ಸಿಂಧನೂರು: ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಶ್ರಮಿಸುತ್ತಿವೆ. ಶೈಕ್ಷಣಿಕ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅಗತ್ಯ ಬೇಡಿಕೆ ಈಡೇರಿಸಲು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕಿದೆ ಎಂದು ರಾಯಚೂರು ಜಿಲ್ಲಾ ವಿವಿಧ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ದುದ್ದುಪುಡಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟ ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಸಹಕಾರ ಅಗತ್ಯವಾಗುತ್ತದೆ ಎಂದರು.
ಕೊಠಡಿಗಳ ಸುರಕ್ಷತೆ, ಅಗ್ನಿ ಅವಘಡ ತಡೆಗಟ್ಟುವಿಕೆ, ಶಾಲೆ, ಕಾಲೇಜುಗಳ ಪರವಾನಗಿ, 371 ಜೆ ಸೌಲಭ್ಯದ ಸದ್ಬಳಕೆ, ಹೊಸ ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳಿಗೆ ಸಂಬಂಧಿಸಿ ಇದೇ ವೇಳೆ ಸಭೆಯಲ್ಲಿ ಚರ್ಚಿಸಲಾಯಿತು.
ರಾಯಚೂರು ಜಿಲ್ಲೆಯಲ್ಲಿ 713 ಶಿಕ್ಷಣ ಸಂಸ್ಥೆಗಳು, 7 ತಾಲೂಕುಗಳನ್ನು ಒಳಗೊಂಡು ಒಕ್ಕೂಟ ಸದೃಢಪಡಿಸಲು ನಿರ್ಧರಿಸಲಾಯಿತು. ನೂತನ ಉಪಾಧ್ಯಕ್ಷ ಎಂ. ದೊಡ್ಡಬಸವರಾಜ್, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಮುಖರಾದ ವೈ.ನರೇಂದ್ರನಾಥ್, ಮಲ್ಲನಗೌಡ ಕಾನಿಹಾಳ, ಸರಸ್ವತಿ ಪಾಟೀಲ್, ಅನಿಲ್ ರಾಜ್ ಸೇರಿದಂತೆ ಇತರರು ಇದ್ದರು.