ಮುಂಬೈ: ಬಾಳಾಸಾಹೇಬ್ ಠಾಕ್ರೆಯ ಶಿವಸೇನೆ ಇಬ್ಭಾಗವಾಗಿ ಉದ್ಧವ್ ಠಾಕ್ರೆ-ಏಕನಾಥ ಶಿಂದೆ ಬಣಗಳಾಗಿ ಹಂಚಿಹೋಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿಂದೆ ಸೇನಾ ಬಣದ ಸರ್ಕಾರ ರಚನೆಯೂ ಆಗಿದೆ. ಈಗ ಉದ್ಧವ್ ಪುತ್ರ ಆದಿತ್ಯ ಠಾಕ್ರೆ ಕುತೂಹಲಕರ ವಿಷಯವೊಂದನ್ನು ಬಾಯಿಬಿಟ್ಟಿದ್ದಾರೆ. “ಏಕನಾಥ ಶಿಂದೆ ಬಂಡಾಯವೇಳುವುದಕ್ಕೆ ಮುನ್ನ ತಮ್ಮ ನಿವಾಸಕ್ಕೆ ಬಂದಿದ್ದರು. ತಾನು ಬಿಜೆಪಿ ಜೊತೆ ಕೈಜೋಡಿಸದಿದ್ದರೆ ಕೇಂದ್ರೀಯ ತನಿಖಾ ಸಂಸ್ಥೆಗಳು ತನ್ನನ್ನು ಬಂಧಿಸುವುದು ಖಚಿತ ಎಂದು ಅತ್ತಿದ್ದರು’ ಎಂದು ಆದಿತ್ಯ ಆರೋಪಿಸಿದ್ದಾರೆ.
ಆದರೆ ಇದನ್ನು ಶಿಂದೆ ಬಣದ ಶಾಸಕ ಸಂತೋಷ್ ಬಂಗಾರ್ ಅಲ್ಲಗಳೆದಿದ್ದಾರೆ. ಶಿವಸೇನೆಯು ಎನ್‌ಸಿಪಿ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಶಾಸಕರು ಬಂಡಾಯವೇಳಲು ಕಾರಣ ಎಂದು ಹೇಳಿದ್ದಾರೆ. ಇನ್ನು ಕೇಂದ್ರ ಸಚಿವ ರಾಮದಾಸ ಅಠಾವಳೆ ಮಾತನಾಡಿ, ಶಿಂದೆ ವಿರುದ್ಧದ ಆರೋಪಗಳು ಸುಳ್ಳು. ಅವರು ಬಲಿಷ್ಠ ವ್ಯಕ್ತಿ, ಅಳುಬುರುಕ ಅಲ್ಲ ಎಂದಿದ್ದಾರೆ.
ಇದಕ್ಕೂ ಮುನ್ನ ವಿಶಾಖಪಟ್ಟಣಂ ವಿಶ್ವವಿದ್ಯಾಲಯದ ಸಂವಾದವೊಂದರಲ್ಲಿ ಪಾಲ್ಗೊಂಡಿದ್ದ ಆದಿತ್ಯ ಠಾಕ್ರೆ, 40 ಶಾಸಕರು ಶಿವಸೇನಾ ವಿರುದ್ಧ ಬಂಡಾಯವೇಳಲು ಕಾರಣ ಅವರ ಅಸ್ತಿತ್ವ ಉಳಿಸಿಕೊಳ್ಳುವುದು ಮತ್ತು ಹಣ ಮಾಡುವುದು ಎಂದಿದ್ದರು. ಇದಕ್ಕೂ ಮುಂದುವರಿದು ಮಾತನಾಡಿದ್ದ ಅವರು “ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಶಿಂದೆ ನಮ್ಮ ಮನೆಗೆ ಬಂದಿದ್ದರು. ತಾನು ಬಿಜೆಪಿಯೊಂದಿಗೆ ಸಹಕರಿಸದಿದ್ದರೆ ತನ್ನ ಬಂಧನ ಖಚಿತ ಎಂದು ಕಣ್ಣೀರು ಹಾಕಿದ್ದರು. ಅವರ ಪುಣ್ಯಕ್ಕೆ ಅವರನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ ಬಿಜೆಪಿ ಅದರ ಶ್ರೇಯವನ್ನೂ ಪಡೆದುಕೊಂಡಿದೆ’ ಎಂದಿದ್ದರು.