Advertisement
ಕರಾವಳಿ ಜಿಲ್ಲೆಗಳ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳು ಈದ್ ಸಂದೇಶ ಮತ್ತು ಪ್ರವಚನ ನೀಡಿದರು. ಪ್ರಮುಖ ಮಸೀದಿಗಳಲ್ಲಿ ಸೌಹಾರ್ದ ಸಭೆ ನಡೆಯಿತು.
ಈದುಲ್ ಫಿತ್ರ ಹಬ್ಬವು ಕುಟುಂಬ, ಸಮಾಜ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯ- ಮನುಷ್ಯರ ನಡುವಣ ಸಂಬಂಧ ವೃದ್ಧಿಗೆ ಪ್ರೇರಣೆ ನೀಡಲಿ. ಹಳಸಿದ ಸಂಬಂಧಗಳು ಮರು ಜೋಡಣೆಯಾಗಲಿ. “ಕೆಡುಕನ್ನು ಒಳಿತಿನ ಮೂಲಕ ಎದುರಿಸಿ’ ಎಂಬ ಕುರ್‌ಆನ್ ಸಂದೇಶ ಹಾಗೂ ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಜಗತ್ತನ್ನು ಗೆದ್ದಿರುವ ಪ್ರವಾದಿ ಬೋಧನೆ ನಮಗೆಲ್ಲಾ ಮಾರ್ಗದರ್ಶಿಯಾಗಲಿ ಎಂದು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಂದೇಶದಲ್ಲಿ ಹೇಳಿದರು.
Related Articles
Advertisement
ಈದ್ ನಮಾಝ್ ಬಳಿಕ ಮಸೀದಿ ಆವರಣದಲ್ಲಿ ಸರ್ವಧರ್ಮೀಯ ಗಣ್ಯರ ಸಮ್ಮುಖ ಸೌಹಾರ್ದ ಸಭೆ ನಡೆಯಿತು. ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ನಮಾಜು ನಡೆಯಿತು., ಮುಸ್ಲಿಮರು ಪರಸ್ಪರ ಶುಭಾಶಯ ಕೋರಿದರು. ಕೆಥೊಲಿಕ್ ಸಭಾದವರು ಜಾಮಿಯ ಮಸೀದಿಗೆ ತೆರಳಿ ಹಬ್ಬದ ಶುಭಾಶಯ ಕೋರಿದರು. ಕಾಸರಗೋಡು ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದುಲ್ ಫಿತ್ರ ಹಬ್ಬ ನಡೆಯಿತು. ವಿಶೇಷ ವ್ಯವಸ್ಥೆ
ಬಾವುಟಗುಡ್ಡೆ ಈದ್ಗಾದಲ್ಲಿ ನಮಾಝ್ಗೆ ಚಪ್ಪರ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸಂಚಾರ ನಿಯಂತ್ರಿಸಿ ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು. ವಿವಿಧೆಡೆ ಮುಸ್ಲಿಂ ಬಾಂಧವರು ಸಿಹಿ ಹಂಚಿ ಸಂಭ್ರಮಿಸಿದರು. ಶಾಂತಿ, ಸಹೋದರತ್ವದ ಹಬ್ಬ : ಖಾದರ್
ಸಚಿವ ಯು.ಟಿ. ಖಾದರ್ ಮಾತನಾಡಿ, ಈದುಲ್ ಫಿತ್ರ ಶಾಂತಿ, ಸಹೋದರತೆ, ಏಕತೆ, ಪರಸ್ಪರ ಸಹಕಾರ ಹಾಗೂ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವಂತಹ ಮೌಲ್ಯಾಧಾರಿತ ಸಂದೇಶ ಸಾರುವ ಹಬ್ಬ ಎಂದು ಹೇಳಿದರು. ಒಂದು ತಿಂಗಳ ಉಪವಾಸದ ಸಂದರ್ಭ ಅನುಸರಿಸಿದ ಶಾಂತಿ, ಸಹನೆಯ ಗುಣಗಳನ್ನು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು; ಈ ದಿಶೆಯಲ್ಲಿ ಹಬ್ಬ ಆಚರಣೆ ಪ್ರೇರಣೆ ಒದಗಿಸಲಿ ಎಂದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಝೀನತ್ ಬಕ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ ಹಬ್ಬದ ಸಂದೇಶ ನೀಡಿದರು. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈದ್ ಹಬ್ಬದ ಶುಭಾಶಯ ಸಲ್ಲಿಸಿದರು. ಮಾಜಿ ಶಾಸಕ ಜೆ.ಆರ್.ಲೋಬೊ, ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ರೆ| ಡಾ| ಪ್ರವೀಣ್ ಮಾರ್ಟಿಸ್, ಡಿಸಿಪಿ ಹನುಮಂತರಾಯ ಮೊದಲಾದವರು ಉಪಸ್ಥಿತರಿದ್ದರು. ಝೀನತ್ ಬಕ್ ಮಸೀದಿಯ ಟ್ರಸ್ಟಿ ಎಸ್.ಎಂ. ರಶೀದ್ ಹಾಜಿ ಸ್ವಾಗತಿಸಿ, ವಂದಿಸಿದರು.