Advertisement

ಎತ್ತಿನಹೊಳೆ: ಮನುಷ್ಯ- ವನ್ಯಮೃಗ ಸಂಘರ್ಷಕ್ಕೆ ದಾರಿ: ಡಾ|ಮಧ್ಯಸ್ಥ

10:43 AM Oct 23, 2017 | Team Udayavani |

ಉಡುಪಿ: ಎತ್ತಿನಹೊಳೆ ಯೋಜನೆ ಪ್ರದೇಶ “ಆನೆ ಕಾರಿಡಾರ್‌’ ಆಗಿದ್ದು, ಯೋಜನೆ ನೆರವೇರಿದರೆ ಕಾಡಿನಲ್ಲಿರುವ ಆನೆಗಳು ನಾಡಿಗೆ ಬಂದು ಮನುಷ್ಯ- ವನ್ಯಮೃಗಗಳ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಪರಿಸರ ತಜ್ಞ ಡಾ| ಎನ್‌. ಎ. ಮಧ್ಯಸ್ಥ ಕಳವಳ ವ್ಯಕ್ತಪಡಿಸಿದ್ದಾರೆ. 

Advertisement

ಅವರು ಮಂಗಳವಾರ ಶ್ರೀ ಕೃಷ್ಣ ಮಠದ ತಾತ್ಕಾಲಿಕ ರಾಜಾಂಗಣದಲ್ಲಿ ವಿಶೇಷ ಉಪನ್ಯಾಸ ನೀಡಿ, ಕಾಡು ಪ್ರಾಣಿಗಳು ಕಾಡಿನಲ್ಲೇ ಇರುವವರೆಗೆ ಮಾತ್ರ ಮನುಷ್ಯ ಕ್ಷೇಮವಾಗಿರ ಬಹುದು. ಕಾಡು ಪ್ರಾಣಿಗಳ ನಾಶ, ಮನುಷ್ಯರ ವಿನಾಶದ ಸಂಕೇತ. ಕಾಡಿನಲ್ಲಿರುವ ಜಿಂಕೆ, ಮೊಲ ಇತ್ಯಾದಿ ಸಣ್ಣ ಪ್ರಾಣಿ ಗಳನ್ನು ಮಾನವ ಬೇಡೆಯಾಡಿರುವುದರಿಂದಲೇ ನಾಡಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಪ್ರಕೃತಿ, ಪರಿಸರದಿಂದಾಗುವ ಎಲ್ಲ ಅನಾಹುತಗಳನ್ನು ಮಾನವನೇ ತಂದುಕೊಂಡಿದ್ದಾನೆ ಎಂದರು. 

ನಮ್ಮಿಂದಲೇ ಬರಗಾಲ 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1738ರಲ್ಲಿ ಒಮ್ಮೆ ಬರಗಾಲ ಬಂದಿತ್ತಂತೆ. ಅದಾದ ಬಳಿಕ ಈಗಲೇ ಬರಗಾಲ ನೋಡುತ್ತಿದ್ದೇವೆ. ಪಶ್ಚಿಮ ಘಟ್ಟದ ತಪ್ಪಲಿನ ಕರಾವಳಿಯಲ್ಲಿ ಬರಗಾಲಕ್ಕೆ ನಾವೇ ಕಾರಣರು. ಪರಿಸರ ಮಾರಕ ಯೋಜನೆಗಳಿಂದಲೇ ಹೀಗಾಗಿದೆ. ಎತ್ತಿನಹೊಳೆಯ ನೀರು ಮೇಲೆತ್ತಲು ಹೆಚ್ಚಿನ ವಿದ್ಯುತ್‌ ಅಗತ್ಯವಿದ್ದು, ಅದಕ್ಕಾಗಿ ನಂದಿಕೂರಿನಲ್ಲಿ ವಿದ್ಯುತ್‌ ಘಟಕ ಆರಂಭವಾಗುವ ಸಂಭವವಿದೆ. ಒಂದಕ್ಕೊಂದು ಸಂಬಂಧವಿದ್ದೇ ಸರಕಾರ ಇವೆಲ್ಲವನ್ನು ಅನುಷ್ಠಾನ ಮಾಡುತ್ತಿದೆ ಎಂದ ಅವರು, ಮನೆಗಳಲ್ಲಿ ಬೀಳುವ ಮಳೆ ನೀರನ್ನು ಇಂಗಿಸಿದರೆ 3ರಿಂದ 4 ತಿಂಗಳಿಗಾಗುವ ನೀರನ್ನು ಸಂಗ್ರಹಿಸಬಹುದು ಎಂದರು. 

ಸ್ವರ್ಣೆ : 4 ವರ್ಷಗಳಲ್ಲಿ  ಬರಿದು..!
ನದಿ ನೀರು ಸಂಗ್ರಹಕ್ಕೆ ಹತ್ತಲ್ಲ, ಇಪ್ಪತ್ತು ಅಣೆಕಟ್ಟು ಕಟ್ಟಿದರೂ, ನೀರಿನ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಉಡುಪಿ ಜನತೆಗೆ ನೀರುಣಿಸುವ ಸ್ವರ್ಣಾ ನದಿ ವರ್ಷದಿಂದ ವರ್ಷಕ್ಕೆ ಬರಿದಾಗುತ್ತಿದ್ದು, ಇನ್ನು 4 ವರ್ಷಗಳಲ್ಲಿ ಸಂಪೂರ್ಣ ಬರಿದಾಗುವ ಅಪಾಯವಿದೆ. ನಮ್ಮ ಆಡಳಿತ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ನೀರು ಹೆಚ್ಚಿಸುವ ಯಾವುದೇ ಕಾರ್ಯ ಮಾಡಿಲ್ಲ. ಅಣೆಕಟ್ಟುಗಳ ಬದಲು ಸಸಿ ನೆಟ್ಟರೆ ಪ್ರಯೋಜನವಾದೀತು ಎಂದರು.  

ಧರ್ಮ- ಪರಿಸರ ಎರಡರ ರಕ್ಷಣೆ
ಈಗಿನ ರಾಜಕಾರಣಿಗಳಿಗೆ  ಅಭಿವೃದ್ಧಿ ವಿಚಾರದಲ್ಲಿ ಸಮತೋಲನದ ದೃಷ್ಟಿಕೋನವೇ ಇಲ್ಲ. ಏಕಮುಖ ದೃಷ್ಟಿಕೋನದಿಂದ ಮಾತ್ರ ನೋಡುತ್ತಾರೆ. ಮುಂದಿನ ಪೀಳಿಗೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೂರ ದೃಷ್ಟಿತ್ವ ಇಲ್ಲ. ವನಸಂಪತ್ತು, ಪ್ರಾಣಿ ಸಂಪತ್ತು ಉಳಿಸಿದರೆ ಮಾತ್ರ ನಾವು ಉಳಿಯಬಹುದು. ಜನರ, ರಾಜಕಾರಣಿಗಳ ಸ್ವಾರ್ಥದಿಂದ ಪರಿಸರ ನಾಶವಾಗು ತ್ತಿದ್ದು, ಧರ್ಮ ರಕ್ಷಣೆಯಂತೆ ಪರಿಸರ ರಕ್ಷಣೆಯೂ ಆಗಬೇಕಿದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ಎತ್ತಿನಹೊಳೆ ಅಲ್ಲ  ನೇತ್ರಾವತಿ..!
ಎತ್ತಿನಹೊಳೆ ಪ್ರದೇಶದಲ್ಲಿ 1000 ಸೆಂ. ಮೀ. ಮಳೆಯಾಗುತ್ತದೆ, 24 ಟಿಎಂಸಿ ನೀರು ಸಿಗುತ್ತದೆ ಎನ್ನುವ ವರದಿ ಹಿಂದಿನ ಕಾಲದ್ದು, ಈಗ ಅಷ್ಟೊಂದು ಮಳೆಯಾಗಲು ಸಾಧ್ಯವೇ ಇಲ್ಲ. ಈಗ ಕೇವಲ 9.4 ಟಿಎಂಸಿ ಮಾತ್ರ ನೀರು ಸಿಗುತ್ತದೆ. ಯೋಜನೆಯಲ್ಲಿ ಸರೋವರವೊಂದು ನಿರ್ಮಾಣವಾಗಲಿದ್ದು, ಅದಕ್ಕೆ 7.4 ಟಿಎಂಸಿ ನೀರು ಅಗತ್ಯವಿದೆ. ಇದರಿಂದ ಬರೀ ಎತ್ತಿನಹೊಳೆ ಮಾತ್ರವಲ್ಲ. ನೇತ್ರಾವತಿ ನದಿಯ ನೀರನ್ನು ಬಳಸುವುದು ಅವರ ಉದ್ದೇಶ. ಆದರೆ ಸರಕಾರ ಆ ಹೆಸರನ್ನು ಉಲ್ಲೇಖೀಸದೇ ಜಾಣ ನಡೆಯೊಂದಿಗೆ ಯಾಮಾರಿಸುತ್ತಿದೆ ಎನ್ನುವುದನ್ನು ಕರಾವಳಿಯವರು ಮರೆಯಬಾರದು ಎಂದು ಮಧ್ಯಸ್ಥ ಎಚ್ಚರಿಸಿದರು.  

21 ನದಿಗಳ ಭವಿಷ್ಯ ಪಶ್ಚಿಮ ಘಟ್ಟದಲ್ಲಿ
ಕರಾವಳಿಯಲ್ಲಿ ಹರಿಯುವ 21 ನದಿಗಳ ಭವಿಷ್ಯ ಪಶ್ಚಿಮ ಘಟ್ಟದ ಉಳಿವಿನಲ್ಲಿದೆ. ಪಶ್ಚಿಮ ಘಟ್ಟವನ್ನು ಸಂರಕ್ಷಿಸದಿದ್ದರೆ, ಮನುಷ್ಯ ಮಾತ್ರವಲ್ಲ, ಸಕಲ ಜೀವ ಸಂಕುಲವೂ ನಾಶವಾಗುವ ಅಪಾಯವಿದೆ. ಈಗ 6ರಿಂದ 8 ರಷ್ಟು ಮಳೆ ಹೆಚ್ಚಾಗುತ್ತಿದೆ. ಆದರೆ ಇದು ಒಳ್ಳೆಯದಲ್ಲ.  ಉಷ್ಣಾಂಶ ಹಾಗೂ ತೇವಾಂಶ ಎರಡೂ ಒಟ್ಟಿಗೆ ಹೆಚ್ಚಾಗುವುದು ಅಪಾಯ. ರಾಜಕೀಯ ಬದ್ಧತೆಯಿದ್ದರೆ ಮಾತ್ರ ನಮ್ಮ ನದಿಗಳನ್ನು, ಪಶ್ಚಿಮ ಘಟ್ಟವನ್ನು ಉಳಿಸಬಹುದು ಎಂದು ಮಧ್ಯಸ್ಥ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next