ಹೊಸದಿಲ್ಲಿ : 2018ರ ಈದ್ ಉಲ್ ಫಿತರ್ ಜೂನ್ 15ರ ಶುಕ್ರವಾರವೇ ಅಥವಾ ಜೂನ್ 16ರ ಶನಿವಾರವೇ ಎಂಬುದೀಗ ಚರ್ಚೆಯ ವಿಷಯವಾಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೊತ್ತಿಗೆ ಚಂದ್ರ ದರ್ಶನ ಆಗುವುದರಿಂದ ಈದ್ ಉಲ್ ಫಿತರ್ ಆಚರಣೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇರುವುದು ಸಹಜವೇ ಆಗಿದೆ. ದಿಲ್ಲಿಯಲ್ಲಿ ಈದ್ ಉಲ್ ಫಿತರ್ ಆಚರಿಸಲ್ಪಟ್ಟ ಮರು ದಿನ ಮುಂಬಯಿಯಲ್ಲಿ ಆಚರಣೆಗೊಳ್ಳುವುದು ಕಂಡು ಬರತ್ತದೆ. ಹಾಗಾಗಿ ಈ ಬಾರಿ ಜೂನ್ 15ರ ಶುಕ್ರವಾರ ಮತ್ತು ಜೂನ್ 16ರ ಶನಿವಾರ ಎರಡೂ ದಿನವೂ ಈದ್ ಆಚರಣೆ ಇರುತ್ತದೆ.
ಇಂದು ಗುರುವಾರ ರಾತ್ರಿ ಚಂದ್ರ ದರ್ಶನವಾದೆಡೆಗಳಲ್ಲಿ ನಾಳೆ ಶುಕ್ರವಾರ ಜೂನ್ 15ರಂದು ಈದ್ ಆಚರಣೆ ಇರುತ್ತದೆ. ಎಲ್ಲೆಲ್ಲಿ ಚಂದ್ರ ದರ್ಶನ ನಾಳೆ ಶುಕ್ರವಾರ ಆಗುವುದೋ ಅಲ್ಲೆಲ್ಲ ನಾಡಿದ್ದು ಶನಿವಾರ ಜೂ.16ರಂದು ಈದ್ ಆಚರಣೆ ಆಗುತ್ತದೆ.
ಪವಿತ್ರ ಈದ್ ಉಲ್ ಫಿತರ್ ಅಥವಾ ಈದ್ ಅಲ್ ಫಿತರ್, ಇಸ್ಲಾಮಿಕ್ ಪವಿತ್ರ ರಮ್ಜಾನ್ ಅಥವಾ ರಮದಾನ್ ಉಪವಾಸ ಮಾಸದ 30ನೇ ದಿನ ಕೊನೆಗೊಂಡದ್ದನ್ನು ಅನುಸರಿಸಿ ಆಚರಿಸಲ್ಪಡುತ್ತದೆ. ಅಂತೆಯೇ ಈದ್ ಉಲ್ ಫಿತರ್ ಶವ್ವಾಲ್ ಮಾಸದಲ್ಲಿ ಮುಸ್ಲಿಮರಿಗೆ ಉಪವಾಸಕ್ಕೆ ಅನುಮತಿ ಇಲ್ಲದೆ ಮೊದಲ ಮತ್ತು ಏಕೈಕ ದಿನವಾಗಿದೆ.
29/30 ದಿನಗಳ ಉಪವಾಸದ ಪವಿತ್ರ ರಮ್ಜಾನ್ ಮಾಸ ಕೊನೆಗೊಳ್ಳುವುದನ್ನು ಅನುಸರಿಸಿ ನಡೆಯುವ ಈದ್ ಹಬ್ಬವು ಮುಸ್ಲಿಮರಿಗೆ ಅತ್ಯಂತ ಮಹತ್ವದ ಹಬ್ಬವಾಗಿದೆ. ವಿಶ್ವಾದ್ಯಂತದ ಮುಸ್ಲಿಮರು ಈದ್ ಉಲ ಫಿತರ್ ಹಬ್ಬವನ್ನು ಅಪಾರವಾದ ಧಾರ್ಮಿಕ ಶ್ರದ್ಧೆ ಮತ್ತು ಸ್ಫೂರ್ತಿಯೊಂದಿಗೆ ಸಂಭ್ರಮಪೂರ್ಣವಾಗಿ ಆಚರಿಸುತ್ತಾರೆ.