ಕೊಪ್ಪಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ತರಬೇತಿ ಕೇಂದ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ತಾಲೂಕಿನ ಹಿರೇಸಿಂಧೋಗಿ ರಸ್ತೆಯಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ನೂತನ ತರಬೇತಿ ಕೇಂದ್ರದಲ್ಲಿ ಕಟ್ಟಡದ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಪ್ರಪಂಚದ ತುಂಬ ತನ್ನದೆಯಾದ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಮಕ್ಕಳಿಗೆ ತರಬೇತಿ ನೀಡುವ ಉದ್ದೇಶದಿಂದ ಈಗಾಗಲೇ ದಾವಣಗೆರೆಯ ಕೊಂಡಜ್ಜಿಯಲ್ಲಿ ಉತ್ತಮ ಹಾಗೂ ಮಾದರಿಯ ತರಬೇತಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ತರಬೇತಿ ಕೇಂದ್ರ ಇಲ್ಲದ ಕಾರಣ ಈ ಜಿಲ್ಲೆಯಲ್ಲಿ ಪ್ರಾರಂಭ ಮಾಡಿದರೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗೆ ಅನುಕೂಲವಾಗಲಿದೆ ಎಂದರು.
ಕಟ್ಟಡವು ಉತ್ತಮ ರೀತಿಯಲ್ಲಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ಇದರ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಕಟ್ಟಡದ ನಿರ್ಮಾಣಕ್ಕೆ ಎಲ್ಲ ಸೌಲಭ್ಯ ನೀಡಲಾಗಿದೆ. ಇದನ್ನು ರಾಜ್ಯದಲ್ಲಿ ಮಾದರಿ ತರಬೇತಿ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಮಾದರಿ ಕೇಂದ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎಚ್.ಎಂ. ಸಿದ್ರಾಮಸ್ವಾಮಿ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಿಲ್ಲಾ ಮಲ್ಲಿಕಾರ್ಜುನ ಚೌಕಿಮಠ, ಅರುಣಾ ವಸ್ತ್ರದ, ಮಲ್ಲೇಶ್ವರಿ, ಶಿವಕುಮಾರ ಕುಕನೂರ, ಹುಲುಗಪ್ಪ ಕಟ್ಟಿಮನಿ, ಮಂಜುಳಾ ಪಾಟೀಲ, ಮಲ್ಲಪ್ಪ ಗುಡದ್ದನವರ್, ಮಾರುತಿ ಆರೇರ, ಮುಸ್ತಫಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.