Advertisement

ಕರಾವಳಿಯಲ್ಲಿ ಇಂದು ಈದುಲ್‌ ಫಿತ್ರ

10:35 AM May 24, 2020 | sudhir |

ಮಂಗಳೂರು/ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಪಶ್ಚಿಮ ಕರಾವಳಿಯ ಮುಸ್ಲಿಮರು ರವಿವಾರ ಈದುಲ್‌ ಫಿತ್ರ ಹಬ್ಬವನ್ನು ಆಚರಿಸಲಿದ್ದಾರೆ.

Advertisement

ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ಮುಸ್ಲಿಂ ಧರ್ಮ ಗುರುಗಳು ಕರೆ ನೀಡಿದ್ದು, ಹಾಗೆಯೇ ಆಚರಿಸಲಾಗುತ್ತದೆ ಎಂದು ಮಂಗಳೂರಿನ ಖಾಝಿ ಅವರ ಪರವಾಗಿ ಎಸ್‌.ಎಂ. ರಶೀದ್‌ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಎಲ್ಲ ಹಬ್ಬಗಳಂತೆ ಈದುಲ್‌ ಫಿತ್ರ ಕೂಡ ತರಹೇವಾರಿ ಖರೀದಿ, ಶುಭಾಶಯ ವಿನಿಮಯ ಇತ್ಯಾದಿಗಳ ಮೂಲಕ ಆರ್ಥಿಕ ಚಟುವಟಿಕೆ ಮತ್ತು ಸಾಮುದಾಯಿಕ ಚಲನಶೀಲತೆಗೆ ದೊಡ್ಡ ಮಟ್ಟದ ಕೊಡುಗೆ ನೀಡುವಂಥದ್ದು. ಆದರೆ ಈ ವರ್ಷ ಕೋವಿಡ್ ಹಾವಳಿ ಪವಿತ್ರ ರಮ್ಜಾನ್‌ ಹಬ್ಬದ ಪೂರ್ಣ ಸಡಗರದ ಆಚರಣೆಗೆ ಅಡ್ಡಿ ಮಾಡಿದೆ.

ಲಾಕ್‌ಡೌನ್‌ ಕಾರಣ ಮುಖಂಡರ ಮನವಿ ಮೇರೆಗೆ ಶುಕ್ರವಾರದ ಜುಮಾ ನಮಾಝ್, ಕೂಟು ಝಿಯಾರತ್‌ ಸಹಿತ ಬಟ್ಟೆ ಬರೆ ಖರೀದಿಯಿಂದಲೂ ದೂರ ಉಳಿದು ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಲಾಗಿತ್ತು. ಕೋವಿಡ್‌-19 ಸೋಂಕು ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ಮೇ 31ರ ತನಕ ಕೆಲವು ನಿರ್ಬಂಧಗಳಿರುವ ಕಾರಣ ಮುಸ್ಲಿಂ ಬಾಂಧವರು ಉಪವಾಸ ಸಂದರ್ಭ ಮನೆಗಳಲ್ಲೇ ಸಾಮೂಹಿಕ ಪ್ರಾರ್ಥನೆಗಳಲ್ಲಿ ನಿರತರಾಗಿದ್ದರು. ರವಿವಾರವೂ ಮನೆಗಳಲ್ಲಿ ಪ್ರಾರ್ಥನೆ ನಡೆಯಲಿದೆ.

ಬಟ್ಟೆ ಖರೀದಿಯಿಂದ ದೂರ
ರಮ್ಜಾನ್‌ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಗೆಲ್ಲ ಹೊಸ ಬಟ್ಟೆಗಳನ್ನು ಖರೀದಿಸುವುದು ಹಲವಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಪವಿತ್ರ ರಮ್ಜಾನ್‌ ತಿಂಗಳ ಉಪವಾಸದ ಅಂತ್ಯದಲ್ಲಿ ಬರುವ ಈ ಹಬ್ಬದ ಸಲುವಾಗಿ ಹೊಸ ಬಟ್ಟೆ, ತೊಡುಗೆಗಳು ಮತ್ತು ಆಭರಣಗಳ ಖರೀದಿ ಪ್ರತೀ ವರ್ಷ ಜೋರಾಗಿರುತ್ತಿತ್ತು. ಆಹಾರ ಪದಾರ್ಥಗಳ ಖರೀದಿ ಎಲ್ಲೆಡೆ ನಡೆಯುತ್ತಿತ್ತು. ಮಾರುಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಆದರೆ ಈ ಬಾರಿ ಅದೆಲ್ಲವೂ ಅಷ್ಟಾಗಿ ಬಿರುಸಿನಿಂದ ನಡೆದಿಲ್ಲ. ಕೋವಿಡ್ ನಿಂದಾಗಿ ಬಟ್ಟೆ ಬರೆ ಖರೀದಿಯಿಂದ ಮುಸ್ಲಿಮರು ದೂರ ಉಳಿದಿದ್ದರು.

Advertisement

ಸರಳ ಆಚರಣೆ
“ಕೋವಿಡ್ – ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈದುಲ್‌ ಫಿತ್ರ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ’ ಎಂದು ಮಂಗಳೂರಿನ ಖಾಝಿ ಅಲ್‌ಹಾಜ್‌ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಅವರು ಉದಯವಾಣಿಗೆ ತಿಳಿಸಿದ್ದಾರೆ.

“ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ಮಹಾ ರೋಗ ಆದಷ್ಟು ಬೇಗ ನಿರ್ಮೂಲನೆಗೊಳ್ಳಲಿ ಎಂಬುದಾಗಿ ಈ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಎಲ್ಲರಿಗೂ ಈದ್‌ ಹಬ್ಬದ ಶುಭಾಶಯಗಳು’ ಎಂದವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next