Advertisement

ತ್ಯಾವರೆಕೊಪ್ಪ ಸಿಂಹಧಾಮದಿಂದ ಹದಿನೆಂಟು ಚಿರತೆಗಳು ಹೊರಕ್ಕೆ?

10:12 AM Oct 17, 2017 | Team Udayavani |

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಐದು ಮರಿಯಾನೆಗಳು ಉತ್ತರ ಭಾರತ ದೆಡೆಗೆ ಹೊರಡಲು ಸಿದ್ಧವಾಗಿರುವ ಬೆನ್ನ ಹಿಂದೆಯೇ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ 18 ಚಿರತೆಗಳು ಹೊರಗೆ ಹೆಜ್ಜೆ ಇಡಲು ಮುಂದಾಗಿವೆ. ಆ ಮೂಲಕ ಬಹಳ ವರ್ಷದ ನಂತರ ಇಲ್ಲಿನ ತ್ಯಾವರೆಕೊಪ್ಪ ಸಿಂಹಧಾಮದ ಚಿರತೆಗಳು ಮೈಸೂರು, ಬನ್ನೇರುಘಟ್ಟ ಹಾಗೂ ಗುಜರಾತಿನ ಅಹಮದಾಬಾದ್‌ ಮೃಗಾಲಯಕ್ಕೆ ತೆರಳಲಿವೆ.

Advertisement

ಹುಲಿ-ಸಿಂಹಧಾಮದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಚಿರತೆಗಳನ್ನು ಬೇರೆ, ಬೇರೆ ಮೃಗಾಲಯಗಳ ಬೇಡಿಕೆ ಮೇರೆಗೆ ಕಳಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದ್ದು, ಕೇಂದ್ರ ಮೃಗಾಲಯ ಪ್ರಾಧಿಕಾರದ ಅಂತಿಮ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಹೆಚ್ಚುತ್ತಿರುವ ಚಿರತೆಗಳ ಸಂಖ್ಯೆ, ಕಿರಿದಾಗುತ್ತಿರುವ ಜಾಗ, ಆಹಾರ ಪೂರೈಕೆ ಮತ್ತು ಆರೋಗ್ಯ ನಿರ್ವಹಣೆಯ ವೆಚ್ಚದ ಏರಿಕೆ, ಸಂತಾನೋತ್ಪತ್ತಿ ಏರಿಕೆ, ಪರಸ್ಪರ ಕಾದಾಟ ಇವೇ ಮೊದಲಾದ ಕಾರಣಗಳಿಂದಾಗಿ ಚಿರತೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಬೇರೆ ಬೇರೆ ಮೃಗಾಲಯಗಳಿಗೆ ಕಳಿಸುವುದು ಅನಿವಾರ್ಯವಾಗಿದೆ ಎಂದು ಸಿಂಹಧಾಮದ ಮೂಲಗಳು ತಿಳಿಸಿವೆ. ಹಾಗಾಗಿ, ಗುಜರಾತ್‌ನ ಅಹಮದಾಬಾದ್‌ನ ಕಮಲಾ ನೆಹರು ಜಿಯೋಲಾಜಿಕಲ್‌ ಗಾರ್ಡನ್‌, ಮೈಸೂರಿನ ಪ್ರಾಣಿಗಳ ಪುನರ್‌ವಸತಿ ಕೇಂದ್ರ ಹಾಗೂ ಬನ್ನೇರುಘಟ್ಟದ ಜೈವಿಕ ಉದ್ಯಾನವನಕ್ಕೆ ತಲಾ 6 ಚಿರತೆಗಳಂತೆ ಒಟ್ಟು 18 ಚಿರತೆಗಳನ್ನು ಕಳಿಸಲಾಗುತ್ತಿದೆ. ಈ ಮೂರು ಕೇಂದ್ರಗಳಿಗೆತಲಾ ಮೂರು ಹೆಣ್ಣು ಮತ್ತು ಮೂರು ಗಂಡು ಚಿರತೆಗಳನ್ನು ಕಳಿಸಲಾಗುತ್ತದೆ.

ಚಿರತೆಗಳು ಎಷ್ಟಿವೆ?: ಸದ್ಯ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ನಿರ್ವಹಣೆಯಲ್ಲಿರುವ ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮದಲ್ಲಿ 26 ಚಿರತೆಗಳಿವೆ. ಇದು ಈ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಹೊರೆ ಎನಿಸಿದೆ. ಧಾಮದಲ್ಲಿ ಜನಿಸಿರುವ ಚಿರತೆಗಳ ಜತೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪತ್ತೆಯಾಗಿ ಅರಣ್ಯ ಇಲಾಖೆಯಿಂದ ಬಂಧಿಸಲ್ಪಟ್ಟ ಚಿರತೆಗಳನ್ನು ತ್ಯಾವರೆಕೊಪ್ಪಕ್ಕೆ ತರಲಾಗುತ್ತದೆ. ಹೀಗಾಗಿ ಇಲ್ಲಿ 6 ಮರಿಗಳು ಸೇರಿ ದಂತೆ ಒಟ್ಟು 26 ಚಿರತೆಗಳಿವೆ. ಇವುಗಳಲ್ಲಿ 14 ಗಂಡು, 12 ಹೆಣ್ಣು ಚಿರತೆ ಸೇರಿವೆ.ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿರುವ ಚಿರತೆಗಳನ್ನು ಇಡಲು ಕೇಜ್‌ ಸಮಸ್ಯೆಯಿದೆ. ಕೇವಲ 2 ಕೇಜ್‌ಗಳಿದ್ದು, ಇದರಲ್ಲಿ ಎಲ್ಲ 26 ಚಿರತೆಗಳನ್ನು ಇಡುವುದು ಕಷ್ಟ. ಸ್ವತ್ಛಂದ ಓಡಾಟಕ್ಕೆ ಅಡ್ಡಿಯಾಗುತ್ತಿದೆ.ಜೊತೆಗೆ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಕೆಲವೊಮ್ಮೆ ಅವುಗಳ ನಡುವೆ ಕಾದಾಟ ಸಾಮಾನ್ಯ. ಕೆಲವೊಮ್ಮೆ ಚಿರತೆಗಳ ಕಾದಾಟ ವಿಕೋಪಕ್ಕೆ ಹೋಗಿ ಅವು ಮಾರಣಾಂತಿಕವಾಗಿ ಗಾಯಮಾಡಿಕೊಳ್ಳುತ್ತವೆ. ಗಾಯ ಗೊಂಡ ಚಿರತೆಗಳಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಪ್ರತಿದಿನ ಸಂಜೆ ಅವುಗಳಿಗೆ ಆಹಾರ ಕೊಡುವುದು ಸಿಬ್ಬಂದಿಗೆ ಮತ್ತೂಂದು ದೊಡ್ಡ ಸಮಸ್ಯೆ. ಎಲ್ಲ ಚಿರತೆಗಳು ಒಂದೇ
ರೀತಿಯಲ್ಲಿ ಕಾಣುವುದರಿಂದ ಅವುಗಳಿಗೆ ಆಹಾರ ನೀಡುವಾಗ ಯಾವುದು ತಿಂದಿದೆ, ಮತ್ಯಾವುದಕ್ಕೆ ಸಿಕ್ಕಿಲ್ಲ ಎಂಬುದೇ ಗೊತ್ತಾಗುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಚಿರತೆಗಳನ್ನು ಬೇರೆಡೆಗೆ ಕಳುಹಿಸಲು ನಿರ್ಧರಿಸಲಾಗಿದೆ.

ಬರಲಿರುವ ಸಿಂಹಗಳು: ಇಲ್ಲಿಂದ ಒಟ್ಟು 18 ಚಿರತೆಗಳು ಹೊರಹೋದರೆ ಇಲ್ಲಿನ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ತಲಾ ಒಂದು ಗಂಡು ಮತ್ತು ಹೆಣ್ಣು ಒಳಗೊಂಡ ಎರಡು ಸಿಂಹಗಳು ಬನ್ನೇರುಘಟ್ಟ ಬಯೋಲಾ ಜಿಕಲ್‌ ಪಾರ್ಕ್‌ನಿಂದ ಬರಲಿವೆ. ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ಒಪ್ಪಿಗೆ ದೊರೆ  ಯುತ್ತಿದ್ದಂತೆ ಸಿಂಹಗಳನ್ನು ತರಲಾಗುತ್ತದೆ. ತ್ಯಾವರೆಕೊಪ್ಪದಲ್ಲಿ ಸದ್ಯ 2 ಸಿಂಹಗಳಿವೆ. ಧಾಮದಲ್ಲಿ ಸಿಂಹಗಳ ಸಂತಾನೋತ್ಪತ್ತಿಗಾಗಿ ಹೊರಗಿನಿಂದ ಸಿಂಹಗಳನ್ನು ತರಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

●ಗೋಪಾಲ್‌ ಯಡಗೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next