Advertisement

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

01:08 AM Sep 17, 2024 | Team Udayavani |

ಮಂಗಳೂರು: ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನ ಅಂಗವಾಗಿ ಈದ್‌ ಮಿಲಾದ್‌(ಮಿಲಾದುನ್ನಬಿ)ಯನ್ನು ಸಂಭ್ರಮ, ಸಡಗರದಿಂದ ಕರಾವಳಿಯಾದ್ಯಂತ ಸೋಮವಾರ ಆಚರಿಸಲಾಯಿತು.

Advertisement

ರವಿವಾರ ರಾತ್ರಿ ಹೆಚ್ಚಿನ ಮಸೀದಿಗಳಲ್ಲಿ ಮೌಲೂದ್‌ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು. ಬೆಳಗ್ಗೆ ಮಸೀದಿ, ಮದ್ರಸಾಗಳಲ್ಲಿ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಸಿಹಿ ತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮಸೀದಿ, ಮದ್ರಸಾಗಳಲ್ಲಿ ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚ ಲಾಯಿತು. ಕೆಲವೆಡೆ ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮಗಳೂ ನಡೆದವು. ಮಂಗಳೂರಿನ ಬಂದರು, ಕುದ್ರೋಳಿ, ಬೆಂಗರೆ, ಕಾವೂರು ಮತ್ತಿತರೆಡೆ ಮೆರವಣಿಗೆ ನಡೆಯಿತು.

ಸಂಜೆ ಮಂಗಳೂರಿನ ನಡುಪಳ್ಳಿಯಿಂದ ಹೊರಟ ಮೆರವಣಿಗೆಯು ಬಂದರು ಕೇಂದ್ರ ಜುಮಾ ಮಸೀದಿಗೆ ಬಂದಿತು. ಅಲ್ಲಿ ಮಂಗಳೂರು ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಚಾಲನೆ ನೀಡಿದ ಬಳಿಕ ಬಾಂಬೆ ಲಕ್ಕಿ, ರಾವ್‌ ಆ್ಯಂಡ್‌ ರಾವ್‌ ವೃತ್ತ, ಲೇಡಿಗೋಷನ್‌, ಹಂಪನಕಟ್ಟೆ ಮೂಲಕ ಬಾವುಟಗುಡ್ಡೆ ಈದ್ಗಾ ಮಸೀದಿಗೆ ಆಗಮಿಸಿತು. ಅಲ್ಲಿ ಮೌಲೂದ್‌ ಪಾರಾಯಣ ಮೂಲಕ ಮೆರವಣಿಗೆ ಮುಕ್ತಾಯಗೊಂಡಿತು.

ಮಿಲಾದ್‌ ರ್‍ಯಾಲಿ
ಮಂಗಳೂರು ಸೋಷಿಯಲ್‌ ಸರ್ವಿಸ್‌ ಸೆಂಟರ್‌ ಇದರ ವತಿಯಿಂದ ಸಾರ್ವಜನಿಕ ಮಿಲಾದ್‌ ರ್‍ಯಾಲಿಯು ಸೋಮವಾರ ನಗರದಲ್ಲಿ ನಡೆಯಿತು. ಕುದ್ರೋಳಿಯ ನಡುಪಳ್ಳಿ ಜುಮಾ ಮಸೀದಿಯಿಂದ ಆರಂಭಗೊಂಡ ರ್‍ಯಾಲಿಯು ಮಂಗಳೂರಿನ ಕೇಂದ್ರ ಜುಮಾ ಮಸೀದಿ ರಸ್ತೆಯಾಗಿ ಬಾವುಟಗುಡ್ಡದ ಈದ್ಗಾ ಮಸೀದಿವರೆಗೆ ನಡೆಯಿತು. ರ್ಯಾಲಿಯಲ್ಲಿ ಬಂದರ್‌, ಕುದ್ರೋಳಿ ಪರಿಸರದ ಮದ್ರಸ ವಿದ್ಯಾರ್ಥಿಗಳ ಆಕರ್ಷಕ ದಫ್‌ ಪ್ರದರ್ಶನವಿತ್ತು.

Advertisement

ಕೇಂದ್ರ ಜುಮಾ ಮಸೀದಿಯ ಬಳಿ ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್‌ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಮೀಲಾದ್‌ ರ್ಯಾಲಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಮಂಗಳೂರು ಸೋಷಿಯಲ್‌ ಸರ್ವಿಸ್‌ ಸೆಂಟರ್‌ ಅಧ್ಯಕ್ಷ ಕೆ.ಪಿ. ಅಬ್ದುಲ್‌ ರಶೀದ್‌, ಗೌರವಾಧ್ಯಕ್ಷ ಹಾಗೂ ಮಾಜಿ ಮೇಯರ್‌ ಕೆ. ಅಶ್ರಫ್‌, ಉಪಾಧ್ಯಕ್ಷ ಸಂಶುದ್ದೀನ್‌ ಬಂದರ್‌, ಅಶ್ರಫ್‌ ಹಳೆಮನೆ, ಕೋಶಾಧಿಕಾರಿ ಸಫಾ ಸಲೀಂ, ಪ್ರಧಾನ ಕಾರ್ಯದರ್ಶಿ ರಿಯಾಝ್ ಕಚ್‌ಮನ್‌, ಕಾರ್ಯದರ್ಶಿ ರಿಯಾ ಝುದ್ದೀನ್‌ ಸಹಿತ ಅಪಾರ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು. ಸೌಹಾರ್ದ ರ್‍ಯಾಲಿ ಈದ್‌ ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಧ್ವಜವೂ ಕಾಣಿಸಿಕೊಂಡು ಸೌಹಾರ್ದ ಮೆರೆಯಲಾಗಿದೆ.

ಉಡುಪಿಯಲ್ಲಿ ದಫ್ ಕುಣಿತ ಆಕರ್ಷಣೆ:
ಉಡುಪಿ ಜಿಲ್ಲೆಯ ಕಾಪು, ಉಚ್ಚಿಲ, ಮೂಳೂರು, ಪಡುಬಿದ್ರಿ, ಕಾರ್ಕಳ, ಶಿರ್ವ, ಕಟಪಾಡಿ, ನೇಜಾರು, ದೊಡ್ಡಣಗುಡ್ಡೆ, ಕುಂದಾಪುರ ಕೋಡಿ ಸಹಿತ ಹಲವು ಕಡೆಗಳಲ್ಲಿ ಈದ್‌ ಮಿಲಾದ್‌ ಮೆರವಣಿಗೆ, ಪ್ರವಾದಿ ಮುಹಮ್ಮದ್‌ ಪೈಗಂಬರ ಸಂದೇಶ ಸಾರುವ ಹಾಡುಗಳು, ದಫ್ ಕುಣಿತ ಆಕರ್ಷಣೀಯವಾಗಿತ್ತು. ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಕೆಲವು ಕಡೆಗಳಲ್ಲಿ ಹಿಂದೂಗಳು ಕೈಜೋಡಿಸಿ ಸೌಹಾರ್ದ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.