ಕಾರವಾರ: ಜಿಲ್ಲೆಯ ಎಲ್ಲೆಡೆ ಒಂದು ತಿಂಗಳ ಉಪವಾಸ ವ್ರತದ ನಂತರ ಈದ್ -ಉಲ್-ಫಿತರ್ ಆಚರಿಸಲಾಯಿತು. ಕಾರವಾರದಲ್ಲಿನ ಎಲ್ಲ ಮಸೀದಿಗಳಲ್ಲಿ ಬೆಳಗ್ಗೆಯೇ ಮುಸಲ್ಮಾನ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ನಂತರ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಅಕ್ಕಪಕ್ಕದ ಸಮುದಾಯದ ಮನೆಯವರಿಗೆ ಪಾಯಸ ನೀಡಿ ಈದ್ ಸಂತಸ ಹಂಚಿಕೊಂಡರು.
ಫುರ್‌ರ್ಖನ್ ಮಸ್ಜಿದ್‌ನ ಕಾರ್ಯದರ್ಶಿ ಎಂ.ಎಂ. ಶರೀಫ್, ರಾಷ್ಟ್ರ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು. ಶೇಖ್, ಮಾಜಿ ಅಧ್ಯಕ್ಷ ಮೊಹಮ್ಮದ್ ರಫಿ ಮಿರ್ಜಾನ್‌ಕರ್, ವಕೀಲರಾದ ಎಸ್.ಎ. ಖಾಝಿ, ಡಾ| ನಯೀಮ್ ಮುಕಾದಮ್, ಅಬ್ದುಲ್ ರೆಹಮಾನ್, ಫೈಸಲ್ ಮುಕಾದಮ್, ಬಶೀರ್ ಶೇಖ್, ಮೊಹಮ್ಮದ್ ಹಸನ್, ಆಝಾದ್ ಯುಥ್ ಕ್ಲಬ್‌ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್, ಜಂಟಿ ಕಾರ್ಯದರ್ಶಿ ಫೌಜಿ ಮಿರ್ಜಾನ್‌ಕರ್, ನಿಝಾಮುದ್ದಿನ್ ಶೇಖ್, ಆದಂ ಖಾನ್, ಫೈಸಲ್ ಮುಕಾದಂ, ರಿಯಾಝ್ ಮಿರ್ಜಾನ್‌ಕರ್ ಮತ್ತಿತರ ಪ್ರಮುಖರು ಹಾಗೂ ಮುಸ್ಲಿಮ್ ಬಾಂಧವರು ಇದ್ದರು. ಮಹಿಳೆಯರಿಗೂ ಪ್ರಾರ್ಥನೆಗಾಗಿ ವಿಶೇಷ ಸ್ಥಳದ ಅವಕಾಶ ಮಾಡಲಾಗಿತ್ತು.
Advertisement
ನಗರದ ಕೋಡಿಬಾಗದ ಫುರ್‌ಖಾನ್ ಮಸ್ಜಿದ್‌ನಲ್ಲಿ ಬೆಳಗ್ಗೆ 7:15ಕ್ಕೆ ಸರಿಯಾಗಿ ಈದ್-ಉಲ್-ಫಿತರ್ ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಲಾಯಿತು. ಮೌಲಾನಾ ಅಲೀಮ್ ಅತೀಕುಲ್ ರೆಹಮಾನ ಪ್ರಾರ್ಥನೆ ನೆರವೇರಿಸಿಕೊಟ್ಟರು. ನಮಾಝ್ನ ನಂತರ ಎಲ್ಲರನ್ನು ಉದ್ದೇಶಿಸಿ ಪ್ರವಚನ ನೀಡಿದ ಅವರು, ರಂಜಾನ್ ತಿಂಗಳು ಮುಸ್ಲಿಮ್ ಬಾಂಧವರಿಗೆ ಪವಿತ್ರವಾದ ತಿಂಗಳು. ಒಂದು ತಿಂಗಳು ಸಂಪೂರ್ಣವಾಗಿ ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಆಚರಿಸಿ ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಹಸಿವು ಹಾಗೂ ಬಾಯಾರಿಕೆಯ ಅರಿವನ್ನು ಸ್ವತಃ ತಿಳಿದುಕೊಂಡು ಬಡವರಿಗೆ ದಾನ ಮಾಡಿ ಪುಣ್ಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಮುಸ್ಲಿಮ್ ಬಾಂಧವರು ಭೇದ ಭಾವ ಮರೆತು ಜೀವನದಲ್ಲಿ ಅಲ್ಲಾಹನು ತೋರಿಸಿಕೊಟ್ಟ ಮಾರ್ಗದಲ್ಲೇ ನಡೆದು ಎಲ್ಲರಿಗೂ ನೆರವಾಗಬೇಕು. ಈ ತಿಂಗಳಲ್ಲಿ ಆದಷ್ಟು ದಾನಧರ್ಮ ಮಾಡಬೇಕು. ಬಡವರೂ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವಂತೆ ಮಾಡುವುದು ಇಸ್ಲಾಂ ಧರ್ಮದ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಪರಸ್ಪರ ಸೌಹಾರ್ದತೆಯಿಂದ ಬಾಳುವುದರ ಮೂಲಕ ದೇಶದೆಲ್ಲಡೆ ಶಾಂತಿನೆಲೆಸುವಂತೆ ಮಾಡೋಣ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಸಿದ್ದಾಪುರದಲ್ಲಿ ರಂಜಾನ್ ಸಂಭ್ರಮಾಚರಣೆ:
ಸಿದ್ದಾಪುರ: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಬದ್ರಿಯಾಜಾಮೀಯಾ ಮಸೀದಿಯಲ್ಲಿ ಸೇರಿದ ನೂರಾರು ಮುಸ್ಲಿಮರು ಹಾಳದಕಟ್ಟಾದಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಪೂರ್ವದಲ್ಲಿ ಪ್ರಧಾನ ಧರ್ಮಗುರು ಮೌಲಾನಾ ಮೆಹಮೂದ್‌ರಝಾ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಶಕ್ತಿಯನುಸಾರ ದಾನಧರ್ಮ ಮಾಡಲು ಕರೆ ನೀಡಿದರು. ಅಲ್ಲಾಹØನ ಆಜ್ಞೆಯಂತೆ ಹುಝೂರ್ ಪ್ರವಾದಿ ಮೊಹಮ್ಮದ್ ಅವರ ಆಶಯ ಕೂಡಾ ಇದೇ ಆಗಿತ್ತು. ಎಲ್ಲರೂ ಪ್ರೀತಿ ಸೌಹಾರ್ದತೆಯಿಂದ ಕೂಡಿಬಾಳುವಂತೆ ಧರ್ಮ ಬೋಧನೆ ಮಾಡಿದರು. ಮಸೀದಿ ಕಮಿಟಿ ಕಾರ್ಯದರ್ಶಿ ಮುನಾವರ ಎ. ಗುರಕಾರ ಎಲ್ಲರಿಗೂ ಈದ್ ಶುಭಾಶಯ ಕೋರಿದರು. ನಂತರ ಎಲ್ಲರೂ ಷರ್ಮದ್ ಷಾ ವಲಿಅಲ್ಲಾಹ್ ದರ್ಗಾಗೆ ತೆರಳಿ ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಇದ್ದರು.
ಭಟ್ಕಳದಲ್ಲಿ ವಿಶೇಷ ಪ್ರಾರ್ಥನೆ:
ಮಂಗಳವಾರದಂದು ಪವಿತ್ರ ರಂಜಾನ್ ಉಪವಾಸ ಮುಕ್ತಾಯವಾದ ಹಿನ್ನೆಲೆಯಲ್ಲಿ ಬುಧವಾರ ಭಟ್ಕಳದಲ್ಲಿ ರಂಜಾನ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಮಳೆಯಿಲ್ಲವಾದ್ದರಿಂದ ಬೆಳಗ್ಗೆಯ ವಿಶೇಷ ಪ್ರಾರ್ಥನೆಯನ್ನು ಇಲ್ಲಿನ ಈದ್ಗಾ ಮೈದಾನದಲ್ಲಿ ನೆರವೇರಿಸಲಾಯಿತು. ಮಕ್ಕಳು, ಹಿರಿಯರು, ವೃದ್ಧರು ಸೇರಿದಂತೆ ಸಾವಿರಾರು ಜನರು ಶುಭ್ರ ಬಟ್ಟೆ ಧರಿಸಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬೆಳಗ್ಗೆ ಇಲ್ಲಿನ ಜಾಮಿಯಾ ಮಸೀದಿಯಿಂದ ಮೆರವಣಿಗೆ ಮೂಲಕ ಈದ್ಗಾ ಮೈದಾನವನ್ನು ತಲುಪಿದ ಮೌಲಾನಾ ಅಬ್ದುಲ್ ಅಲೀಮ್ ನದ್ವಿ ಅವರು ನೆರೆದ ಸಾವಿರಾರು ಜನರಿಗೆ ಈದ್ ನಮಾಜ್ ಬೋಧಿಸಿದರು. ನಂತರ ಮಾತನಾಡಿದ ಅವರು, ದೇಶದ ಇಂದಿನ ಸ್ಥಿತಿಗತಿಗಳ ಕುರಿತು ಹೇಳಿದರು.