Advertisement

ಗರ್ವದ ದುರ್ಗದಲ್ಲಿ ಉಸಿರುಗಟ್ಟಿಸುವ ಅಹಂ

12:30 AM Jan 20, 2019 | |

ಅಹಂಕಾರ ಸ್ವಭಾವ ಗುರಿ ಸಾಧನೆಗೆ ಪೋಷಕವಾದ, ಪ್ರೇರಕವಾದ, ಪೂರಕವಾದ ಪ್ರಯತ್ನ ಮಾಡಲು ಸಹಕರಿಸುವುದಿಲ್ಲ. ಇದರಿಂದ ಅನೇಕರು ತಮ್ಮ ಗುರಿಯನ್ನು ಮರೆತು ಕೇವಲ ಕ್ಷುಲ್ಲಕ ಗೆಲುವಿನ ಭ್ರಮೆಯಲ್ಲಿ ತಮ್ಮನ್ನು ಕಳೆದುಕೊಂಡು ಸೋಲಿಗೆ ಸಮೀಪವಾಗುತ್ತಾರೆ.

Advertisement

ಅಹಂಕಾರ ಎಂಬುದು ಒಂದು ಮನೋವಿಕಾರ. ಮನಸ್ಸಿನ ಕ್ಷೊàಭೆ. ತಾಮಸಿಕ ಲಕ್ಷಣ. ಇದು ಅಧೋಗತಿಗೆ ನಾಂದಿ ಎಂಬ ಮಾತೊಂದಿದೆ. ವಿನಾಶಕಾರಿಯಾದ ಆರು ಶತ್ರುಗಳ ಪಂಕ್ತಿಯಲ್ಲಿ ಅಹಂಕಾರವೂ ಒಂದು. ಮಾಯೆಯೆಂಬ ಬಾಳಿನಲ್ಲಿ ಒಂದು ಕ್ಷಣ ನಾವು ಮೈಮರೆತರೆ ಮದಗುಣ ನಮ್ಮನ್ನು ಪ್ರಬಲಿಸಿ ನುಂಗಿ ಹಾಕುತ್ತದೆ. ಇದಕ್ಕೆ ಸಾಕ್ಷಿಯಾಗಿ ಅನೇಕ ದಾನವರು, ಮಾನವರು ಇದ್ದಾರೆ. ಇತಿಹಾಸದ ಅನೇಕಾನೇಕ ಪುಟಗಳಲ್ಲಿ ಅಹಂಕಾರದಿಂದ ಉಂಟಾದ ಅನರ್ಥಗಳ ಸರಮಾಲೆಯೇ ದಾಖಲಾಗಿದೆ. ಅಹಂಕಾರ ಎಂಬುದು ನಮ್ಮ ಬುದ್ಧಿಗೆ ಭ್ರಮೆಯನ್ನುಂಟುಮಾಡಿ ನಮಗೆ ಪಾಶವಾಗಬಹುದು. ಈ ಗರ್ವಗುಣಕ್ಕೆ ಮನಸ್ಸಿನಲ್ಲಿ ಆ ವೇಗವನ್ನುಂಟು ಮಾಡಿ ತಾರತಮ್ಯ ವಿವೇಕವನ್ನು ನಾಶಪಡಿಸಿ ಮೋಸದಿಂದ ನಮಗರಿವಿಲ್ಲದಂತೆಯೇ ವಿನಾಶದ ಕಡೆ ಎಳೆದೊಯ್ಯಬಹುದಾದ “ಶಕ್ತಿ-ಸಾಮರ್ಥ್ಯ’ ಇದೆ. ಅದಕ್ಕೆ ಸರ್ವಜ್ಞ ಅದನ್ನೊಂದು “ನಾನೆಂಬ ರೋಗ’ ಎಂದು ಕರೆದದ್ದು, ಅಂದಾಗ ಅಹಂಕಾರ ಗುಣದಿಂದ ಉದ್ಭವಿಸುವ ದುಷ್ಪರಿಣಾಮಗಳು ಅಪರಿಮಿತ, ಅಗಣಿತ, ಅಗಾಧ, ಅನಂತ.

ನಾನು ಎಂಬ ಅಹಂಭಾವ ಸಂಪೂರ್ಣ ವಿಶ್ವವನ್ನು ವ್ಯಾಪಿಸಿದೆ. “ಮೊದಲು ನಾನು’, “ಮೊದಲ ಮಣೆ ನನಗೆ’ ಎಂಬ ಭಾವನೆಗಳು ಪ್ರಪಂಚದ ಎಲ್ಲಾ ಜಗಳ ಮತ್ತು ದುಃಖಗಳ ಮೂಲ. ನಮಗೆ ಎಲ್ಲೆಲ್ಲಿಯೂ ಇರುವ ಶತ್ರು ಎಂದರೆ ಹಲವಾರು ಆಕಾರಗಳನ್ನು ಹಾಗೂ ಮಾಯಾರೂಪಗಳನ್ನು ತಾಳಿರುವ ಅಹಂಕಾರವೆಂಬ ರಾಕ್ಷಸ. ಪ್ರತಿಯೊಬ್ಬರ ನಾನು-ನಾನುಗಳ ಒದರಾಟ, ಕೂಗಾಟ ಹಾಗೂ ಕೆರಳುವಿಕೆಗಳೇ ಜಗತ್ತಿನಲ್ಲಿ ಎಲ್ಲೆಲ್ಲೂ ತೋರುತ್ತಿದೆ. ಈ ಸಂಸಾರದ ಜಂಜಾಟಕ್ಕೆ ಕಾರಣ “ನಾನು’ ಎಂಬ ಅಹಂಭಾವ. “ನಾನು’ ಎನ್ನುವ ಅಹಂಕಾರವೇ ಸಂಸಾರದಲ್ಲಿ ಆಟವಾಡಿಸುವುದು. ಈ ಅಹಂಭಾವದಿಂದ ಬದುಕುವವರು ಪ್ರಾಕೃತಿಕ ನಿಯಮಗಳನ್ನು ಮರೆಯುತ್ತಾರೆ.

ಬಡಾಯಿ ಕೊಚ್ಚಿಕೊಳ್ಳುವುದು, ಸ್ವಪ್ರಶಂಸೆ ಮಾಡಿಕೊಳ್ಳುವುದು ಅನೇಕರಿಗೆ ರಕ್ತಗತವಾಗಿ ಬಂದ ಗುಣ. ಇಂತಹ ಜೀವಿಗಳು ಸಮಾಜಕ್ಕೆ ಎಲ್ಲಕ್ಕಿಂತ ಹೆಚ್ಚು ಬಾಧಕರು. ಸ್ವಾರ್ಥಪ್ರೇರಿತ ಈ ಜನಸಮೂಹ ಮಾಡುವ ಹಾನಿ ಅಷ್ಟಿಷ್ಟಲ್ಲ. ನಾನೇ ಸೃಷ್ಟಿಕರ್ತ, ನಾನುಂಟೊ ಮೂರೊÉàಕ ಉಂಟೊ? ಎನ್ನುವುದು ಅನೇಕರ ಅಂಬೋಣ, ಅನಿಸಿಕೆ. ಈ “ನಾನು’ “ನನ್ನದೇ’ “ನನ್ನಿಂದ’ ಎಂಬುದರ ಕಿರುಚಾಟ-ಕೂಗಾಟವೇ ಪ್ರಪಂಚದ ಹುಚ್ಚಾಟ  -ಕಚ್ಚಾಟಗಳಿಗೆ ನಾಂದಿ. ಅಹಂಕಾರವೆಂಬ ನಂಜುತುಣುಕು ತನ್ನ ಆಂತರಿಕ ಹಾಲಾ ಹಲವನ್ನು ಹೊರಗೆಸೆಯಲು ಯಾವಾಗಲೂ ಅವಕಾಶಗಳನ್ನು ಶೋಧಿಸುತ್ತಿರುತ್ತದೆ. 

ಜ್ಞಾನದ ಕೇಡು ನೋಡಯ್ಯ
ಅಹಂಕಾರ ಮಾನವನ ಪರಮಶತ್ರು. ಇದು ಒಂದು ಆತ್ಮಘಾತುಕವಾದ ಅನಿಷ್ಟ. ಇದು ಜ್ಞಾನಾರ್ಥಿ ಹಾಗೂ ಜ್ಞಾನಮಾರ್ಗಗಳ ಮಧ್ಯೆ ತೆರೆಯೆಳೆಯುತ್ತದೆ. ಅಹಂಭಾವ ಎಂಬುದು ನಮ್ಮ ಸುಗಮವಾದ, ಸರಾಗವಾದ ಬಾಳಿಗೆ ಒಂದು ಅಗಾಧಗಾತ್ರದ ಕಂಟಕ. “ಅಹಂ’ ಎಂಬುದೊಂದು ಸ್ವಯಂ ಪ್ರಾಮುಖ್ಯದ ವಿಪರೀತ ಭಾವನೆ.

Advertisement

ಅಹಂಕಾರ ಸ್ವಭಾವ ಗುರಿ ಸಾಧನೆಗೆ ಪೋಷಕವಾದ, ಪ್ರೇರಕವಾದ, ಪೂರಕವಾದ ಪ್ರಯತ್ನ ಮಾಡಲು ಸಹಕರಿ ಸುವುದಿಲ್ಲ. ಇದರಿಂದ ಅನೇಕರು ತಮ್ಮ ಗುರಿಯನ್ನು ಮರೆತು ಕೇವಲ ಕ್ಷುಲ್ಲಕ ಗೆಲುವಿನ ಭ್ರಮೆಯಲ್ಲಿ ತಮ್ಮನ್ನು ಕಳೆದುಕೊಂಡು ಸೋಲಿಗೆ ಸಮೀಪವಾಗುತ್ತಾರೆ. ಈ ಸ್ವಭಾವದಿಂದ ಜ್ಞಾನದ ವೃದ್ಧಿ ಕುಂಠಿತಗೊಳ್ಳುತ್ತದೆ. ಅಹಂಕಾರ ಅಂಧಕಾರವನ್ನು ತರುತ್ತದೆ. ನಿರ್ದಿಷ್ಟ ವ್ಯಕ್ತಿಯು ತಾನಾಗಿಯೇ ಶೋಚನಿಯ ಸಂದರ್ಭಗಳನ್ನು ಹಾಗೂ ಪ್ರಭುತ್ವಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ತನ್ನದೇ ಸದಾ ಸರಿ ಎಂಬ ಅಸಂಬದ್ಧ ವರ್ತನೆ ಆತನ ಗುರುತು- ಚಿಹ್ನೆ. ಬಹಿರಂಗದಿಂದ  ಪರಿಶುದ್ಧ ತಂಗಾಳಿ ಬರದಂತೆ ಕಿಟಕಿ ದ್ವಾರಗಳನ್ನು ಮುಚ್ಚಿ ಗರ್ವವೆಂಬ ದುರ್ಗದಲ್ಲಿ ಉಸಿರುಗಟ್ಟಿ ಚಡಪಡಿಸುವ ಹೀನಸ್ಥಿತಿಯನ್ನು ಅಹಂಕಾರಿಯು ಸ್ವ-ಇಚ್ಛೆಯಿಂದ ನಿರ್ಮಾಣ ಮಾಡಿಕೊಳ್ಳುತ್ತಾನೆ.

ಅನರ್ಥ ಪರಂಪರೆಯನ್ನು ಸೃಷ್ಟಿಸುವ ಕಾರ್ಯ ಅಹಂಕಾರದ್ದು. ಇದು ಮಾನವನನ್ನು ದುರ್ಮಾರ್ಗದೆಡೆಗೆ ಸಾಗಲು ಪ್ರೇರಣೆ ನೀಡುತ್ತದೆ. “ಹಾವು ತಿಂದವರ ನುಡಿಸಲುಬಹುದು, ಗ್ರಹ ಹಿಡಿದವರ ನುಡಿಸಲುಬಹುದು, ಸಿರಿಗರ ಹೊಡೆದವರ ನುಡಿಸಲುಬಾರದು’ ಎಂಬುದು ಅಹಂಕಾರದ ಗಂಭೀರ ಪರಿಣಾಮಗಳ ಬಗ್ಗೆ ಬಸವಣ್ಣನವರ ಅಭಿಪ್ರಾಯ. ಅಹಂಕಾರದ ಅಮಲು ಭಯಂಕರ. ಇದು ವ್ಯಕ್ತಿಯಲ್ಲಿರುವ ಸಕಲ ಸದ್ಗುಣಗಳನ್ನು ನಾಶಮಾಡಿಬಿಡುತ್ತದೆ.

ಯಾರ ಬುದ್ಧಿ ಬಲಿತಿಲ್ಲವೋ ಅಂತಹ ಜನಾಂಗವನ್ನು ಅಹಂಕಾರವು ಪೀಡಿಸುತ್ತದೆ. ಬಾವಿಯೊಳಗಿನ ಕಪ್ಪೆಯ ತಿಳುವಳಿಕೆಯಂತೆ ಅವರ ಯೋಚನಾ ಲಹರಿ. ಅಂತಹ ಜನಸಮೂಹದ ಆಂತರಿಕ ಶಕ್ತಿಗಳು ಅವ್ಯವಸ್ಥಿತ ರೂಪದಲ್ಲಿರುತ್ತದೆ. “ಯೇನಕೇನ ಪ್ರಕಾರೇಣ ಪ್ರಸಿದ್ಧ ಪ್ರಭುಷೋಭವ’ ಎಂಬ ನುಡಿಯಂತೆ ಸರ್ವರೂ ನನ್ನ ಗುಣಗಾನ ಮಾಡಬೇಕು ಎಂಬುದು ಅಂತಹ ಜನರ ಮನೋಬಯಕೆ. “ಅಹಂಕಾರ ತುಂಬಿರುವ ಮನುಷ್ಯ ಕೇವಲ ಮೂರ್ಖನಷ್ಟೇ ಅಲ್ಲ. ತಾನೇ ಎಲ್ಲವನ್ನೂ ಮಾಡುವವನು ಎಂದು ತಿಳಿದುಕೊಂಡಿರುವ  ಕಡು ಮೂರ್ಖ’ ಎಂದು ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ. “ಜಂಬಗಾರರನ್ನು ದೇವರು ಪ್ರೀತಿಸುವುದಿಲ್ಲ’ ಎಂದು ಮಹಮ್ಮದ್‌ ಪೈಗಂಬರರು ಒಂದೆಡೆ ಹೇಳಿದ್ದಾರೆ. ಒಟ್ಟಿನಲ್ಲಿ ನವನವೋನ್ಮೆàಶಶಾಲಿ ಚಟುವಟಿಕೆಗಳ ಮೂಲಕ ಪ್ರಪಂಚಕ್ಕೆ ಮಹದುಪಕಾರ ಮಾಡುತ್ತಿರುವ ಪ್ರಕೃತಿಯ ಎದುರಿಗೆ “ನಾನು…ನಾನು’ ಎಂಬ ಗರ್ವದಿಂದ ಬೀಗುತ್ತಿರುವ ಮಾನವನ ನಡವಳಿಕೆ ನಿಜವಾಗಿಯೂ ಹಾಸ್ಯಾಸ್ಪದ.

ತಮಸೋಮ ಜ್ಯೋತಿರ್ಗಮಯ
ಅಹಂ ಎನ್ನುವ ಮುಳ್ಳನ್ನು ಬುಡಸಮೇತ ಕಿತ್ತು ಎಸೆಯುವವರೆಗೆ ಅಭಿವೃದ್ಧಿ ಅಸಂಭವ. ಅಹಂಕಾರ ಇಲ್ಲದ ಮನಸ್ಸಿನಲ್ಲಿ ಬ್ರಹ್ಮನ ವಾಸಸ್ಥಾನ. ಆದ್ದರಿಂದ ಸಾಧ್ಯವಾದಷ್ಟು ನಾನು ಎಂಬ ಶಬ್ದದ ಬದಲಿಗೆ ನಾವು ಎಂಬುದನ್ನು ಪ್ರಯೋಗಿಸಿದರೆ ಅತ್ಯುತ್ತಮ. ಕೇವಲ ಒಬ್ಬರಿಂದ ಯಾವ ಕಾಯಕವೂ ಸಾಧ್ಯವಿಲ್ಲ. ಪ್ರತ್ಯಕ್ಷವಾಗಿಯೋ, ಅಪ್ರತ್ಯಕ್ಷವಾಗಿಯೋ ಅನ್ಯರ ಅಲ್ಪ ಸಹಾಯವಾದರೂ ಬೇಕು ಎಂಬ ದೃಷ್ಟಿಕೋನವನ್ನು ಅಥವಾ ಮನೋವೃತ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಕ್ಷಣದಲ್ಲಿ ಅಜ್ಞಾನ, ಅಹಂಕಾರವೆಲ್ಲ ಮಂಗಮಾಯವಾಗುತ್ತದೆ. ಅಲೆ ಅಲೆಗಳಾಗಿ ಉದ್ಭವಿಸುವ ಮನದ ತಾಮಸಿಕ ಭಾವನೆಗಳನ್ನು ನಯದಿಂದಾಗಲಿ, ಭಯದಿಂದಾಗಲಿ ನಿಯಂತ್ರಿಸಬೇಕು. “ಅಹಂ ಇರುವ ತನಕ ಮನುಷ್ಯನಿಗೆ ಸಂಕಟದಿಂದ ಮುಕ್ತಿ ಇಲ್ಲ’ ಎಂಬ ರಾಮಕೃಷ್ಣ ಪರಮಹಂಸರ ಮಾತು ಪ್ರಸ್ತುತವಾದದ್ದು.

ಒಂದೊಮ್ಮೆ “ಅಹಂ’ ಕಳೆದುಬಿಟ್ಟರೆ ಅರಿಷಡ್ವರ್ಗಗಳಲ್ಲಿ ಅರ್ಧ ಗೆದ್ದಂತೆಯೇ. ಅದೇ ಸಾûಾತ್ಕಾರಕ್ಕೆ ಕೊನೆಯ ಪಾಠ. ಪ್ರತಿಯೊಬ್ಬ ವ್ಯಕ್ತಿಯೂ “ಈ ಜಗತ್ತು ಸಿಂಧು, ನಾನು ಅದರೊಳಗಿನ ಬಿಂದು’ ಎಂಬ ಜ್ಞಾನವನ್ನು ಪಡೆದುಕೊಳ್ಳಬೇಕು.”ಅಹಂ’ ರಹಿತ ಸ್ಥಿತಿಯಿಂದ ಬ್ರಾಹ್ಮಿ ಸ್ಥಿತಿಯೆಡೆಗೆ ಪಯಣಿಸುವ ಪ್ರಯತ್ನ ನಮ್ಮದಾಗಬೇಕು. ನಿರಹಂಕಾರವೇ ಮೋಕ್ಷಕ್ಕೆ ಮಾರ್ಗ. ಅದರಿಂದ ಜೀವನದ ಹೊಸನಕ್ಷೆ ತೆರೆದುಕೊಳ್ಳುತ್ತದೆ. ಶುದ್ಧ ಅರಿವು ಎಲ್ಲಿ ಇರುತ್ತದೋ ಅಲ್ಲಿ ದುರಹಂಕಾರ ಇರುವುದಿಲ್ಲ.

“ನಾನು ಎಂಬುದ ಬಿಟ್ಟು ಜ್ಞಾನಿಗಳೊಳಗೂಡಿ ಏನೆಲ್ಲಕೆ ದೇವ ಪ್ರೇರಣೆಯೆಂದು, ಧ್ಯಾನಿಸಿ ಮೌನದಿ  ಪುರಂದರವಿಠಲನ” ಎನ್ನುತ್ತಾರೆ ಪುರಂದರದಾಸರು. ಅಂದಾಗ ಅಹಂಕಾರ ಪೂರಿತವಾದ, ಪ್ರೇರಿತವಾದ,ಜನಿತವಾದ “ನಾನತ್ವ’ವನ್ನು ತ್ಯಜಿಸಿ ಜಗತ್ತಿನ ವಿಷ ವೃತ್ತದಲ್ಲಿ ಸಿಲುಕದೆ ಬಾಳಬೇಕು. ಅಹಂಕಾರವನ್ನು  ತೊರೆದು ನಮ್ಮಲ್ಲಿರುವ ನ್ಯೂನತೆಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾ ತಿಮ್ಮ ಗುರುವಿನ “ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ನೀತಿಯನ್ನು ಅರಿಯಬೇಕು. ಅದೇ ಜೀವನದ ಆತ್ಯಂತಿಕ ಗಂತವ್ಯದ ದಾರಿ. ಅದೇ ಪರಮಸತ್ಯದ, ಪವಿತ್ರಶಾಂತಿಯ ತಾಣವನ್ನು ತಲುಪುವ ಮಾರ್ಗ. ಮಾನಸ ಮಂದಿರದಲ್ಲಿ ಅಹಂಕಾರದ ಕರ್ಕಶ ಧ್ವನಿ ಮೊಳಗದೆ ಸದಾ ಗೋವಿಂದನನ್ನು ಭಜಿಸುವ “ಓಂ ಕಾರದ ಝೇಂಕಾರ’ ನಿರಂತರವಾಗಿ ಮೊಳಗಬೇಕು. ಅಂದಾಗ ಈ ಮದಗುಣವನ್ನು ಕರಗಿಸಲು ಮೂಹೂರ್ತದ ನಿರೀಕ್ಷೆ ಮಾಡದೆ ತತ್‌ಕ್ಷಣ ಕಾರ್ಯಾಶೀಲರಾಗುವುದು ಹಿತಕರ.

– ಶಿವಾನಂದ ಪಂಡಿತ, ಗೋವಾ

Advertisement

Udayavani is now on Telegram. Click here to join our channel and stay updated with the latest news.

Next