Advertisement

ಸ್ಕ್ವಾಷ್‌: ವರ್ಷಾಂತ್ಯದಲ್ಲಿ ನಿಕೋಲ್‌ ಡೇವಿಡ್‌ ನಿವೃತ್ತಿ

05:05 AM Feb 20, 2019 | |

ಕೌಲಾಲಂಪುರ: ಎಂಟು ಬಾರಿಯ ವಿಶ್ವ ಚಾಂಪಿಯನ್‌ ನಿಕೋಲ್‌ ಡೇವಿಡ್‌ 2018-19ರ ಸ್ಕ್ವಾಷ್‌ ಋತುವಿನ ಕೊನೆಯಲ್ಲಿ ನಿವೃತ್ತಿ ತಿಳಿಸುವುದಾಗಿ ಹೇಳಿದ್ದಾರೆ.

Advertisement

35 ವರ್ಷದ ಡೇವಿಡ್‌ ವಿಶ್ವದ ಯಶಸ್ವಿ ಸ್ಕ್ವಾಷ್‌ ಆಟಗಾರ್ತಿಯಾಗಿದ್ದು, ಒಂಬತ್ತು ವರ್ಷ ಕಾಲ ನಂ. ವನ್‌ ಸ್ಥಾನದಲ್ಲಿದ್ದರು (2006-2015). ಮಲೇಶ್ಯ ಕ್ರೀಡಾಭಿಮಾನಿಗಳ ಡಾರ್ಲಿಂಗ್‌ ಆಗಿರುವ ಡೇವಿಡ್‌ 2 ದಶಕಗಳ ವೃತ್ತಿ ಜೀವನದಲ್ಲಿ 5 ಬ್ರಿಟಿಷ್‌ ಓಪನ್‌ ಪ್ರಶಸ್ತಿ, 2 ಕಾಮನ್ವೆಲ್ತ್‌ ಗೇಮ್ಸ್‌, 5 ಏಶ್ಯನ್‌ ಗೇಮ್ಸ್‌ ಹಾಗೂ 3 ವರ್ಲ್ಡ್ ಗೇಮ್ಸ್‌ನ ಚಿನ್ನದ ಪದಕ ಜಯಿಸಿದ್ದಾರೆ. 

“ಈ ನಿರ್ಧಾರವನ್ನು ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡಿದ್ದೆ. ಇದು ನನ್ನ ಕೊನೆಯ ಋತು ಎಂದು ನನಗೆ ತಿಳಿದಿದೆ. ನನ್ನ ಮನಸ್ಸು ಹಾಗೂ ದೇಹಗಳೆರಡು ಅನೇಕ ಸಮಯಗಳ ಕಾಲ ನಾನು ಅಗ್ರಸ್ಥಾನದಲ್ಲಿ ಉಳಿಯಲು ಹೋರಾಡಿವೆ.  ನನ್ನ ಮುಂದಿನ ಜೀವನಕ್ಕೆ ಪ್ರವೇಶಿಸುವುದಕ್ಕೂ ಮೊದಲು ಈ ಋತು ಉತ್ತಮ ನೆನಪುಗಳನ್ನು ನೀಡಲಿದೆ ಎಂದು ಭಾವಿಸಿದ್ದೇನೆ’ ಎಂದು ನಿಕೋಲ್‌ ಡೇವಿಡ್‌ ಹೇಳಿದ್ದಾರೆ.

9ನೇ ಪ್ರಶಸ್ತಿಯ ಗುರಿ
ಮೇನಲ್ಲಿ ನಡೆಯಲಿರುವ ಬ್ರಿಟಿಷ್‌ ಓಪನ್‌ ಮತ್ತು ಆ ಬಳಿಕ ನಡೆಯಲಿರುವ ವರ್ಲ್ಡ್ ಟೂರ್‌ ಫೈನಲ್‌ ಡೇವಿಡ್‌ ಆಡುವ ಕೊನೆಯ ಕೂಟವಾಗಲಿದೆ. 1998ರಲ್ಲಿ ಡೇವಿಡ್‌ ಚೊಚ್ಚಲ ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ಜಯಿಸಿದ್ದರು. ಆಗ ಅವರ ವಯಸ್ಸು 15 ವರ್ಷ. ನಿವೃತ್ತಿಯ ಬಳಿಕ ಜಗತ್ತಿನಲ್ಲಿ ಸ್ಕ್ವಾಷ್‌ ಕ್ರೀಡೆಯ ಕುರಿತು ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಸದ್ಯ 13ನೇ ಸ್ಥಾನದಲ್ಲಿರುವ ಡೇವಿಡ್‌, ಮುಂದಿನ ಶನಿವಾರ ಶಿಕಾಗೋದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, 9ನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next