ಮುಂಬಯಿ: ಐಷರ್ ಮೋಟಾರ್ಸ್ ಸಂಸ್ಥೆ ಸುಮಾರು 26,300 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್‌ಗಳನ್ನು ಹಿಂಪಡೆಯಲು ಯೋಜಿಸಿ ಉದ್ಯಮ ನಿಯಂತ್ರಕರಿಗೆ ತಿಳಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈ ವರ್ಷದ ಸೆಪ್ಟೆಂಬರ್ 1 ಮತ್ತು ಡಿಸೆಂಬರ್ 5 ರ ನಡುವೆ ತಯಾರಿಸಲಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗಳ ಹಿಂದಿನ ಡ್ರಮ್ ಬ್ರೇಕ್ ನಲ್ಲಿ ವೈಫಲ್ಯ ಕಂಡು ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಸಂಭವನೀಯ ಬ್ರೇಕ್ ಸಮಸ್ಯೆಯಿಂದ ಯಾವುದೇ ಅಪಘಾತಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ಎಂದು ಸಂಸ್ಥೆ ಹೇಳಿದೆ.
ಕಂಪನಿಯು ಸೋಮವಾರ ಬೆಳಗ್ಗೆ ಉದ್ಯಮ ಸಂಸ್ಥೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (SIAM) ಅಧಿಕಾರಿಗಳು ಪಟ್ಟಿಮಾಡಿದ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಮಾಹಿತಿ ನೀಡಿದೆ.
ಹಿಂಭಾಗದ ಬ್ರೇಕ್ ಪೆಡಲ್ ನಲ್ಲಿ ಅಸಾಧಾರಣವಾಗಿ ಹೆಚ್ಚಿನ ಬ್ರೇಕಿಂಗ್ ಲೋಡ್ ಅನ್ನು ಅಳವಡಿಸಲಾಗಿದೆ ಎಂದು ಕಂಡುಹಿಡಿಯಲಾಗಿದೆ, ಇದು ಸಂಭಾವ್ಯ ಹಾನಿಗೆ ಕಾರಣವಾಗಬಹುದು, ಹೆಚ್ಚಿನ ಬ್ರೇಕಿಂಗ್ ಶಬ್ದ ಮತ್ತು ತೀವ್ರ ಪರಿಸ್ಥಿತಿಗಳಲ್ಲಿ ಬ್ರೇಕಿಂಗ್ ದಕ್ಷತೆಯ ಸಂಭಾವ್ಯ ಕ್ಷೀಣತೆಗೆ ಕಾರಣವಾಗಬಹುದು ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
2021ರಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನು ಸೆಪ್ಟೆಂಬರ್‌ನಲ್ಲಿ ₹1.84 ಲಕ್ಷದ ಆರಂಭಿಕ ಬೆಲೆಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಾಗಿತ್ತು.