ಸಾಗರ: ಪ್ರತಿಯೊಬ್ಬರೂ ಅವರವರ ಜಾತಿ, ಧರ್ಮದಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಕಾಲದಲ್ಲಿ ತಮ್ಮ ತಮ್ಮ ಧರ್ಮೀಯರ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮತಾಂತರ ಮಾಡುವ ಕುಕೃತ್ಯವನ್ನು ತಡೆಯಲೇಬೇಕು. ಇದಕ್ಕಾಗಿಯೇ ರಾಜ್ಯ ಸರ್ಕಾರ ಮತಾಂತರ ನಿಷೇಧಕಾಯ್ದೆಯನ್ನು ವಿಧಾನಮಂಡಲದ ಮುಂದಿಟ್ಟಿದೆ. ಇದರ ಪರವಾಗಿ ಸ್ವಾಮೀಜಿಗಳು ನಿಂತರೆ ಹಿಂದೂಗಳನ್ನು ಗಟ್ಟಿಯಾಗಿ ಇರಿಸಿಕೊಳ್ಳಬಹುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದರು.
ಇಲ್ಲಿನ ಒಕ್ಕಲಿಗರ ಸಮಾಜದ ವತಿಯಿಂದ ಗುರುವಾರ ಆಯೋಜಿಸಿದ್ದ ಒಕ್ಕಲಿಗರ ಸಮುದಾಯ ಭವನದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಹಿಂದೂ ಕುಟುಂಬಗಳನ್ನು ವåತಾಂತರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮತಾಂತರ ತಡೆಗಟ್ಟುವ ನಿಟ್ಟಿನಲ್ಲಿ ಸ್ವಾಮೀಜಿಗಳು ನೇತೃತ್ವ ವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.
ಎಲ್ಲ ಧರ್ಮದಲ್ಲೂ ಕಾಯಿಲೆ, ಬಡತನ ಇರುತ್ತದೆ. ಕಾಯಿಲೆ, ಬಡತನ ಪರಿಹಾರ ಆಗುತ್ತದೆ ಎಂದು ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಿಸುವ ತುಷ್ಟೀಕರಣ ನಡೆಯುತ್ತಿದೆ. ರಾಜಕಾರಣದ ಪಕ್ಷಾಂತರ ಧರ್ಮ ಕ್ಷೇತ್ರಕ್ಕೆ ಸಲ್ಲ. ತೀರ್ಥಹಳ್ಳಿ ಭಾಗದಲ್ಲಿ ಒಕ್ಕಲಿಗ ಕುಟುಂಬದ ವಿದ್ಯಾವಂತನೊಬ್ಬನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಮತಾಂತರಗೊಂಡ ವ್ಯಕ್ತಿ ಈಗ ಪಾದ್ರಿಯಾಗಿದ್ದು, ತಿಂಗಳಿಗೆ 35 ಸಾವಿರ ಸಂಬಳ, ಬೈಕ್ ಕೊಟ್ಟು ಮತಾಂತರವನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಿಂದೂ ಧರ್ಮವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ| ಸಿ.ಎಸ್. ಅಶ್ವತ್ಥನಾರಾಯಣ ಮಾತನಾಡಿ, ಒಕ್ಕಲಿಗ ಸಮುದಾಯವನ್ನು ಸಂಘಟಿಸುವಲ್ಲಿ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಆದಿಚುಂಚನಗಿರಿ ಶ್ರೀಗಳ ಪಾತ್ರ ಪ್ರಮುಖವಾಗಿದೆ. ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯದ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಒಕ್ಕಲಿಗ ಕಾರ್ಪೋರೇಶನ್ ಸ್ಥಾಪಿಸಿ 50 ಕೋಟಿ ಅನುದಾನ ನೀಡಲಾಗಿದೆ. ಆ ಮೂಲಕ ರಾಜ್ಯದ ಎಲ್ಲ ಭಾಗದಲ್ಲಿರುವ ಒಕ್ಕಲಿಗ ಬಾಂಧವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಕಾರ್ಪೋರೇಶನ್ ಮೂಲಕ ಶ್ರಮಿಸಲಾಗುತ್ತಿದೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕೆಂಪೇಗೌಡ ವಿಮಾನ ನಿಲ್ದಾಣವೆಂದು ನಾಮಕರಣ ಮಾಡುವ ಮೂಲಕ ನಾಡು ನಿರ್ಮಾತೃವಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ವಿಮಾನ ನಿಲ್ದಾಣ ಪಕ್ಕದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಮೂರ್ತಿಯನ್ನು ನಿರ್ಮಿಸುತ್ತಿದ್ದು, ಜೂನ್ ತಿಂಗಳಿನಲ್ಲಿ ಅದು ಲೋಕಾರ್ಪಣೆಗೊಳ್ಳಲಿದೆ. ಒಕ್ಕಲಿಗ ಸಂಘಕ್ಕೆ ಖಾಸಗಿ ವಿಶ್ವವಿದ್ಯಾಲಯ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದ್ದು ಈ ಬಗ್ಗೆ ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಒಕ್ಕಲಿಗ ಸಮಾಜದ ಮಕ್ಕಳಿಗೆ ವಿದ್ಯಾಭ್ಯಾಸ ಸಮಸ್ಯೆ ಉಂಟಾದರೆ ಸಮುದಾಯ ಅವರ ಬೆನ್ನಿಗೆ ನಿಂತುಕೊಳ್ಳಬೇಕು. ಒಕ್ಕಲಿಗ ಸಮುದಾಯ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವ ಜೊತೆಗೆ ಇತರೆ ಸಮುದಾಯಕ್ಕೂ ಕಣ್ಣಾಗಬೇಕು. ಕೀಳರಿಮೆ ಬೆಳೆಸಿಕೊಳ್ಳದೆ ಸಮುದಾಯದ ಸಂಘಟನೆಗೆ ಒತ್ತು ನೀಡಬೇಕು. ಸ್ವಾಭಿಮಾನದ ಜೊತೆ ಕಿಚ್ಚು, ಆತ್ಮವಿಶ್ವಾಸ, ಇತರರಿಗೆ ಗೌರವ ಕೊಡುವುದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
ಶಿವಮೊಗ್ಗ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಗರ್ತಿಕೆರೆ ಮಠದ ರೇಣುಕಾನಂದ ಸ್ವಾಮೀಜಿ, ಶಾಸಕ, ಎಂಎಸ್ ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಡಾ| ಅಂಜನಪ್ಪ, ಧರ್ಮೇಶ್, ಕೋನಪ್ಪ ರೆಡ್ಡಿ, ಮಧುರಾ ಶಿವಾನಂದ್, ಬಿ.ಎಚ್. ಲಿಂಗರಾಜ್ ಇನ್ನಿತರರು ಇದ್ದರು. ಚಮತಿ ಪ್ರಾರ್ಥಿಸಿದರು. ಟಿ.ಬಸವರಾಜ್ ಸ್ವಾಗತಿಸಿದರು. ಎಂ.ಟಿ. ಗುಂಡಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಕಾಂತ್ ನಿರೂಪಿಸಿದರು.