Advertisement

ಅಕ್ರಮ ಚಟುವಟಿಕೆ ತಡೆಗೆ ಶಕ್ತಿ ಮೀರಿ ಯತ್ನ: ಎಸ್ಪಿ ಖರೆ

10:53 AM Feb 10, 2019 | |

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ತನ್ನ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಹೇಳಿದರು.

Advertisement

ಶನಿವಾರ ಪ್ರಸ್‌ ಟ್ರಸ್ಟ್‌ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳು ದಂಧೆಯೂ ಸೇರಿದಂತೆ ಅಕ್ರಮ ಚಟುವಟಿಕೆಗಳು ಹೆಚ್ಚಿವೆ ಎನ್ನುವುದು ನಿಜ. ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿಯೇ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಪೊಲೀಸ್‌ ಇಲಾಖೆ ಈ ಎಲ್ಲ ಚಟುವಟಿಕೆಗಳ ನಿಯಂತ್ರಣಕ್ಕೆ ಹಗಲಿರುಳು ಕೆಲಸ ಮಾಡುತ್ತಿದೆ. ಸಿಬ್ಬಂದಿಗಳ ಕೊರತೆಯಿಂದ ಸ್ವಲ್ಪ ಹಿನ್ನಡೆಯಾಗಿದೆ ಎಂದು ಒಪ್ಪಬಹುದಾದರೂ ಕಡಿವಾಣ ಹಾಕಿದ್ದೇವೆ ಎಂಬುದಂತೂ ನಿಜ. ತಾವು ಬಂದ ಮೇಲೆ ಈ ಎಲ್ಲ ಅಕ್ರಮಗಳ ಮೇಲೆ ನಿಗಾ ಇಟ್ಟಿರುವುದಾಗಿ ತಿಳಿಸಿದರು.

ರಾಜ್ಯದ ಎಲ್ಲ ಕಡೆ ಇರುವಂತೆ ಜಿಲ್ಲೆಯಲ್ಲೂ ಕೂಡ ಮರಳು ದಂಧೆ ಇದೆ. ಅನೇಕ ರೌಡಿಗಳು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ನಿಜ. ಮರಳು ಮಾಫಿಯಾ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆಯನ್ನೇ ಮಾತ್ರ ಹೊಣೆಯನ್ನಾಗಿ ಮಾಡುವುದು ಸರಿಯಲ್ಲ. ಆದರೂ ಕೂಡ ಪೊಲೀಸ್‌ ಇಲಾಖೆ ಇದನ್ನು ತಡೆಯಲು ಕ್ರಮ ಕೈಗೊಂಡಿದೆ. ಆದರೆ ಸಿಬ್ಬಂದಿ ಕೊರತೆ ಎದುರಾಗಿದೆ. ಉದಾಹರಣೆಗೆ ತೀರ್ಥಹಳ್ಳಿಯಲ್ಲಿ ಸುಮಾರು 56ಕ್ಕೂ ಹೆಚ್ಚು ಕ್ವಾರಿಗಳಿವೆ. ಜಿಲ್ಲೆಯಲ್ಲಿ ಮರಳು ಮಾಫಿಯಾ ಮಟ್ಟ ಹಾಕುವಲ್ಲಿ ಪೊಲೀಸ್‌ ಇಲಾಖೆ ಶ್ರಮ ವಹಿಸಿದೆ. ಬೇರೆ ಬೇರೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ನಮ್ಮ ಇಲಾಖೆಯಲ್ಲಿ ಸ್ವಲ್ಪ ಮಟ್ಟಿಗೆ ಸಿಬ್ಬಂದಿ ಇರುವುದರಿಂದ ಮರಳು ಮಾಫಿಯಾವನ್ನು ಸಾಧ್ಯವಾದಷ್ಟು ಮಟ್ಟ ಹಾಕುತ್ತಿದ್ದೇವೆ. ಆದರೂ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಉಳಿದ ಕೆಲಸಗಳ ಜೊತೆಗೆ ಮರಳಿನ ಕೆಲಸವನ್ನೂ ಮಾಡುತ್ತಿದೆ. ಕೆಲ ಕ್ರಿಮಿನಲ್‌ಗ‌ಳು ಮರಳು ದಂಧೆಯಲ್ಲಿ ತೊಡಗಿದ್ದಾರೆ. ಅವರು ಪೊಲೀಸ್‌ ಇಲಾಖೆ ಹಾಗೂ ಕೆಲ ಪೊಲೀಸ್‌ ಅಧಿಕಾರಿಗಳ ಹೆಸರು ಬಳಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲಾ ಮರಳು ಸಮಿತಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಗಸ್ತು ನಡೆಸಬೇಕು ಎಂದು ಕೋರಿದ್ದೇನೆ. ಇದರ ಜೊತೆಗೆ ಹಿಂದಿನ ಡಿಸಿ ಡಾ| ಲೋಕೇಶ್‌ ಅವರೊಂದಿಗೆ ಸೇರಿ ಹಲವು ಸ್ಥಳಗಳಿಗೆ ಭೇಟಿ ನೀಡಿ ಮರಳು ಕ್ವಾರಿಗಳನ್ನು ಗುರುತಿಸಿದ್ದೆವು. ಇದರ ಪರಿಣಾಮವಾಗಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದೇವೆ. 2018ರಲ್ಲಿ 351 ಪ್ರಕರಣ ದಾಖಲಿಸಿ 6 ಕೋಟಿ ಮೌಲ್ಯದ ಮರಳು ವಶಪಡಿಸಿಕೊಳ್ಳಲಾಗಿದೆ. ಇನ್ನು ಅಕ್ರಮ ಮರಳು ಸಾಗಣೆ ವಿಷಯದಲ್ಲಿ ಮೂವರು ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿರುವ ಕುರಿತಂತೆ ಆರೋಪಿತರ ಮೇಲೆ ಕ್ರಮ ಜರುಗಿಸಿದ್ದು ಅವರು ವರ್ಗಾವಣೆಯಾಗಿದ್ದಾರೆ ಎಂದರು.

ಪೊಲೀಸ್‌ ಇಲಾಖೆಯಿಂದ ಮಾತ್ರ ಅಕ್ರಮ ಮರಳುಗಾರಿಕೆ ತಡೆಯಲು ಆಗುವುದಿಲ್ಲ. ಬೇರೆ ಬೇರೆ ಇಲಾಖೆಗಳು ಕೂಡ ಇದಕ್ಕೆ ಕೈ ಜೋಡಿಸಬೇಕಾಗಿದೆ. ಮುಖ್ಯವಾಗಿ ಸಾರ್ವಜನಿಕರು ಕೂಡ ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಬೇಕು. ಪಿಡಬ್ಲ್ಯೂಡಿ, ಗಣಿ ಇಲಾಖೆ, ಅರಣ್ಯ ಇಲಾಖೆ ಹೀಗೆ ಎಲ್ಲರೂ ಕೈ ಜೋಡಿಸಿದಾಗ ಇದನ್ನು ತಡೆಯಬಹುದು. ಸಕ್ರಮ ಮರಳು ಸಿಕ್ಕಾಗ ಅಕ್ರಮ ಸಹಜವಾಗಿಯೇ ಇಲ್ಲವಾಗುತ್ತದೆ ಎಂದರು.

ರೌಡಿಸಂ ನಿಯಂತ್ರಣ ಕುರಿತು ಮಾತನಾಡಿದ ಅವರು, ಸಹಜವಾಗಿಯೇ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ರೌಡಿಸಂ ಇದೆ. ಅದು ಇಂದಿನ ಮಾರ್ಕೆಟ್ ಗಿರಿ ಮತ್ತು ಗೋವಿಂದನ ಕೊಲೆಯ ತನಕ ಬಂದಿದೆ. ಇತ್ತೀಚೆಗೆ ಕೊಲೆಯಾದ ಈ ಇಬ್ಬರದು ದ್ವೇಷಕ್ಕಾಗಿ ಆಗಿರುವುದು. ಒಂದು ರೀತಿಯ ಕುಟುಂಬ ಕಲಹ ಇದಾಗಿದೆ ಎಂದ ಅವರು, ರೌಡಿ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

Advertisement

ಮಟ್ಕಾ, ಜೂಜಾಟ ತಡೆಯಲು ಇಲಾಖೆ ಹಲವು ಅಗತ್ಯ ಕ್ರಮ ಕೈಗೊಂಡಿದೆ. ಆದರೆ ಓಸಿ ಬರೆಯುವವರು ಸುಲಭವಾಗಿ ನ್ಯಾಯಾಲಯದಿಂದ ಬಿಡುಗಡೆಯಾಗುತ್ತಾರೆ. ಈಗ ಕೋರ್ಟಿನಲ್ಲಿ 200 ರಿಂದ 300 ದಂಡ ಕಟ್ಟಿದರೆ ಸಾಕು. ಬಿಡುಗಡೆಯಾಗಬಹುದು. ಹಾಗಾಗಿ ಇದರ ನಿಯಂತ್ರಣ ಸುಲಭವಾಗಿಲ್ಲ. ಆದರೂ ಸುಮಾರು 12ಕ್ಕೂ ಹೆಚ್ಚು ಓಸಿ ಬಿಡ್ಡರ್‌ಗಳನ್ನು ಗಡಿಪಾರು ಮಾಡಲಾಗಿದೆ ಎಂದರು.

ಕೋಕಾ ಕಾಯ್ದೆ ಅಡಿಯಲ್ಲಿ ಸುಮಾರು 38 ಜನರನ್ನು ಬಂಧಿಸಲಾಗಿದೆ. 1400ಕ್ಕೂ ಹೆಚ್ಚು ರೌಡಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಹಲವರು ಜೈಲಿನಲ್ಲಿದ್ದಾರೆ. ಹಲವರು ಬಿಡುಗಡೆಯಾಗಿದ್ದಾರೆ. ಹಲವರ ಕೇಸುಗಳು ನ್ಯಾಯಾಲಯದಲ್ಲಿವೆ. ಒಟ್ಟಾರೆ ರೌಡಿಸಂ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಸಾಕಷ್ಟು ಶ್ರಮಪಟ್ಟಿದೆ.
•ಅಭಿನವ ಖರೆ, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next