Advertisement

ಸಂಭ್ರಮದ ಕೊರತೆಯಲ್ಲೂ ಶಾಂತಿಯುತ ಬಕ್ರೀದ್‌

11:35 PM Aug 12, 2019 | Team Udayavani |

ಶ್ರೀನಗರ: ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್‌-ಉಲ್‌-ಅದ್‌ಹಾ ಹಬ್ಬವು ಬಹುತೇಕ ಶಾಂತಿಯುತವಾಗಿ ನೆರವೇ ರಿದೆ. ಸೋಮವಾರ ಕಣಿವೆ ರಾಜ್ಯದಲ್ಲಿ ಎಲ್ಲೂ ಗುಂಡಿನ ದಾಳಿ ನಡೆಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿಲ್ಲ ಎಂದು ಕಾಶ್ಮೀರದ ಐಜಿಪಿ ಎಸ್‌.ಪಿ. ಪಾಣಿ ಅವರು ತಿಳಿಸಿದ್ದಾರೆ.

Advertisement

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದಾದ ಹಿನ್ನೆಲೆಯಲ್ಲಿ ಬಕ್ರೀದ್‌ ದಿನ ನಮಾಜ್‌ಗೆಂದು ಹೊರಬರುವ ಜನ ಪ್ರತಿಭಟನೆಯಲ್ಲಿ ತೊಡಗಬಹುದೇ ಎಂಬ ಆತಂಕವಿತ್ತು. ಆದರೆ, ಅಂಥ ಯಾವುದೇ ಸನ್ನಿವೇಶ ನಿರ್ಮಾಣವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮನೆಗಳಿಂದ ಹೊರಬಂದ ಜನರು ಕೆಲವೊಂದು ನಿರ್ಬಂಧಗಳ ನಡುವೆಯೇ ಪ್ರಾರ್ಥನೆ ನೆರವೇರಿಸಿ ಹಿಂದಿರುಗಿದರು. ಆದರೆ, ಬಕ್ರೀದ್‌ ಸಂಭ್ರಮ ಮಾತ್ರ ಎಂದಿನಂತೆ ಇರಲಿಲ್ಲ. ಇದೇ ವೇಳೆ, ರಾಜ್ಯದ ಪ್ರಮುಖ ರಾಜಕೀಯ ನಾಯಕರಾದ ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಏಕಾಂಗಿಯಾಗಿ ಗೃಹಬಂಧನದಲ್ಲೇ ಹಬ್ಬ ಆಚರಿಸಿದರು.

ಇದೇ ವೇಳೆ, ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತುವನ್ನು ಕಂಡರೆ ಕೂಡಲೇ ಮಾಹಿತಿ ನೀಡುವಂತೆ ರಾಜ್ಯದ ನಾಗರಿ ಕರಿಗೆ ಜಮ್ಮು ಪೊಲೀಸರು ಸೂಚಿಸಿದ್ದಾರೆ. ಉಗ್ರರು ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವ ಹಿನ್ನೆಲೆ ಈ ಸೂಚನೆ ನೀಡಲಾಗಿದೆ.

ಆರೋಪ ಅಲ್ಲಗಳೆದ ಪಡೆ: ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ನಡುವೆಯೇ ಘರ್ಷಣೆ ನಡೆದಿದೆ ಎಂದು ಪಾಕ್‌ ಪತ್ರಕರ್ತ ವಜಾಹತ್‌ ಸಯೀದ್‌ ಖಾನ್‌ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್‌ ಅನ್ನು ಭದ್ರತಾ ಪಡೆ ಅಲ್ಲಗಳೆದಿದೆ. ಇದೊಂದು ಆಧಾರರಹಿತ ಮತ್ತು ಸುಳ್ಳು ಹೇಳಿಕೆ ಎಂದು ಹೇಳಿದೆ. ಕರ್ಫ್ಯೂ ಪಾಸ್‌ ಇರಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯೊಬ್ಬರಿಗೆ ಹೊರಗೆ ಬರಲು ಸಿಆರ್‌ಪಿಎಫ್ ಯೋಧರು ಅನುಮತಿ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ಐವರು ಸಿಆರ್‌ಪಿಎಫ್ ಯೋಧರ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದಾರೆ ಎಂದು ಖಾನ್‌ ಸುಳ್ಳೇ ಸುಳ್ಳು ಪೋಸ್ಟ್‌ ಮಾಡಿದ್ದರು.

Advertisement

ಸಿಹಿ ವಿನಿಮಯಕ್ಕೆ ಪಾಕ್‌ ನಿರಾಕರಣೆ!: ಪ್ರತಿ ವರ್ಷ ಬಕ್ರೀದ್‌ನಂದು ಭಾರತದ ಬಿಎಸ್‌ಎಫ್, ಪಾಕಿಸ್ಥಾನದ ರೇಂಜರ್‌ಗಳ ನಡುವೆ ಸಿಹಿ ವಿನಿಮಯ ನಡೆಯುತ್ತದೆ. ಆದರೆ, ಈ ಬಾರಿ ಎರಡೂ ದೇಶಗಳ ನಡುವೆ ಬಿಗುವಿನ ವಾತಾವರಣ ಇರುವ ಕಾರಣ, ಸೌಹಾರ್ದದ ಸಂಕೇತವಾದ ಈ ಪ್ರಕ್ರಿಯೆ ನಡೆದಿಲ್ಲ. ಗಡಿಯಲ್ಲಿ ಸಿಹಿ ವಿನಿಮಯ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವಂತೆ ಭಾರತದ ಗಡಿ ಭದ್ರತೆ ಪಡೆಯು ಪಾಕ್‌ಗೆ ಸಂದೇಶ ಕಳುಹಿಸಿತ್ತಾದರೂ ಪಾಕ್‌ ರೇಂಜರ್‌ಗಳು ಇದರಲ್ಲಿ ಭಾಗವಹಿಸಲು ನಿರಾಕರಿಸಿದರು ಎನ್ನಲಾಗಿದೆ.

ನಾಲ್ಕು ಟ್ವಿಟರ್‌ ಖಾತೆ ರದ್ದು
ಜಮ್ಮು-ಕಾಶ್ಮೀರದ ಕುರಿತು ವದಂತಿಗಳನ್ನು ಹಬ್ಬುತ್ತಿರುವ, ದೇಶ ವಿರೋಧಿ ಟ್ವೀಟ್‌ ಮಾಡುತ್ತಿರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್‌ ಅಲಿ ಗಿಲಾನಿಯ ಖಾತೆ ಸೇರಿ ದಂತೆ 8 ಟ್ವಿಟರ್‌ ಖಾತೆಗಳನ್ನು ತೆಗೆದು ಹಾಕುವಂತೆ ಟ್ವಿಟರ್‌ ಸಂಸ್ಥೆಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ. ಇವರ ಟ್ವೀಟ್‌ಗಳು ರಾಜ್ಯದಲ್ಲಿ ಶಾಂತಿ ಕದಡು ತ್ತಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪೈಕಿ ನಾಲ್ಕು ಖಾತೆಗಳನ್ನು ಟ್ವಿಟರ್‌ ಡಿಲೀಟ್‌ ಮಾಡಿದ್ದು ಸದ್ಯದಲ್ಲೇ ಉಳಿದ 4 ಖಾತೆಗಳನ್ನು ರದ್ದು ಮಾಡುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರವು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ವಾಗಿರುವ ಕಾರಣಕ್ಕೇ ಕೇಂದ್ರ ಸರಕಾರ ಅಲ್ಲಿದ್ದ ವಿಶೇಷ ಸ್ಥಾನಮಾನ ವಾಪಸ್‌ ಪಡೆದಿದೆ.
ಪಿ. ಚಿದಂಬರಂ, ಕಾಂಗ್ರೆಸ್‌ ನಾಯಕ

ಚಿದಂಬರಂ ಅವರು ಅತ್ಯಂತ ಬೇಜವಾಬ್ದಾರಿಯುತ ಮತ್ತು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುತ್ತಿದ್ದಾರೆ.
ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next