ದಾವಣಗೆರೆ: ರಾಜ್ಯದ ರೈತರ ಸಾಲ ಮನ್ನಾ ಸಂಬಂಧ ಪ್ರಧಾನಿ, ವಿತ್ತ ಸಚಿವರ ಮನವೊಲಿಸಲು ರಾಜ್ಯ ನಾಯಕರೊಂದಿಗೆ ಪ್ರಯತ್ನ ಮಾಡುವುದಾಗಿ ಸಂಸದ ಜಿ.ಎಂ. ಸಿದ್ಧೇಶ್ವರ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಅಂದರೆ ಅದು ಕೇವಲ ಒಂದು ರಾಜ್ಯಕ್ಕಲ್ಲ,
ಇಡೀ ದೇಶಕ್ಕೆ ಸಂಬಂಧಿಸಿದ್ದು. ಆದರೂ ಕೂಡ ನಮ್ಮ ಪಕ್ಷದ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿ, ಈ ವಿಚಾರವಾಗಿ ನಮ್ಮ ನಾಡಿನ ರೈತರ ಹಿತಕಾಯುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.
ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಮಂತ್ರಿ, ಆರ್ಥಿಕ ಸಚಿವರ ಜೊತೆ ನಮ್ಮ ರಾಜ್ಯನಾಯಕರ ಮೂಲಕ ರೈತರ ಸಾಲ ಮನ್ನಾ ಮಾಡುವ ವಿಚಾರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವೊಲಿಸುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ನಾನೂ ಕೂಡ ರೈತನಾಗಿರುವುದರಿಂದ ರಾಜ್ಯದಲ್ಲಿ ರೈತರ ಪರಿಸ್ಥಿತಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಏನಾಗಿದೆ ಎಂಬುದನ್ನ ಅರ್ಥಮಾಡಿಕೊಳ್ಳಬಲ್ಲೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಒಂದೂವರೆ ಲಕ್ಷದಿಂದ 2 ಲಕ್ಷ ರೂ. ವರೆಗೆ ರೈತರ ಸಾಲ ಮನ್ನಾ ಮಾಡಿರುವಾಗ ನಮ್ಮ ರಾಜ್ಯದಲ್ಲಿ ಅನೇಕ ಷರತ್ತುಗಳನ್ನು ವಿಧಿಸಿ ಕೇವಲ 50 ಸಾವಿರ ರೂ.ವರೆಗಿನ ಮನ್ನಾ ಮಾಡಿರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಾರದು.
ಬಡ ಕುಟುಂಬದಿಂದ ಬಂದಿರುವ ನಮ್ಮ ಪ್ರಧಾನ ಮಂತ್ರಿಗಳೂ ಸಹ ರೈತರ ಬಗ್ಗೆ ಕಳಕಳಿವುಳ್ಳವರಾಗಿದ್ದು ಅನ್ನದಾತರ ಸಂಕಷ್ಟ ಅರ್ಥ ಮಾಡಿಕೊಳ್ಳಬಲ್ಲರು ಎನ್ನುವ ಆಶಾಭಾವನೆ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.