ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಸೋಂದಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಮುಂಡಿಗೆ ಕೆರೆ ಪಕ್ಷಿಧಾಮಕ್ಕೆ ಬೆಳ್ಳಕ್ಕಿಗಳ ಆಗಮನವಾಗಿದೆ!
ಮೊನ್ನೆ ಮಂಗಳವಾರ ಮುಂಜಾನೆ ಆಗಮಿಸಿ ಸಂಜೆ ಹೊತ್ತು ವಾಸ್ತವ್ಯ ಮಾಡಿರುವುದು ಕಂಡು ಬಂದಿದೆ. ಕಳೆದ ವರ್ಷ ಜೂನ್ 18ಕ್ಕೆ ಕೆರೆಗೆ ಇಳಿದು ವಾಸ್ತವ್ಯ ಮಾಡಿದ್ದರೆ, ಈ ವರ್ಷ ಏಳು ದಿನಗಳ ತಡವಾಗಿ ಕೆರೆಗೆ ಇಳಿದಿವೆ. ಅಬ್ಬರದ ಮಳೆ ಇಲ್ಲದಿದ್ದರೂ ವಾತಾವರಣದಲ್ಲಿ ಆದ ಬದಲಾವಣೆಯೊಂದಿಗೆ, ಉತ್ತಮ ಮಳೆಯ ಸಂದೇಶ ಗ್ರಹಿಸಿ, ಆರಿದ್ರ ಮಳೆಯಲ್ಲಿ ಈ ವರ್ಷ ಬೆಳ್ಳಕ್ಕಿಗಳು ಕೆರೆಗೆ ಆಗಮಿಸಿವೆ. ಈಗಾಗಲೇ ಪುಟ್ಟ ಗೂಡು ಕಟ್ಟಿಕೊಳ್ಳಲು ಕಡ್ಡಿ ತರುತ್ತಿವೆ.
ಸುಮಾರು ನೂರಾರು ವರ್ಷಗಳಿಂದ ಬೆಳ್ಳಕ್ಕಿಗಳು ಮಳೆಗಾಲದಲ್ಲಿ ತಮ್ಮ ವಂಶಾಭಿವೃದ್ಧಿಗಾಗಿ ಮುಂಡಿಗೆ ಕೆರೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿಯ ಸ್ಥಳೀಯ ಪಕ್ಷಿಗಳು ಇಲ್ಲಿಗೆ ಬರುತ್ತಿರುವುದು ಕಂಡು ಬರುತ್ತವೆ ಎಂದು ಕರ್ನಾಟಕದ ಖ್ಯಾತ ಪಕ್ಷಿತಜ್ಞರಾಗಿದ್ದ ಪಿ.ಡಿ.ಸುಧರ್ಶನ್ 1980 ರಲ್ಲೆ ಉಲ್ಲೇಖಿಸದ್ದಾರೆ. ನಾಲ್ಕು ಎಕರೆ 14 ಗುಂಟೆ ಕ್ಷೇತ್ರದ ಸರ್ಕಾರಿ ಕೆರೆಯಲ್ಲಿ ಬೃಹತ್ ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಗಳಾದ ನಂತರ ಅವುಗಳ ಲಾಲನೆ ಪೋಷಣೆ ಮಾಡಿಕೊಂಡು ಅವುಗಳಿಗೆ ಹಾರಾಟದ ತರಬೇತಿ ನೀಡಿ, ಮರಿಗಳೊಂದಿಗೆ ಆಹಾರ ಲಭ್ಯ ಇರುವೆಡೆ ಹಾರಿ ಹೋಗುತ್ತವೆ.
ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಕೆರೆಗೆ ಇಳಿಯುತ್ತಿರುವ ಬೆಳ್ಳಕ್ಕಿಗಳು ನವೆಂಬರ್ ಕೊನೆಯವರೆಗೆ ಇಲ್ಲಿ ಇರುತ್ತಿದ್ದವು. ಆದರೆ ಕಳೆದ2023 ರಿಂದ ಬೆಳ್ಳಕ್ಕಿಗಳ ಆಗಮನ ನಿರ್ಗಮನದಲ್ಲಿ ಭಾರಿ ಬದಲಾವಣೆಯಾಗಿದ್ದು ಕಂಡು ಬಂತು. ಬೆಳ್ಳಕ್ಕಿಗಳು ಕಳೆದ ವರ್ಷ ಜೂನ್ 18ಕ್ಕೆ ಮೊದಲ ತಂಡ ಕೆರೆಗೆ ಇಳಿದಿದ್ದು ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ನಂತರ ಆಗಮಿಸಿದ ಬೆಳ್ಳಕ್ಕಿಗಳು ಗೂಡು ಕಟ್ಟಿದ್ದರು ಮೊಟ್ಟೆ ಇಡದೆ, ಅಗಸ್ಟ್ 18ರ ವೇಳೆಗೆ ಗೂಡು ತೊರೆದು ಹೋಗಿದ್ದವು. ಮೊದಲ ಗುಂಪಿನಲ್ಲಿ ಬಂದ ಸುಮಾರು 25ರಿಂದ 30 ಪಕ್ಷಿಗಳು ಮಾತ್ರ ಗೂಡು ಕಟ್ಟಿದ್ದು ಅವು ಮರಿಗಳ ಲಾಲನೆ ಪೋಷಣೆ ಮಾಡಿಕೊಂಡು, ಮರಿಗಳಿಗೆ ಹಾರಾಟವನ್ನು ಕಲಿಸಿದ ನಂತರ, ಮುಂಡಿಗೆ ಕೆರೆಯಿಂದ ಹೊರಗೆ ಹೋಗಿರುವುದು ಕಂಡು ಬಂತು. ನಂತರ ಬಂದ ಪಕ್ಷಿಗಳು ಗೂಡು ಕಟ್ಟಿದ್ದರೂ ಹಾಗೆ ಆಗಸ್ಟ್ 18 ರ ನಂತರ ಹಾರಿ ಹೋಗಿವೆ. ಈ ವಿದ್ಯಮಾನಕ್ಕೆ ಪ್ರತಿಕೂಲ ವಾತಾವರಣವೋ? ಅಥವಾ ಮಾನವರಿಂದ ಇವುಗಳಿಗೆ ಏನಾದರೂ ತೊಂದರೆ ಉಂಟಾಗಿತ್ತೋ? ಎಂದು ತಿಳಿಯಬೇಕಾಗಿದೆ. ಈ ಮಧ್ಯೆ ಈ ವರ್ಷ ಇಲ್ಲಿಯ ಬೆಳವಣಿಗೆಯನ್ನು ಕಾದು ನೋಡಬೇಕು.
ಈ ವರ್ಷ ಮುಂಡಿಗೆ ಕೆರೆ ಪಕ್ಷಿಧಾಮದ ಸರಹದ್ದಿನಲ್ಲಿ ಜನವರಿಯಿಂದ ಜೂನ್ 26ರವರೆಗೆ ಬಿದ್ದ ಮಳೆಯ ಪ್ರಮಾಣ 428.8 ಮಿಲಿ ಮೀಟರ್ ಆಗಿದ್ದು, ಹಿಂದಿನ ದಾಖಲೆಗಳನ್ನು ಗಮನಿಸಿದಾಗ ಕಳೆದ ಐದು ವರ್ಷಗಳಲ್ಲಿ ಜೂನ್ ವರೆಗೆ ಬಿದ್ದ ಅತ್ಯಂತ ಕಡಿಮೆ ಮಳೆಯಾಗಿದರ. 2023 ರಲ್ಲಿ138.9 ಮಿ.ಮೀ ಆಗಿತ್ತು. ಈ ಭಾಗದ ರೈತರಿಗೆ ಮಳೆಯ ನಿಖರ ಮುನ್ಸೂಚನೆ ನೀಡುವ ಏಕೈಕ ತಾಣ ಮುಂಡಿಗೆ ಕೆರೆ ಪಕ್ಷಿಧಾಮ ಆಗಿದ್ದು, 1995 ರಿಂದ ಸೋಂದಾ ಜಾಗೃತ ವೇದಿಕೆ ಇಲ್ಲಿಯ ಆಗೂ ಹೋಗುಗಳನ್ನು ಹತ್ತಿರದಿಂದ ಗಮನಿಸಿ ದಾಖಲಿಸುತ್ತಾ ಬಂದಿದೆ ಎಂಬುದೂ ಉಲ್ಲೇಖನೀಯ ಎನ್ನುತ್ತಾರೆ ವೇದಿಕೆಯ ರತ್ನಾಕರ ಬಾಡಲಕೊಪ್ಪ.
ಚಿತ್ರಗಳು: ಆದಿತ್ಯ ಹೆಗಡೆ ಬಾಡಲಕೊಪ್ಪ ಮತ್ತು ಶಶಾಂಕ್ ಹೆಗಡೆ ಸುಗಾವಿ.
ಇದನ್ನೂ ಓದಿ: DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?