ಮುಂಬಯಿ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಮಾಜಿ ಸಿಎಂ ಏಕನಾಥ್ ಶಿಂಧೆ ಅವರು ಉಪಮುಖ್ಯಮಂತ್ರಿ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ಶಿರ್ಸಾತ್ ಬುಧವಾರ(ನ27) ಹೇಳಿಕೆ ನೀಡಿದ್ದಾರೆ.
ನವೆಂಬರ್ 20 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿಯ ಅತ್ಯಮೋಘ ಗೆಲುವಿಗೆ ಏಕನಾಥ್ ಶಿಂಧೆ ಅವರೇ ಪ್ರಮುಖ ಕಾರಣ ಎಂದು ಶಿಂಧೆ ಸೇನಾ ನಾಯಕ ಸಂಜಯ್ ಹೇಳಿಕೆ ನೀಡಿದ್ದಾರೆ.
“ಏಕನಾಥ್ ಶಿಂಧೆ ಅವರ ಹೆಸರಿನ ಮೇಲೆ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗಿದ್ದು, ಅವರು ಮುಖ್ಯಮಂತ್ರಿಯಾಗಿ ಮರಳಲು ಅರ್ಹರು. ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಶಿವಸೇನೆ ನಾಯಕ ಸಂಜಯ್ ಶಿರ್ಸಾತ್ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.
ಏಕನಾಥ್ ಶಿಂಧೆ ಅವರು ಶಿವಸೇನೆ ಇಬ್ಭಾಗವಾಗಿ ಬಂದಾಗ ಬಿಜೆಪಿ ಅವರಿಗೆ ಸಿಎಂ ಹುದ್ದೆ ಬಿಟ್ಟು ಕೊಟ್ಟು ಮಾಜಿ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಅವರ ಮನವೊಲಿಸಿ ಡಿಸಿಎಂ ಹುದ್ದೆ ಸ್ವೀಕರಿಸುವಂತೆ ಮಾಡಿತ್ತು. ಅದೇ ಸೂತ್ರ ಮುಂದಿಟ್ಟು ಬಿಜೆಪಿ ಶಿಂಧೆ ಅವರಿಗೆ ಡಿಸಿಎಂ ಹುದ್ದೆ ಸ್ವೀಕರಿಸಲು ಹೇಳಿದ್ದು, ಈಗ ಬಿಕ್ಕಟ್ಟು ಕಂಡು ಬಂದಿದೆ. ಬಿಜೆಪಿ ಹೈಕಮಾಂಡ್ ಯಾವ ರೀತಿ ಸಮಸ್ಯೆ ಬಗೆ ಹರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಲ್ಲಿ ಮಹಾಯುತಿ 231 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬಿಜೆಪಿ 132 ಸ್ಥಾನಗಳು, ಶಿವಸೇನೆ(ಏಕನಾಥ್ ಶಿಂಧೆ ಬಣ) 57 ಸ್ಥಾನಗಳು ಮತ್ತು ಅಜಿತ್ ಪವಾರ್-ಎನ್‌ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) 41 ಸ್ಥಾನಗಳನ್ನು ಗೆದ್ದಿವೆ. ಮುಂದಿನ ಐದು ವರ್ಷಗಳ ಕಾಲ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನೇ ಇರದಿರುವ ಹಾಗೆ ಮೈತ್ರಿಕೂಟ ಜಯ ತನ್ನದಾಗಿಸಿಕೊಂಡಿದೆ.