Advertisement

ವಯೋವೃದ್ಧರು ಮತ್ತು ಕೋವಿಡ್‌   19

08:53 PM Nov 15, 2020 | Suhan S |

ಕೋವಿಡ್‌ -19 ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ಉಂಟಾಗುವ ಮರಣ ಮತ್ತು ಹಾನಿಯ ಪ್ರಮಾಣವೂ ದೊಡ್ಡ ಮಟ್ಟದಲ್ಲಿದೆ. ಭಾರತದಲ್ಲಿ ಕೋವಿಡ್‌-19 ಸೋಂಕು ಪ್ರಕರಣಗಳು ತೀವ್ರ ಮಟ್ಟದಲ್ಲಿದ್ದು, ಹಿರಿಯರೂ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ. ವಯೋವೃದ್ಧರು ಈ ಸೋಂಕಿನಿಂದ ಹೇಗೆ ದೂರ ಉಳಿಯಬಹುದು ಮತ್ತು ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದನ್ನು ಪ್ರಶ್ನೋತ್ತರಗಳ ರೂಪದಲ್ಲಿ ತಿಳಿಯೋಣ.

Advertisement

 

 ನನಗೆ 65ಕ್ಕಿಂತ ಹೆಚ್ಚು ವಯಸ್ಸಾಗಿದ್ದು, ಕೋವಿಡ್‌-19 ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿದೆಯೇ?

ಇಲ್ಲ, ವಯೋವೃದ್ಧರಿಗೆ ಈ ಸೋಂಕು ತಗಲುವ ಅಪಾಯ ಹೆಚ್ಚು ಎಂದೇನೂ ಇಲ್ಲ. ಇನ್ನಿತರ ಎಲ್ಲರಿಗೆ ಇರುವ ಸೋಂಕು ಅಪಾಯದಷ್ಟೇ ಅಪಾಯ ಹಿರಿಯರಿಗೂ ಇದೆ.

ನನಗೆ 65ಕ್ಕಿಂತ ಹೆಚ್ಚು ವಯಸ್ಸಾಗಿದೆ. ಕೋವಿಡ್‌-19ನಿಂದ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ನನಗೆ ಹೆಚ್ಚಿದೆಯೇ?

Advertisement

ಹೌದು. ವಯಸ್ಕರು ಕೋವಿಡ್‌-19ನಿಂದ ದೀರ್ಘ‌ಕಾಲ ಐಸಿಯು ವಾಸ, ಹೆಚ್ಚು ಮರಣ ಪ್ರಮಾಣದಂತಹ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ವಯಸ್ಸು ಹೆಚ್ಚಿದಂತೆ ಕೋವಿಡ್‌-19ನಿಂದ ಮರಣಿಸುವ ಅಪಾಯವೂ ಹೆಚ್ಚುತ್ತದೆ. 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳಲ್ಲಿ ಮರಣ ಪ್ರಮಾಣವು ಶೇ.4ರಿಂದ ಶೇ.15ರಷ್ಟು ಇರುತ್ತದೆ.

 ನನಗೆ 50 ವರ್ಷ ವಯಸ್ಸಾಗಿದೆ. ಆದರೆ ನಾನು ಮಧುಮೇಹದಿಂದ ಬಳಲುತ್ತಿದ್ದೇನೆ. ನನಗೂ ಅಪಾಯ ಇದೆಯೇ?

ಹೌದು. ದೀರ್ಘ‌ಕಾಲಿಕ ಕಾಯಿಲೆಗಳಾದ ಮಧುಮೇಹ, ದೀರ್ಘ‌ಕಾಲಿಕ ಶ್ವಾಸಾಂಗ ಕಾಯಿಲೆ, ಅಸ್ತಮಾ, ಪಿತ್ತಕೋಶ ಕಾಯಿಲೆಗಳು, ಮೂತ್ರಪಿಂಡ ಕಾಯಿಲೆಗಳು, ಹೃದ್ರೋಗಗಳು, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರು, ಎಚ್‌ಐವಿ/ ಏಡ್ಸ್‌ ರೋಗಿಗಳು ಮತ್ತು ಧೂಮಪಾನಿಗಳಲ್ಲಿ ಕೋವಿಡ್‌-19ನಿಂದ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚು ಇರುತ್ತದೆ. ಆದ್ದರಿಂದ ಇಂತಹ ವ್ಯಕ್ತಿಗಳು ಸಾಮಾಜಿಕವಾಗಿ ಜನರು ಒಟ್ಟುಗೂಡುವ ಕಡೆಗೆ ತೆರಳುವುದನ್ನು ತಪ್ಪಿಸಬೇಕು ಮತ್ತು ಸೋಂಕು ತಗಲುವುದನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.

ಕೋವಿಡ್‌-19 ಸೋಂಕು ತಗಲುವುದನ್ನು ತಪ್ಪಿಸಿಕೊಳ್ಳಲು ನಾನು ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಅತೀ ಅಗತ್ಯವಾದರೆ ಮಾತ್ರ ವಿನಾ ಮನೆಯಿಂದ ಹೊರಹೋಗುವುದನ್ನು ವರ್ಜಿಸಿ. ಮನೆಯಿಂದ ಹೊರಕ್ಕೆ ಹೋಗುವಾಗ ಮಾಸ್ಕ್ ಧರಿಸಿ. ನಿಯಮಿತವಾಗಿ ಕೈ ತೊಳೆದುಕೊಳ್ಳಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಭಾರೀ ಜ್ವರ, ಕೆಮ್ಮು ಅಥವಾ ಕೋವಿಡ್‌-19ನ ಯಾವುದೇ ಲಕ್ಷಣಗಳು ಇದ್ದಲ್ಲಿ ಅವರಿಂದ ದೂರ ಇರಿ ಮತ್ತು ಅವರಿಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೇಳಿ. ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಥಳಗಳನ್ನು ಆಗಾಗ ಸ್ಯಾನಿಟೈಸ್‌ ಮಾಡಿ.

ಹಿರಿಯರು (65 ವರ್ಷಕ್ಕಿಂತ ಮೇಲ್ಪಟ್ಟವರು) ಮತ್ತು ದೀರ್ಘ‌ಕಾಲಿಕ ಅನಾರೋಗ್ಯ ಹೊಂದಿರುವವರು ಕೋವಿಡ್‌ -19ನಿಂದ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ ಅಂಥವರು ಹೆಚ್ಚು ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳನ್ನು ಹೊಂದಿರುವುದು ಅಗತ್ಯ. ನೀವು ಹಿರಿಯ ವಯಸ್ಸಿನವರಾಗಿದ್ದು, ಕೋವಿಡ್‌-19 ಸೋಂಕಿಗೆ ಒಳಗಾಗಿದ್ದರೆ ಕಳವಳ ಬೇಡ. ನಿಮ್ಮ ವೈದ್ಯರ ಜತೆಗೆ ಸತತ ಸಂಪರ್ಕದಲ್ಲಿರಿ, ಅವರು ನಿಮಗೆ ಉತ್ತಮ ಫ‌ಲಿತಾಂಶ, ಆರೋಗ್ಯಕ್ಕೆ ಕಾರಣವಾಗಬಲ್ಲ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

 

ಡಾ| ಫ‌ರ್ಹಾನ್‌ ಫ‌ಜಲ್‌

ಡಿಎಂ ಇನ್‌ಫೆಕ್ಷಿಯಸ್‌ ಡಿಸೀಸ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next