ಚೆನ್ನೈ: 2021ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹ ಕಳೆದ ಕೆಲವು ತಿಂಗಳಿನಿಂದ ಹರಿದಾಡುತ್ತಿತ್ತು. ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್, ತಿರುವಳ್ಳುವರ್ ಅವರನ್ನು ಕೇಸರಿ ಮಾಡಿದಂತೆ ನನ್ನನ್ನೂ ಕೂಡಾ ಕೇಸರಿ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡುವ ಮೂಲಕ ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ರಜನಿಕಾಂತ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಇಂದು ಸುದ್ದಿಗಾರರು ರಜನಿಕಾಂತ್ ಅವರಿಗೆ ಬಿಜೆಪಿ ಸೇರುವ ಯೋಚನೆ ಇದೆಯೇ ಎಂಬುದಾಗಿ ಪ್ರಶ್ನಿಸಿದ್ದರು.
ನನಗೆ ಅವರೇನೂ ಆಫರ್ ಕೊಟ್ಟಿಲ್ಲ. ಒಂದು ರಾಜಕೀಯ ಪಕ್ಷವಾಗಿದ್ದರಿಂದ ಜನರು ಆ ರೀತಿ (ಬಿಜೆಪಿ ಸೇರ್ಪಡೆ ಬಗ್ಗೆ) ಮಾತನಾಡುತ್ತಾರೆ. ಆದರೆ ಬಿಜೆಪಿ ಸೇರುವ ಯಾವುದೇ ಉದ್ದೇಶ ಖಂಡಿತಾ ಇಲ್ಲ ಎಂದು ಹೇಳಿದ್ದರು.
ತಿರುವಳ್ಳುವರ್ ಅವರನ್ನು ಕೇಸರಿ ಮಾಡಿದಂತೆ ನನ್ನನ್ನೂ ಮಾಡಲು ಸಾಧ್ಯವಿಲ್ಲ. ತಿರುವಳ್ಳುವರ್ ಕೂಡಾ ಕೇಸರಿ ಆಗಲ್ಲ, ನಾನೂ ಕೂಡಾ ಕೇಸರಿ ಪಕ್ಷದೊಳಕ್ಕೆ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಏನಿದು ತಿರುವಳ್ಳುವರ್ ಕೇಸರಿ ವಿವಾದ?
ನವೆಂಬರ್ 1ರಂದು ತಮಿಳುನಾಡು ಬಿಜೆಪಿ ಘಟಕ ತಮಿಳು ಸಂತ ಕವಿ ತಿರುವಳ್ಳುವರ್ ಕೇಸರಿ ಶಾಲು ಧರಿಸಿರುವ ಮತ್ತು ಹಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದ ಫೋಟೊವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿತ್ತು. ತಿರುವಳ್ಳುವರ್ ಅವರನ್ನು ಕೇಸರಿ ಶಾಲು ಧರಿಸಿದಂತೆ ಚಿತ್ರ ಪೋಸ್ಟ್ ಮಾಡಿರುವುದಕ್ಕೆ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತ್ತು.