ಸಿನಿಮಾ ಸೆಳೆತವೇ ಅಂಥದ್ದು. ಅದಕ್ಕೆ ವಯಸ್ಸಿನ ಮಿತಿ ಇಲ್ಲ. ಆಸಕ್ತಿ, ಶ್ರದ್ಧೆ ಮತ್ತು ಪ್ರೀತಿ ಇದ್ದರೆ, ಯಾರು, ಯಾವ ವಯಸ್ಸಿನಲ್ಲಿ ಬೇಕಾದರೂ ಈ ಬಣ್ಣದ ಲೋಕದಲ್ಲಿ ಮಿಂದೇಳಬಹುದು. ಇಲ್ಲೀಗ ಹೇಳ ಹೊರಟಿರುವ ವಿಷಯ, ನರಸಿಂಹರಾಜು ಎಂಬ ಸಿನಿಮಾ ಪ್ರೇಮಿ ಕುರಿತು. ಮೂಲತಃ ಮೆಕಾನಿಕಲ್ ಎಂಜಿನಿಯರ್ ಆಗಿರುವ ನರಸಿಂಹರಾಜು, ನಿವೃತ್ತಿ ವಯಸ್ಸು ಪೂರೈಸಿದ್ದರೂ, ಈ ವಯಸ್ಸಲ್ಲೂ ಬತ್ತದ ಸಿನಿಮಾ ಆಸಕ್ತಿಯಿಂದಾಗಿ, “ದಿ ಫೈರ್’ ಎಂಬ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಿ, ನಟಿಸಿದ್ದಾರೆ.
ಅಷ್ಟೇ ಆಗಿದ್ದರೆ, ನರಸಿಂಹರಾಜು ಅವರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿರಲಿಲ್ಲ. ಅವರು ಈ ಚಿತ್ರದಲ್ಲಿ ಮಾಡಿರುವ ಬಹುತೇಕ ವಿಭಾಗಗಳ ಕೆಲಸವನ್ನು ಮೆಚ್ಚಿಕೊಂಡು “ಇಂಡಿಯ ಬುಕ್ ಆಫ್ ರೆಕಾರ್ಡ್ಸ್’ ಪ್ರಮಾಣ ಪತ್ರವನ್ನು ವಿತರಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ಕಲಾನಿರ್ದೇಶನ, ಹಿನ್ನೆಲೆ ಸಂಗೀತ, ನಟನೆ, ಸಬ್‌ಟೈಟಲ್ಸ್, ಟೈಟಲ್‌ಕಾರ್ಡ್, ಡಿಐ, ಗ್ರಾಫಿಕ್ಸ್ ಸೇರಿದಂತೆ ಹದಿನೆಂಟು ವಿಭಾಗಗಳಲ್ಲಿ “ದಿ ಫೈರ್’ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.
ಈ ವಯಸ್ಸಲ್ಲಿ ಒಬ್ಬರೇ ಇಷ್ಟೊಂದು ವಿಭಾಗದಲ್ಲಿ ಕೆಲಸ ಮಾಡಿರುವುದು ಭಾರತೀಯ ಚಿತ್ರರಂಗದಲ್ಲಿ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ “ದಿ ಫೈರ್’ ಪ್ರದರ್ಶನಗೊಂಡು, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ನರಸಿಂಹರಾಜು ಅವರಿಗೆ ಸಿನಿಮಾ ರಂಗ ಹೊಸದೇನಲ್ಲ. ಈ ಹಿಂದೆ “ಉದ್ಭವ’ ಚಿತ್ರದಲ್ಲಿ ನಟಿಸಿದ್ದಾರೆ. ಹಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. “ಆಸರೆ’ ಎಂಬ ಟೆಲಿಫಿಲ್ಮ್ ಕೂಡ ಮಾಡಿದ್ದಾರೆ.
2010 ರಲ್ಲಿ “ಯುಕ್ತಿ’ ಎಂಬ ಚಿತ್ರವನ್ನೂ ಮಾಡಿದವರು. ಈಗ “ದಿ ಫೈರ್’ ಚಿತ್ರ ಮಾಡಿ ಹಲವು ಪ್ರಶಂಸೆಗಳಿಗೆ ಪಾತ್ರರಾಗಿದ್ದಾರೆ. ಎಲ್ಲಾ ಸರಿ, “ದಿ ಫೈರ್’ನಲ್ಲಿ ಏನೆಲ್ಲಾ ಇದೆ ಎಂಬ ಪ್ರಶ್ನೆಗೆ ಉತ್ತರಿಸುವ ನರಸಿಂಹರಾಜು, “ಇದೊಂದು ಡ್ರಗ್ಸ್ ಮಾಫಿಯ ಕುರಿತ ಚಿತ್ರ. ಬೆಂಗಳೂರಲ್ಲಿ ನಡೆಯುವ ಗಾಂಜಾ ಮಾಫಿಯವನ್ನು ಇಲ್ಲಿ ತೋರಿಸಲಾಗಿದೆ. ಶಿವಾಜಿನಗರದಲ್ಲಿ ಮೂರು ದಿನಗಳ ರಾತ್ರಿ ನಡೆಯುವ ನೈಜ ಚಿತ್ರಣವನ್ನೇ ತೋರಿಸಲಾಗಿದೆ. ಈಗಿನ ಕಾಲಕ್ಕೆ ತಕ್ಕಂತಹ ಕಥೆ ಇಲ್ಲಿದೆ ಎಂಬುದು ಅವರ ಮಾತು. ಕಳೆದ 2006 ರಿಂದಲೂ ಇಂಥದ್ದೊಂದು ಸಿನಿಮಾ ಮಾಡಬೇಕು.
ಆ ಮೂಲಕ ಹೊಸ ಪ್ರಯೋಗಕ್ಕಿಳಿಯಬೇಕು ಎಂಬ ಆಸೆ ನರಸಿಂಹರಾಜು ಅವರಿಗಿತ್ತಂತೆ. ಅದು “ದಿ ಫೈರ್’ ಮೂಲಕ ಈಡೇರಿದೆಯಂತೆ. ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಬೇಕು ಎಂಬ ಆಸೆಯಿಂದ, ಎಲ್ಲವನ್ನೂ ಕಲಿತು, ಅದರಲ್ಲಿ ಪಕ್ವಗೊಂಡ ಬಳಿಕ ಸಿನಿಮಾಗೆ ಕೈ ಹಾಕಿದ್ದಾರೆ ನರಸಿಂಹರಾಜು, 113 ನಿಮಿಷ ಇರುವ ಈ ಚಿತ್ರವನ್ನು ಇಷ್ಟರಲ್ಲೇ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಮಾಡುವ ಯೋಚನೆ ಅವರಿಗಿದೆ. ಚಿತ್ರದಲ್ಲಿ ಅನುಶ್ರೀ, ರಮ್ಯಾ, ಶೋಭಾ, ಬಬಿತ, ಮಂಜುಳ, ಮಹೇಶ್, ಬೆನಕ, ರವಿ ಇತರರು ನಟಿಸಿದ್ದಾರೆ. ಕನಕಪುರ, ಇಂದ್ರಾಣಿ ಹೌಸ್, ಕಗ್ಗಲಿಪುರ ಫಾರೆಸ್ಟ್, ಶಿವಾಜಿನಗರ ಸುತ್ತಮುತ್ತ ಚಿತ್ರೀಕರಿಸಲಾಗಿದೆ.