Advertisement

3 ತಿಂಗಳಿಂದ ಅಂಗನವಾಡಿ ‘ಮೊಟ್ಟೆ’ಹಣ ಬಾಕಿ

01:35 AM Dec 20, 2018 | Karthik A |

ಕುಂದಾಪುರ: ಅಂಗನವಾಡಿ ನೌಕರರಿಗೂ ಮಾಸಿಕ ವೇತನವೇ ಸರಿಯಾಗಿ ಪಾವತಿಯಾಗಿಲ್ಲ. ಈಗ ಅಂಗನವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ಹಣ ಕಳೆದ 3 ತಿಂಗಳಿನಿಂದ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ ನೌಕರರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ. ಮಕ್ಕಳಿಗೆ ವಾರಕ್ಕೆ ಎರಡು ದಿನ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಅಂಗನವಾಡಿಯಲ್ಲಿ ಮೊಟ್ಟೆ ನೀಡಲಾಗುತ್ತದೆ. ಈ ಮೊಟ್ಟೆಗಳನ್ನು ಅಂಗನವಾಡಿ ಕಾರ್ಯಕರ್ತೆಯರೇ ಮೊದಲು ಖರೀದಿಸಿಕೊಡಬೇಕು. ಆ ಬಳಿಕ ಸರಕಾರ ನಗರ ಭಾಗದಲ್ಲಿ ಒಂದು ಮೊಟ್ಟೆಗೆ 4.50 ರೂ. ಹಾಗೂ ಗ್ರಾಮೀಣ ಭಾಗದಲ್ಲಿ 5 ರೂ. ನೀಡುತ್ತದೆ. ಆದರೆ ಈ ಹಣವನ್ನು ಸೆಪ್ಟೆಂಬರ್‌ವರೆಗೆ ಮಾತ್ರ ಸರಕಾರ ಬಿಡುಗಡೆ ಮಾಡಿದೆ.

Advertisement

ತರಕಾರಿ ಹಣವೂ ಇಲ್ಲ
ಪ್ರತಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ತಲಾ 3 ರೂ. ತರಕಾರಿಗೆ ಸರಕಾರದಿಂದ ಹಣ ನೀಡಲಾಗುತ್ತದೆ. ಈಗ ಮೊಟ್ಟೆಯ ಹಣದ ಜತೆಗೆ ತರಕಾರಿ ಹಣವೂ ಕೂಡ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಕ್ಕಿಲ್ಲ.

ಕೊಡುವ ದರದಲ್ಲಿ ‘ವ್ಯತ್ಯಾಸ’
ಸರಕಾರವು ಒಂದು ಮೊಟ್ಟೆಗೆ ನಗರ ಭಾಗದಲ್ಲಿ 4.50 ರೂ. ನೀಡಿದರೆ, ಗ್ರಾಮೀಣ ಭಾಗದಲ್ಲಿ 5 ರೂ.ಯಂತೆ ನೀಡುತ್ತದೆ. ಆದರೆ ಈಗ ಮೊಟ್ಟೆಗೆ ಮಾರುಕಟ್ಟೆ ದರ 5.50 ರೂ., 6 ರೂ. ಹೀಗೆ ಬೇರೆ ಬೇರೆ ದರ ಇರುತ್ತದೆ. ಈಗ ಇನ್ನು ಕ್ರಿಸ್‌ಮಸ್‌, ಹೊಸ ವರ್ಷ ಸಂದರ್ಭ ಮೊಟ್ಟೆಗೆ ಬೇಡಿಕೆ ಹೆಚ್ಚಿರುವುದರಿಂದ ಒಂದು ಮೊಟ್ಟೆಯ ದರ 6.30 ರೂ. 7 ರೂ. ವರೆಗೂ ಇದೆ. ಸರಕಾರ ಕೊಡುವುದಕ್ಕಿಂತ ಹೆಚ್ಚಿನ ದರ ಮಾರುಕಟ್ಟೆಯಲ್ಲಿ ಇದ್ದು, ಇದರಿಂದ 1 ಮೊಟ್ಟೆಗೆ 1.50 ರೂ. ಅಥವಾ 2 ರೂ.ವನ್ನು ಹೆಚ್ಚುವರಿಯಾಗಿ ಕಾರ್ಯಕರ್ತೆಯರೇ ಭರಿಸಬೇಕಾಗಿದೆ.


ಗೌರವ ಧನ : 3 ತಿಂಗಳಿಂದ ಬಾಕಿ

ಮೊಟ್ಟೆ, ತರಕಾರಿಗೆ ತಮ್ಮ  ಕೈಯಿಂದಲೇ ಹಣ ಹಾಕಿ ಖರೀದಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ 3 ತಿಂಗಳಿನಿಂದ ಮಾಸಿಕ ಗೌರವ ಧನವೇ ನೀಡಿಲ್ಲ. ಗೌರವ ಧನವೂ ಸಿಗದೇ, ಇತ್ತ ಮೊಟ್ಟೆ, ತರಕಾರಿ ಹಣವನ್ನೂ ಬಿಡುಗಡೆ ಮಾಡದೆ ಇರುವುದು ಜಿಲ್ಲೆಯ 2,340 ಮಂದಿ ಅಂಗನವಾಡಿ ನೌಕರರನ್ನು ಸಂಕಷ್ಟಕ್ಕೀಡು ಮಾಡಿದೆ.

ನೌಕರರಿಗೆ ಕಷ್ಟ
ವಾರಕ್ಕೆರಡು ದಿನ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಪ್ರತಿ ದಿನ ಮೊಟ್ಟೆ ನೀಡಬೇಕಾಗುತ್ತದೆ. ಒಂದು ಅಂಗನವಾಡಿಯಲ್ಲಿ ಕನಿಷ್ಠ 15 – 20 ಮಕ್ಕಳಿ ರುತ್ತಾರೆ. 5-10 ಬಾಣಂತಿ, ಗರ್ಭಿಣಿಯರು ಇರುತ್ತಾರೆ. ಮೊಟ್ಟೆಯನ್ನು ಮೊದಲೇ ಖರೀದಿಸಬೇಕಾಗಿರುವುದರಿಂದ ಆಯಾಯ ತಿಂಗಳಲ್ಲಿ ಹಣ ಬಿಡುಗಡೆ ಮಾಡಿದರೆ ಉತ್ತಮ. ಗೌರವ ಧನವೂ ವಿಳಂಬವಾಗುತ್ತಿರುವುದರಿಂದ ಈ ಮೊಟ್ಟೆಯ ಹಣ ಭರಿಸುವುದು ಕಷ್ಟ.
– ಉಷಾ, ಅಧ್ಯಕ್ಷರು, ಜಿಲ್ಲಾ  ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘ

Advertisement

2-3 ದಿನಗಳಲ್ಲಿ ಬಿಡುಗಡೆ
ಈಗ ಬೆಳಗಾವಿ ಅಧಿವೇಶನ ನಡೆಯುತ್ತಿರುವುದರಿಂದ ನಿರ್ದೇಶಕರು ಸಹಿತ ಎಲ್ಲ ಅಧಿಕಾರಿ ವರ್ಗದವರು ಅಲ್ಲೇ ಇದ್ದಾರೆ. ಪ್ರಾಯೋಗಿಕವಾಗಿ ಉಡುಪಿ ಹಾಗೂ ಗದಗ ಎರಡು ಜಿಲ್ಲೆಗಳನ್ನು ಕೆ-2 ತಂತ್ರಾಂಶ ಅಳವಡಿಸಿರುವುದಿಂದ ಇದರ ಅನುಮೋದನೆ ಬಾಕಿ ಇದೆ. ಇನ್ನು 2-3 ದಿನಗಳಲ್ಲಿ ನೌಕರರ ಬ್ಯಾಂಕ್‌ ಖಾತೆಗೆ ಮೊಟ್ಟೆ ಹಣ ಬಿಡುಗಡೆಯಾಗಲಿದೆ. 
– ಗ್ರೇಸಿ ಗೋನ್ಸಾಲ್ವಿಸ್‌, ಜಿಲ್ಲಾ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಡುಪಿ 

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next