವ ಹಿರಿಯ ಕಾಂಗ್ರೆಸ್‌ ಸದಸ್ಯರು ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನದಲ್ಲಿ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಮೊಗಸಾಲೆಗೆ ಬಂದರೂ ಕಲಾಪಕ್ಕೆ ಬಾರದೆ ದೂರ ಉಳಿಯುವ ಮೂಲಕ ತಮ್ಮ ಅಸಹಾಕಾರ ತೋರ್ಪಡಿಸುತ್ತಿದ್ದಾರೆ.

Advertisement

ಕಾಂಗ್ರೆಸ್‌ನ ಹಿರಿಯ ಸದಸ್ಯರ ಪೈಕಿ ಎಸ್‌.ಆರ್‌. ಪಾಟೀಲ್‌, ಪ್ರತಾಪಚಂದ್ರ ಶೆಟ್ಟಿ ಹೊರತುಪಡಿಸಿದರೆ ಬೇರೆ “ಹಿರಿಯರು’ ಕಲಾಪದಲ್ಲಿ ಅಷ್ಟೇನೂ ಆಸಕ್ತಿ ತೋರುತ್ತಿರುವಂತೆ ಕಾಣಲಿಲ್ಲ. ಮುಖ್ಯವಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮೇಲ್ಮನೆಯಲ್ಲಿ ಆಡಳಿತ ಪಕ್ಷದ ಪ್ರಬಲ “ಡಿಫೆಂಡರ್‌’ ಎಂದು ಹೇಳಲಾಗುತ್ತಿದ್ದ ವಿ.ಎಸ್‌.ಉಗ್ರಪ್ಪ, ಎಚ್‌.ಎಂ.ರೇವಣ್ಣ ಸಹ ಈಗ ಮೌನವಾಗಿದ್ದಾರೆ. ಕಳೆದೆರಡು ದಿನಗಳಿಂದ ಇಬ್ಬರೂ ಕಲಾಪದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ.

ಇಕ್ಬಾಲ್‌ ಅಹ್ಮದ್‌ ಸರಡಗಿ, ಕೆ.ಸಿ.ಕೊಂಡಯ್ಯ ಮೊದಲ ದಿನದಿಂದಲೂ ಕಾಣಿಸಿಕೊಂಡಿಲ್ಲ. ಅಲ್ಲಂ ವೀರ ಭದ್ರಪ್ಪ ಬುಧವಾರ ಸದನಕ್ಕೆ ಬಂದಿದ್ದರು. ಸಿ.ಎಂ. ಇಬ್ರಾಹಿಂ ತಡವಾಗಿ ಬಂದರೂ, ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಎಸ್‌.ಆರ್‌. ಪಾಟೀಲ್‌, ಪ್ರತಾಪ ಚಂದ್ರ ಶೆಟ್ಟಿ ಇವರಿಬ್ಬರೂ ಮಾತ್ರ ಕಲಾಪ ಆರಂಭವಾಗಿ ಮುಗಿಯವ ತನಕ ಸದನದಲ್ಲಿ ಇರುತ್ತಾರೆ. 

ಸಮರ್ಥನೆಗೆ “ಜಿಪುಣತನ’: ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದಾಗ, ಪಕ್ಷದ ಮುಖಂಡರನ್ನು ವೈಯುಕ್ತಿಕವಾಗಿ ಟೀಕಿಸಿದಾಗ ಪ್ರತಿಪಕ್ಷಕ್ಕೆ ತಿರುಗೇಟು ಕೊಟ್ಟು ಆಡಳಿತ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲೂ ಹಿರಿಯ ಸದಸ್ಯರು “ಜಿಪುಣತನ’ ತೋರಿಸಿದಂತೆ ಕಾಣುತ್ತಿದೆ. ಕಾಂಗ್ರೆಸ್‌ ಪಕ್ಷದಿಂದ ಕಿರಿಯರಾದ ಐವಾನ್‌ ಡಿಸೋಜಾ, ಧರ್ಮಸೇನಾ, ನಾರಾಯಣಸ್ವಾಮಿ, ಶರಣಪ್ಪ ಮಟ್ಟೂರು, ಪ್ರಸನ್ನಕುಮಾರ, ಗೋಪಾಲಸ್ವಾಮಿ, ರಘು ಆಚಾರ್‌ ಆಡಳಿತ ಪಕ್ಷವನ್ನು ಸಮರ್ಥಿಸಿಕೊಳ್ಳವಲ್ಲಿ ಮುಂಚೂಣಿಯಲ್ಲಿದ್ದಾರೆ. 

ಜೆಡಿಎಸ್‌ನಿಂದ ಟಿ.ಎ ಶರವಣ, ಮೊದಲ ಬಾರಿಗೆ ಆಯ್ಕೆಯಾಗಿರುವ ಭೋಜೇಗೌಡ ಎದ್ದು ನಿಲ್ಲುತ್ತಾರೆ. ಸಚಿವ ಕೃಷ್ಣ ಬೈರೇಗೌಡ ಬುಧವಾರ ಇಡೀ ದಿನ ಸಭಾನಾಯಕಿ ಜಯಮಾಲಾ ಅವರ ನೆರವಿಗೆ ನಿಂತಿದ್ದು ವಿಶೇಷ. ಬುಧವಾರ ಮಧ್ಯಾಹ್ನ 12.30ರ ವೇಳೆಗೆ ಸದನಕ್ಕೆ ಬಂದ ಎಚ್‌.ಎಂ. ರೇವಣ್ಣ ಕೆಲ ಹೊತ್ತಿನ ನಂತರ ಸಚಿವ ಜಾರ್ಜ್‌ ಅವರೊಂದಿಗೆ ಹೊರನಡೆದರು. ವಿಧಾನಪರಿಷತ್ತಿನ ಮೊಗಸಾಲೆಯಲ್ಲಿ ಕಾಣಿಸಿಕೊಂಡ ವಿ.ಎಸ್‌. ಉಗ್ರಪ್ಪ ಸದನದ ಒಳಗೆ ಬಂದಿಲ್ಲ.

Advertisement

ಆದರೆ, ಮಧ್ಯಾಹ್ನದ ನಂತರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ತರ ನೀಡುವಾಗ ವಿ.ಎಸ್‌. ಉಗ್ರಪ್ಪ ಸದನದಲ್ಲಿ ಹಾಜರಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಕಡತ
ಸಮೇತ ಸದನಕ್ಕೆ ತಂದು ಓದಿದರು.

ಜಿಟಿಡಿ ಸಹಕಾರ ಸಚಿವ..!
ಸದನಕ್ಕೆ ಹೊಸ ಸಚಿವರನ್ನು ಪರಿಚಯಿಸುವಾಗ ಸಹಕಾರ ಸಚಿವ ಜಿ.ಟಿ ದೇವೇಗೌಡರು ಮೊದಲ ಬಾರಿಗೆ ಸದನಕ್ಕೆ ಬಂದಿದ್ದಾರೆ ಎಂದು ಪರಿಚಯಿಸಿ ಸಭಾನಾಯಕಿ ಡಾ. ಜಯಾಮಾಲ ಮುಜುಗರಕ್ಕೊಳಗಾದ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತು. ಜಿ.ಟಿ. ದೇವೇಗೌಡರನ್ನು ಸಹಕಾರ ಸಚಿವರು ಎಂದು ಹೇಳುತ್ತಿದ್ದಂತೆ ಎಲ್ಲ ಸದಸ್ಯರು ಮೇಡಂ ಅವರು ಉನ್ನತ ಶಿಕ್ಷಣ ಸಚಿವರು ಎಂದು ಹೇಳಿದರು. ಇಲ್ಲ ಸಭಾನಾಯಕರು ಸರಿಯಾಗಿಯೇ ಹೇಳಿದ್ದಾರೆ. ಜಿ.ಟಿ. ದೇವೇಗೌಡರು ಸಹಕಾರ ಖಾತೆಯನ್ನೇ ಕೇಳಿದ್ದರು ಎಂದು ಕಾಲೆಳೆದರು. ಅವರು ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ
ಮಾಡಿದ್ದಾರೆ. ಹಾಗಾಗಿ ಅವರ ಹೆಸರು ಬಂದಾಗಲೆಲ್ಲ ಸಹಕಾರ ಕ್ಷೇತ್ರವೇ ನೆನಪಾಗುತ್ತದೆ ಎಂದು ಜೆಡಿಎಸ್‌-ಕಾಂಗ್ರೆಸ್‌ ಸದಸ್ಯರು ಸಮಜಾಯಿಷಿ ನೀಡಿದರು. ಜಿ.ಟಿ. ದೇವೇಗೌಡರು ಹಿಂದೆ ಸಹಕಾರ ಸಚಿವರಾಗಿದ್ದಾಗಿನ ಕಾಪಿ ಓದುತ್ತಿದ್ದೀರಾ ಎಂದು ಸಭಾಪತಿ ಹೊರಟ್ಟಿ ಹೇಳಿದರು. ಯಾಕೆ ಈ ರೀತಿ ತಪ್ಪು ಮಾಡುತ್ತೀರಾ ಎಂದು ಜಯಾಮಾಲ ಆಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದರು 

ಕೈ-ದಳ-ಬಿಎಸ್ಪಿ ಸಮ್ಮಿಶ್ರ ಸರ್ಕಾರ
ಇದೇ ವೇಳೆ ಸಭಾನಾಯಕರು ಪ್ರಾಥಮಿಕ ಶಿಕ್ಷಣ ಸಚಿವರನ್ನು ಸದನಕ್ಕೆ ಪರಿಚಯಿಸಿದಾಗ ಎದ್ದು ನಿಂತ ಎನ್‌.ಮಹೇಶ್‌ “ಐ ಆ್ಯಮ್‌ ದಿ ಫ‌ಸ್ಟ್‌ ಎಂಎಲ್‌ಎ ಆ್ಯಂಡ್‌ ಫ‌ಸ್ಟ್‌ ಮಿನಿಸ್ಟರ್‌ ಆಫ್ ಬಿಎಸ್ಪಿ ಪಾರ್ಟಿ’ ಎನ್ನುತ್ತ, ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌-ಜೆಡಿಎಸ್‌-ಬಿಎಸ್ಪಿ ಸಮ್ಮಿಶ್ರ ಸರ್ಕಾರ ಎಂದರು. 

ಮಧ್ಯಪ್ರವೇಶಿಸಿದ ಕಾನೂನು ಸಚಿವ ಕೃಷ್ಣಭೈರೇಗೌಡ, ಶಿಕ್ಷಣ ಸಚಿವರಿಗೆ ಈ ಸದನದಲ್ಲೇ ಫ‌ುಲ್‌ ಟೈಂ ಕೆಲ್ಸ. ಯಾಕೆಂದರೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳು ಇಲ್ಲಿ ಇದ್ದಾರೆ. ಅವರೆಲ್ಲ ಹೇಗೆ ಎಂದು ಮುಂದಿನ ದಿನಗಳಲ್ಲಿ ನಿಮಗೇ ಗೊತ್ತಾಗುತ್ತದೆ. ಅದೇ ರೀತಿ ಉನ್ನತ ಶಿಕ್ಷಣ ಸಚಿವರಿಗೂ ಇಲ್ಲೇ ಹೆಚ್ಚು ಕೆಲಸ ಇರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next