ಸೈದಾಪುರ: ಹಿರಿಯರು ಎಲ್ಲರ ಮಾರ್ಗದರ್ಶಕರು. ಅವರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಬಳಿಚಕ್ರ ಗ್ರಾಪಂ ಕಾರ್ಯದರ್ಶಿ ಪ್ರಭು.ಕೆ ಹೇಳಿದರು.
ಬಳಿಚಕ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ, ಕಲಿಕಾ ಟಾಟಾ ಟ್ರಸ್ಟ್ ಹಾಗೂ ಎನ್ ಪಿಸಿಐಎಲ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ (ಜೀರಿಯಾಟ್ರಿಕ್ ಕ್ಲಿನಿಕ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
60 ವರ್ಷ ಮೇಲ್ಪಟ್ಟ ಹಿರಿಯರಿಗೆ ಆರೋಗ್ಯ ಸೇವೆ ನೀಡುವುದು ಪುಣ್ಯದ ಕೆಲಸ. ಇನ್ಮುಂದೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಸೇವೆ ನೀಡಲಾಗುತ್ತಿದೆ. ಹಿರಿಯ ನಾಗರಿಕರಲ್ಲಿ ಸಮಸ್ಯೆಗಳಿದ್ದರೆ ಸಹಾಯವಾಣಿ 14567ಕ್ಕೆ ಉಚಿತವಾಗಿ ಕರೆ ಮಾಡಿ ಎಂದರು.
ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯ ಹಿರಿಯ ನಾಗರಿಕ ಕಾರ್ಯಕ್ರಮದ ವ್ಯವಸ್ಥಾಪಕ ಸಾಯಿ ಬಾಬು ಮಾತನಾಡಿ, ಹಿರಿಯ ನಾಗರಿಕರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಮೊಳಕಾಲು ನೋವುಗಳಂಥ ಸಮಸ್ಯೆ ಬಾಧಿಸುತ್ತವೆ. ಬಹಳಷ್ಟು ಹಿರಿಯರು ಮನೆಯಲ್ಲಿ ಸರಿಯಾದ ಆರೈಕೆ, ತಪಾಸಣೆ ಇಲ್ಲದೇ ಬಳಲುತ್ತಿರುತ್ತಾರೆ. ಇಂಥವರಿಗಾಗಿ ಪ್ರತಿ ಸೋಮವಾರ ಜೀರಿಯಾಟ್ರಿಕ್ ಕ್ಲಿನಿಕ್ ಏರ್ಪಡಿಸುತ್ತೇವೆ. ಹಿರಿಯರಿಗೆ ಆರೋಗ್ಯ ಕಾರ್ಡ್ ನೀಡಿ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದರು.
ಈ ವೇಳೆ ಕಲಿಕಾ ಟಾಟಾ ಟ್ರಸ್ಟ್‌ನ ಕಾರ್ಯಕ್ರಮ ಹಿರಿಯ ಸಂಯೋಜಕ ಮರೆಪ್ಪ ನಂದಿಹಳ್ಳಿ, ಕಲಿಕೆ ಸಂಸ್ಥೆ ಸಂಯೋಜಕ ಬಾಶುಸಾಬ ಸುಳೆಕಲ್, ಬಳಿಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಸಮೀನಾ, ಸಾಹೇಬಗೌಡ ದಿಡ್ಡಿಮನಿ, ಸುನೀಲ್ ಜಿ.ಎಸ್, ಆರೋಗ್ಯ ಸಿಬ್ಬಂದಿಗಳಾದ ಜಾಸಲೀನ್ ಜೊಲ್ಲಿ, ಇಂದಿರಾ, ಲಕ್ಷ್ಮೀ ಎಲ್, ಎಚ್.ವಿ. ರತ್ನಮ್ಮ, ಸುನೀತಾ, ನಾಗೇಶ, ಹಾರೀಫ್, ರಮೇಶ, ಪ್ರಸಾದ, ಆಶಾ ಕಾರ್ಯಕರ್ತೆಯರು ಇದ್ದರು.