ಬೆಂಗಳೂರು: ಅತಿವೃಷ್ಟಿಯ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಗನನಕ್ಕೇರಿದ್ದು, ಆ ಹಿನ್ನೆಲೆಯಲ್ಲಿ ಯಶವಂಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಈಗ ಈಜಿಪ್ಟ್ ಈರುಳ್ಳಿ ಲಗ್ಗೆಯಿಟ್ಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ಕೃಷ್ಟ ದರ್ಜೆಯ ಈರುಳ್ಳಿ ಬೆಲೆ ನೂರು ರೂ.ದಾಟಿದೆ. ದಸರಾ ನಡುವೆ ಗ್ರಾಹಕರು ಈರುಳ್ಳಿ ಖರೀದಿಸಿ ಕೈಸುಟ್ಟುಕೊಳ್ಳುವಂತಾಗಿದೆ. ಈ ಎಲ್ಲಾ ಕಾರಣದಿಂದ ಯಶವಂತಪುರ ಕೃಷಿ ಮಾರುಕಟ್ಟೆಗೆ ಬುಧವಾರ 5 ಲೋಡ್ ಈಜಿಪ್ಟ್ ಈರುಳ್ಳಿ ಪೂರೈಕೆ ಆಗಿದೆ. ಕೆ.ಜಿಗೆ 70 ರೂ.ಗೆ ಮಾರಾಟವಾಗುತ್ತಿದೆ.
ಯಶವಂತಪುರ ಮಾರುಕಟ್ಟೆಯ ಆಲೂಗಡ್ಡೆ, ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ್ ಶಂಕರ್‌ಪ್ರತಿ ಕ್ರಿಯಿಸಿ, ಪ್ರತಿ ವರ್ಷ ಈ ಸೀಸನ್‌ನಲ್ಲಿ 75 ರಿಂದ 80 ಲಾರಿಗಳ ಮೂಲಕ ಈರುಳ್ಳಿ ಪೂರೈಕೆ ಆಗುತ್ತಿತ್ತು. ಆದರೆ ಅತಿವೃಷ್ಟಿಯ ಹಿನ್ನೆಲೆ ಹೇರಳವಾಗಿ ಈರುಳ್ಳಿ ಉತ್ಪನ್ನ ದೊರಕುತ್ತಿಲ್ಲ . ಹೀಗಾಗಿಯೇ ಬುಧವಾರ ಯಶವಂತಪುರ ಮಾರುಕಟ್ಟೆಗೆ ಕೇವಲ 39 ಸಾವಿರ ಈರುಳ್ಳಿ ಮೂಟೆ ಬಂದಿದೆ ಎಂದರು. ಚಿತ್ರದುರ್ಗ, ದಾವಣಗೆರೆ,ಹುಬ್ಬಳ್ಳಿ -ಧಾರಾವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಯಶಂತಪುರ ಮಾರುಕಟ್ಟೆಗೆ ರವಾನೆ ಆಗುತ್ತಿತ್ತು. ಆದರೆ ಮಳೆ ಸೇರಿದಂತೆ ಮತ್ತಿತರ ಕಾರಣದಿಂದಾಗಿ ಬಂದಿಲ್ಲ. ಹೀಗಾಗಿ ಮುಂಬೈ ಮೂಲದಿಂದ ಖರೀದಿಸಲಾಗಿದೆ ಎಂದರು.
ಉತ್ತಮ ಗುಣಮಟ್ಟದ ಈರುಳ್ಳಿ ಮೊಟೆ(50ಕೆ.ಜಿ)ಗೆ3,650 ರಿಂದ 3,700 ರೂ.ವರೆಗೂ ಮಾರಾಟವಾಗುತ್ತಿದೆ. ಹಾಗೆಯೇ ಕರ್ನಾಟಕ ಭಾಗದಿಂದ ಬರುತ್ತಿರುವ ಈರುಳ್ಳಿ 3,150 ರಿಂದ 3,500 ರೂ.ವರೆಗೆ ಖರೀದಿಯಾಗುತ್ತಿದೆ.
ಹಾಪ್‌ಕಾಮ್ಸ್ ನಲ್ಲಿ 1 ಕೆ.ಜಿಗೆ 109 ರೂ.: ಹಾಪ್‌ಕಾಮ್ಸ್‌ನಲ್ಲಿ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. 109 ರೂ.ಗೆ ಒಂದುಕೆ.ಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಈರುಳ್ಳಿ ಹೂವು 47ರೂ.ಗಳಿಗೆ ಖರೀದಿ ಆಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 75 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಈರುಳ್ಳಿ ಬೆಳೆ ಅತಿವೃಷ್ಟಿಯಿಂದ ಹಾನಿಗೊಳಲಾಗಿದೆ. ಹೀಗಾಗಿ, ಹಲವು ದಿನಗಳಕಾಲ ಬಾಳಿಕೆ ಬರುವಂಥ ಮುಂಬೈ ಮೂಲದ ಈರುಳ್ಳಿ ಖರೀದಿ ಮಾಡಲಾಗುತ್ತಿದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ತಿಳಿಸಿದ್ದಾರೆ.
ಅತಿವೃಷ್ಟಿಯ ಹಿನ್ನೆಲೆಯಲ್ಲಿ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಗಾತ್ರದಲ್ಲಿ ದೊಡ್ಡದಿರುವ ಉತ್ಕೃಷ್ಟ ದರ್ಜೆಯ ಮುಂಬೈ ಮೂಲದ ಈರುಳ್ಳಿಗೆ ಮತ್ತಷ್ಟು ಬೇಡಿಕೆ ಬಂದಿದೆ.
–ರವಿಶಂಕರ್, ಯಶವಂತಪುರ ಮಾರುಕಟ್ಟೆ ಈರುಳ್ಳಿ-ಆಲೂಗಡ್ಡೆ ವರ್ತಕರು