ಕಾರ್ಕಳ: ಛಾಯಾಚಿತ್ರಗ್ರಾಹಕರಲ್ಲಿರುವ ಅಪೂರ್ವ, ವಿಶೇಷ ಚಿತ್ರಗಳನ್ನು ದಾಖಲೀಕರಿಸುವ ನಿಟ್ಟಿನಲ್ಲಿ ಹಾಗೂ ಛಾಯಾಚಿತ್ರಗ್ರಾಹಕರ ಅಗತ್ಯ ಬೇಡಿಕೆ ಈಡೇರಿಕೆಗಾಗಿ ಫೋಟೋಗ್ರಫಿ ಅಕಾಡೆಮಿ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ವಿಧಾನಸಭೆ ಮುಖ್ಯ ಸಚೇತಕ ಶಾಸಕ ವಿ. ಸುನಿಲ್ ಕುಮಾರ್ ಭರವಸೆಯಿತ್ತರು.
ಕಾರ್ಕಳದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್‌ನ ರಜತ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಡೆ ತಂತ್ರಜ್ಞಾನದ ಅಭಿವೃದ್ಧಿಯಿಂದ ಛಾಯಾಗ್ರಾಹಕನಿಗೆ ಅನುಕೂಲವಾಗುತ್ತಿದ್ದರೂ ಮತ್ತೂಂದು ಕಡೆಯಿಂದ ಆತನ ವೃತ್ತಿ ಬದುಕಿಗೆ ಅದುವೇ ಮುಳುವಾಗುತ್ತಿರುವುದು ಅಷ್ಟೇ ಸತ್ಯ. ಇಂತಹ ಸಂದರ್ಭದಲ್ಲಿ ಛಾಯಾಚಿತ್ರಗ್ರಾಹಕರು ತಮ್ಮದೇ ಛಾಪು ಹೊಂದಿರುವುದು ಸಂತಸದ ವಿಚಾರವೆಂದು ಶಾಸಕ ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ, ಛಾಯಾಚಿತ್ರಗ್ರಾಹಕ ಪ್ರತೀ ಕ್ಷಣಕ್ಕೂ ಮಾನ್ಯತೆ ನೀಡಬೇಕಾಗುವುದು ಅತಿ ಅಗತ್ಯ. ಅದ್ಭುತ ಚಿತ್ರ ಸೆರೆಹಿಡಿಯುವ ಅವಕಾಶ ಯಾವಾಗ ದೊರೆಯುವುದೋ ಎಂದು ತಿಳಿಯದು. ಹಾಗಾಗಿ ಪ್ರತಿ ಕ್ಷಣದಲ್ಲೂ ಕೂಡ ಛಾಯಾಗ್ರಾಹಕ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ರಜತ ಸಂಭ್ರಮದ ಹಿನ್ನೆಲೆಯಲ್ಲಿ ಎಸ್‌ಕೆಪಿಎ ಲಾಂಛನ ಬಿಡುಗಡೆಗೊಳಿಸಲಾಯಿತು.
ಎಸ್‌ಕೆಪಿಎ ಕಾರ್ಕಳ ವಲಯದ ಅಧ್ಯಕ್ಷ ಭಾಸ್ಕರ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ನಿಕಾನ್ ಇಂಡಿಯಾದ ಸಹಾಯಕ ಪ್ರಬಂಧಕ ವಿ. ಸೂರಜ್ ಪ್ರಭು, ಉದ್ಯಮಿ ಸುಧಾಕರ್ ಶೆಣೈ ಮಂಗಳೂರು, ಸ್ಥಾಪಕಾಧ್ಯಕ್ಷ ಮೋಹನ್‌ದಾಸ್ ಪೈ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಐಸಿರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವಿ ಮಾನಸ ಪ್ರಾರ್ಥಿಸಿ, ಗೌರವಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸ್ವಾಗತಿಸಿದರು. ರೊನಾಲ್ಡ್ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಸೀತಾರಾಮ ವಂದಿಸಿದರು.
ನಿವೇಶನ
ಫೋಟೋಗ್ರಾಫರ್ ಅಸೋಸಿಯೇಶನ್ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಸರಕಾರಿ ನಿವೇಶನವಿದ್ದಲ್ಲಿ ತನ್ನ ಗಮನಕ್ಕೆ ತರುವಂತೆ ಸಭೆಯಲ್ಲಿ ತಿಳಿಸಿದರು.