Advertisement
1889ರಲ್ಲಿ ಫ್ರೆಂಚ್ ಕ್ರಾಂತಿಯ ಶತಮಾನೋತ್ಸವದ ಆಚರಣೆಗೋಸ್ಕರ ಸೈನ್ ನದಿಯ ದಂಡೆಯಲ್ಲಿ ಜಾಗತಿಕ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪೂರ್ವತಯಾರಿಯಲ್ಲಿ ಪ್ರವೇಶ ದ್ವಾರದ ವಿನ್ಯಾಸದ ಅವಕಾಶವನ್ನು ಎರಡು ವರ್ಷದ ಮೊದಲು ಗಸ್ಟೇವ್ ಐಫೆಲ್‌ನ ಸಂಸ್ಥೆ ಪಡೆದಿತ್ತು. ಐಫೆಲ್‌ನ ಜೊತೆಗಿನ ಇಂಜಿನಿಯರ್‌ಗಳಾದ ಮಾರಿಸ್ ಕೊಯೆಲಿನ್ ಮತ್ತು ಎಮಿಲಿ ನೋರ್ಯ ಸೇರಿಕೊಂಡು ಇದನ್ನು ವಿನ್ಯಾಸಗೊಳಿಸಿದರು. 1887ರ ಜನವರಿ 28ರಂದು ಕಾರ್ಯಾರಂಭವಾಯಿತು. ಬಹಳಷ್ಟು ಜನ ಕಲಾಕಾರರು ಇದರ ನಿರ್ಮಾಣವನ್ನು ವಿರೋಧಿಸಿದರು. ಆಸುಪಾಸಿನಲ್ಲಿರುವ ಪ್ರಸಿದ್ಧ ಚಾರಿತ್ರಿಕ ಕಟ್ಟಡಗಳಿಗೆ ಇದರಿಂದ ಧಕ್ಕೆಯುಂಟಾಗಬಹುದು ಮತ್ತು ಎತ್ತರದ ಕಬ್ಬಿಣದ ಗೋಪುರ ಪ್ಯಾರಿಸ್ ನಗರದ ಅಂದಕ್ಕೆ ಮಾರಕವಾಗಬಹುದೆಂಬುದು ಅವರ ಆತಂಕವಾಗಿತ್ತು. ಗಸ್ಟೇವ್ ಐಫೆಲನು ತನ್ನ ನಿರ್ಮಾಣದ ನಕ್ಷೆಯನ್ನು ತೋರಿಸಿ, ಈಜಿಪ್ತಿನ ಪಿರಮಿಡ್‌ಗಳಿಗೆ ಹೋಲಿಸಿದ. ಇದೂ ಪ್ರಸಿದ್ಧವಾಗುತ್ತದೆಂದು ಭರವಸೆಯನ್ನು ಕೊಟ್ಟ.
Related Articles
ಐಫೆಲ್‌ನಿಗೆ ಕೇವಲ 20 ವರ್ಷಗಳಷ್ಟು ಕಾಲ ಈ ಗೋಪುರವನ್ನು ನಿಲ್ಲಿಸಲು ಅನುಮತಿ ಇತ್ತು. ಇದರ ಪ್ರಕಾರ 1909ರಲ್ಲಿ ಗೋಪುರವನ್ನು ಕೆಡವಬೇಕಿತ್ತು. ಆದರೆ, ಆಗಲೇ ಅದು ಬಹಳ ಜನಪ್ರಿಯವಾಗಿತ್ತು. ಅಲ್ಲದೆ ಆಕಾಶವಾಣಿಯನ್ನು ನಡೆಸಲು ಅತ್ಯಮೂಲ್ಯವಾಗಿತ್ತು. ಅನುಮತಿ ಮುಗಿದ ನಂತರವೂ ಪ್ಯಾರಿಸ್ ನಗರದ ಒಡೆತನದಲ್ಲಿ ಹಾಗೆಯೇ ಉಳಿಯಿತು. ಕಾಲಕ್ರಮೇಣ ದೂರದರ್ಶನದ ಪ್ರಸಾರವನ್ನೂ ಇಲ್ಲಿಂದ ಆರಂಭಿಸಿದರು. ಮೊದಲನೇ ಮಹಾಯುದ್ಧದಲ್ಲಿ ಇಲ್ಲಿರುವ ರೇಡಿಯೋ ಟ್ರಾನ್ಸಿಸ್ಟರ್ ಜರ್ಮನ್ ರೇಡಿಯೋ ತರಂಗಗಳಿಗೆ ಅಡ್ಡಿ ಒಡ್ಡಿ ಅವರ ಮುನ್ನಡೆಯನ್ನು ಹತ್ತಿಕ್ಕಿತು. ಎರಡನೆಯ ಮಹಾಯುದ್ಧದಲ್ಲಿ ಜರ್ಮನ್ನರು ಪ್ಯಾರಿಸ್ ನಗರ ವಶಪಡಿಸಿಕೊಂಡಾಗ (1940) ಫ್ರೆಂಚರು ಲಿಫ್ಟ್ ಕೇಬಲ್‌ನ್ನು ಕತ್ತರಿಸಿದರು. ಜರ್ಮನ್ನರು ಮೆಟ್ಟಲುಗಳನ್ನು ಹತ್ತಿ ಹೋಗಿ ತಮ್ಮ ಧ್ವಜವನ್ನು ಹಾರಿಸಿದರು. ಹಿಟ್ಲರನು ಮೇಲೆ ಹತ್ತದೆ ಕೆಳಗಡೆ ಉಳಿದ. ತದನಂತರ ಇಬ್ಬರು ಫ್ರೆಂಚರು ಗುಟ್ಟಾಗಿ ಮೇಲೆ ಹತ್ತಿ ಜರ್ಮನ್ ಧ್ವಜವನ್ನು ಕಿತ್ತು ಮತ್ತೆ ಫ್ರೆಂಚ್ ಧ್ವಜವನ್ನು ಹಾರಿಸಿದರು.
Advertisement
ಈ ಗೋಪುರದ ಎತ್ತರ 300 ಮೀ. ಗಳಷ್ಟು. ಆಂಟೆನಾ ಮತ್ತೆ 20 ಮೀ. ಇದೆ. ಬುಡದಿಂದ ಮೇಲಿನವರೆಗೆ ಮೂರು ಅಂತಸ್ತುಗಳಿವೆ. 1660 ಮೆಟ್ಟಲುಗಳಿವೆ. ಕಾಲಕಾಲಕ್ಕೆ ಮೆಟ್ಟಲು ಗಳನ್ನು ಮರು ನಿರ್ಮಿಸಿದ ಕಾರಣ ಸಂಖ್ಯೆ ಮೊದಲು ನಮೂದಿಸಿದ ಸಂಖ್ಯೆಗಿಂತ ಬೇರೆಯಾಗಿದೆ. 8 ಲಿಫುrಗಳನ್ನು ಅಳವಡಿಸಲಾಗಿದೆ. ಎರಡನೇ ಅಂತಸ್ತಿನ ನಂತರ ಲಿಫುrಗಳನ್ನು ಉಪಯೋಗಿಸಿಯೇ ಮೇಲೇರಬೇಕು. ಮೆಟ್ಟಲುಗಳನ್ನು ಹತ್ತಲು ಬಿಡುವುದಿಲ್ಲ. ಲಿಫುrಗಳನ್ನು ಹಲವಾರು ಬಾರಿ ಬದಲಾಯಿಸಲಾಯಿತು. ನೆಲದಿಂದ ಎರಡನೆಯ ಮಜಲಿಗೆ ಕೊಂಡೊಯ್ಯುವ ಈಗ ಅಳವಡಿಸಲಾಗಿರುವ ಲಿಫ್ಟ್ ಒಂದೇ ಬಾರಿಗೆ 110 ಜನರನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಎತ್ತರದ ಕಬ್ಬಿಣದ ನಿರ್ಮಿತಿಯಾದುದರಿಂದ ಬಿಸಿಲಿರುವ ಭಾಗ 8 ಸೆ. ಮೀ.ಗಳಷ್ಟು ಹಿಗ್ಗಲು ಅವಕಾಶವಿತ್ತು ನಿರ್ಮಿಸಿದ್ದಾರೆ. ತುಕ್ಕು ಹಿಡಿಯ ದಂತೆ ಪ್ರತಿ ಏಳುವರ್ಷಗಳಿಗೊಮ್ಮೆ ಪೇಂಟ್ ಬಳಿಯುತ್ತಾರೆ.
ಮೊದಲನೆಯ ಮತ್ತು ಎರಡನೆಯ ಅಂತಸ್ತಿನಲ್ಲಿ ಉಪಹಾರಗೃಹಗಳೂ, ಅಂಗಡಿಗಳೂ ಇವೆ. ಮೇಲಿನ ಹಂತದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಪ್ರಸರಣ ಕಾರ್ಯಗಳು ನೆರವೇರುತ್ತವೆ. ಐಫೆಲ್‌ನ ಸ್ವಂತ ಕೊಠಡಿಗಳಲ್ಲಿ ಕಿರಿದಾದ ಸಂಗ್ರಹಾಲಯವಿದೆ. ರಾತ್ರಿಯಲ್ಲಿ ಇಡೀ ಗೋಪುರ ದೀಪಾಲಂಕಾರದಿಂದ ಸುಂದರವಾಗಿ ಕಾಣಿಸುತ್ತದೆ. ದೀಪಾಲಂಕೃತ ಟವರಿನ ಚಿತ್ರಕ್ಕೆ ಫ್ರಾನ್ಸ್ ದೇಶ ಸ್ವಾಮ್ಯ ಪಡೆದುಕೊಂಡಿದೆ.
ಉಮಾಮಹೇಶ್ವರಿ ಎನ್.