Advertisement
ಭೂಕಂಪದ ತೀವ್ರತೆ ಕನಿಷ್ಠ ಎರಡು ನಗರಗಳಲ್ಲಿ ಹೆಚ್ಚಿದ್ದ ಕಾರಣ ಬಹಳಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಒಟ್ಟು 304 ಮಂದಿ ಮೃತಪಟ್ಟು, 1,800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹೈಟಿಯ ಆಸ್ಪತ್ರೆಗಳೆಲ್ಲ ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ಹಲವು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ವೈದ್ಯಕೀಯ ವಿದ್ಯಾರ್ಥಿಗಳು, ರೋಗಿಗಳು, ವೈದ್ಯರು ಇದ್ದ ಆಸ್ಪತ್ರೆಯ ಕಟ್ಟಡವೂ ಧ್ವಂಸಗೊಂಡಿದೆ.
ಕಳೆದ ತಿಂಗಳ ಜು. 7ರಂದು ಬಂಡುಕೋರರು ಅರಮನೆಯ ಒಳಕ್ಕೆ ನುಗ್ಗಿ ಹೈಟಿ ಅಧ್ಯಕ್ಷರನ್ನು ಹತ್ಯೆಗೈದಿದ್ದರು. ಇದರಿಂದ ಅಲ್ಲಿ ರಾಜಕೀಯ ಅಸ್ಥಿರತೆ ಮೂಡಿದೆ. ಇಂಥ ಬಿಕ್ಕಟ್ಟಿನ ಸಮಯದಲ್ಲೇ ಪ್ರಾಕೃತಿಕ ವಿಕೋಪ ಸಂಭವಿಸಿರುವುದು ಹೈಟಿ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಮವಾರ ಅಥವಾ ಮಂಗಳವಾರ ಭಾರೀ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದೂ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.