ಕುಂದಾಪುರ: ಹುದ್ದೆ ಇರುವುದು ಜವಾಬ್ದಾರಿ ನಿಭಾಯಿಸಲು. ಒಬ್ಬರಿಂದ ಯಾವುದೇ ಸಾಧನೆ ಮಾಡಲಾಗದು. ಆರೋಗ್ಯ ಇಲಾಖೆಯ ಕಾರ್ಯ ಎಂದರೆ ಅದು ತಂಡದ ಪ್ರಯತ್ನ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಹೇಳಿದರು.
ಅವರು ಶುಕ್ರವಾರ ಸಂಜೆ ಇಲ್ಲಿನ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೆಸಿಐ ಸಿಟಿ ಕುಂದಾಪುರ ವತಿಯಿಂದ ನಡೆದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಆರೋಗ್ಯ ಇಲಾಖೆ ವತಿಯಿಂದ ಕೋವಿಡ್-19 ಕುರಿತು ಸಾಕಷ್ಟು ಮೊದಲೇ ಜಾಗೃತಿ ಮೂಡಿಸಲಾಗಿದೆ. ಜಾಗೃತಿ ರಥ ಕಳುಹಿಸಲಾಗಿದೆ. ಅನೇಕ ಸಂಘ ಸಂಸ್ಥೆಗಳು ಈ ಸಂದರ್ಭ ಸಮಾಜಮುಖೀ ಚಟುವಟಿಕೆಗಳನ್ನು ನಡೆಸಿವೆ. ಆರೋಗ್ಯ ಇಲಾಖೆ ಜತೆ ಕೈ ಜೋಡಿಸಿವೆ ಎಂದರು.
ಜೆಸಿಐ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಜೆಸಿಐ ಸಿಟಿ ಸಂಸ್ಥೆಯು ಕಳೆದ 15 ವರ್ಷಗಳಿಂದ ಸಮಾಜಮುಖೀ ಸೇವೆಗಳನ್ನು , ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಬಾರಿ ಲಾಕ್‌ಡೌನ್‌ನ 40 ದಿನಗಳ ಕಾಲ ಸುಮಾರು 6,500 ಜನರಿಗೆ ಅನ್ನದಾನ ಮಾಡಲಾಗಿದೆ. 500 ಮನೆಗಳಿಗೆ ಕಿಟ್‌ಗಳನ್ನು ವಿತರಿಸಲಾಗಿದೆ. 400 ಮಾಸ್ಕ್ ಗಳು ವಿತರಿಸಲಾಗಿದೆ. ಶಿರೂರಿನಿಂದ ಹೆಬ್ರಿವರೆಗೆ ಔಷಧ ಕೊಂಡೊಯ್ದು ನೀಡಲಾಗಿದೆ ಎಂದರು.
ಜೆಸಿಐ ಸಿಟಿ ಅಧ್ಯಕ್ಷ ನಾಗೇಶ್ ನಾವಡ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ| ನಾಗೇಶ್, ಡಾ| ಉದಯಶಂಕರ್, ಜೆಸಿಐ ಸಿಟಿ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು.