ಕೊಲ್ಕೊತ್ತಾ: ಕೋವಿಡ್ 19 ವೈರಸ್ ದೇಶಾದ್ಯಂತ ವೇಗವಾಗಿ ಹಬ್ಬುತ್ತಿದೆ. ಮೂರನೇ ಹಂತದ ಲಾಕ್ ಡೌನ್ ನಲ್ಲಿ ಕೆಲವೊಂದು ರಂಗಗಳಿಗೆ ರಿಯಾಯಿತಿಯನ್ನು ಘೋಷಿಸಿರುವುದೂ ಇದಕ್ಕೆ ಕಾರಣವಿರಬಹುದು.
ಇತ್ತ ಕೊಲ್ಕೊತ್ತಾದಲ್ಲಿ ಇಮಾಮ್ ಗಳ ಸಂಘಟನೆಯೊಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮನವಿಯೊಂದನ್ನು ಸಲ್ಲಿಸಿದ್ದು ಇದರಲ್ಲಿ ಈ ಬಾರಿ ಈದ್ ಮಿಲಾದ್ ಹಬ್ಬದ ಆಚರಣೆಗೆ ಲಾಕ್ ಡೌನ್ ಸಡಿಲಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಮಾತ್ರವಲ್ಲದೇ ಸದ್ಯ ಇರುವ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 30ರವರೆಗೆ ವಿಸ್ತರಿಸುವಂತೆಯೂ ಬಂಗಾಲ ಇಮಾಮ್ ಗಳ ಸಂಘಟನೆಯು ಮುಖ್ಯಮಂತ್ರಿಯವರನ್ನು ಒತ್ತಾಯಿಸಿವೆ. ಪಶ್ಚಿಮ ಬಂಗಾಲದಲ್ಲಿ ಮೇ 21ರವರೆಗೆ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ. ಈದ್ ಮಿಲಾದ್ ಹಬ್ಬ ಮೇ 25ರಂದು ನಡೆಯಲಿದೆ.
‘ಮೊದಲು ಜನರ ಜೀವ ಮುಖ್ಯ, ಹಬ್ಬವನ್ನು ಆಮೇಲೆ ಬೇಕಾದರೂ ಆಚರಿಸಬಹುದು’ ಎಂದು ಇಮಾಮ್ ಗಳ ಪತ್ರದ ಈ ಒಕ್ಕಣೆ ಹೇಳಿದೆ. ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 30ರವರೆಗೆ ವಿಸ್ತರಿಸುವಂತೆ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ನಾವು ಇದುವರೆಗೆ ಸಾಕಷ್ಟು ತ್ಯಾಗಗಳನ್ನು ಮಾಡಿದ್ದೇವೆ, ಮತ್ತು ನಾವಿದನ್ನು ಮುಂದಕ್ಕೂ ಮಾಡಲು ಸಿದ್ಧರಿದ್ದೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 30ರ ಮೊದಲು ಸಡಿಲಗೊಳಿಸಲೇಬಾರದು.
ಮಾತ್ರವಲ್ಲದೇ ಈ ಬೇಡಿಕೆಯನ್ನು ನೀವು ಕೇಂದ್ರ ಸರಕಾರದ ಮುಂದೆಯೂ ಇಡಬೇಕು ಹಾಗೂ ಮುಸ್ಲಿಂ ಸಮುದಾಯವೇ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಇಮಾಮ್ ಗಳು ಮಮತಾ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ಈ ಪತ್ರದ ಪ್ರತಿಯನ್ನು ವೆಸ್ಟ್ ಬೆಂಗಾಲ್ ವಕ್ಫ್ ಬೋರ್ಡ್, ಜಮಾತೆ-ಇ-ಇಸ್ಲಾಮಿ ಹಿಂದ್ ಹಾಗೂ ಜಮಾತೆ-ಇ- ಉಲಾಮಾ ಹಿಂದ್ ಗಳ ಪಶ್ಚಿಮ ಬಂಗಾಲ ಶಾಖೆಗಳು ಮತ್ತು ವೆಸ್ಟ ಬೆಂಗಾಲ್ ಹಾಜಿ ಕಮಿಟಿ ಮತ್ತು ರಾಜ್ಯದಲ್ಲಿರುವ ಇನ್ನಿತರ ಮುಸ್ಲಿಂ ಸಂಘಟನೆಗಳಿಗೂ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.