ಚಿಕ್ಕೋಡಿ: ರಾಜ್ಯದಲ್ಲಿ 5 ವರ್ಷಗಳ ಕಾಲ ಸುಸ್ಥಿರ ಆಡಳಿತ ನೀಡಿರುವ ಕಾಂಗ್ರೆಸ್ ಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದ್ದು, ಟಿಕೆಟ್ ವಿಷಯವಾಗಿ ಉಂಟಾಗಿರುವ ವೈಮನಸ್ಸು ಮರೆತು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಕರೋಶಿ ಗ್ರಾಮದಲ್ಲಿ ರವಿವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ವಿಷಯವಾಗಿ ಅತೃಪ್ತಿ ಸಹಜವಾಗಿದ್ದು, ಅತೃಪ್ತರಿಗೆ ಮುಂಬರುವ ದಿನಗಳಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸ್ಥಾನಮಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಆದರೆ ವೈಯಕ್ತಿಕ ಪ್ರತಿಷ್ಠೆಗಾಗಿ ಪಕ್ಷಕ್ಕೆ ದ್ರೋಹ ಮಾಡುವುದು ಸಲ್ಲದು. ರಾಯಬಾಗ ಅಭ್ಯರ್ಥಿ ಪ್ರದೀಪ ಮಾಳಗೆ ಅವರನ್ನು ಅತ್ಯ ಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉಂಟಾಗಿರುವ ಬಂಡಾಯ ಶಮನಗೊಳಿಸಿ 12ಕ್ಕೂ ಹೆಚ್ಚು ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಿಸಲಾಗುವುದು. 5 ವರ್ಷದ ಜನಪರ ಕಾರ್ಯಗಳೇ ಪ್ರಸಕ್ತ ಚುನಾವಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿವೆ. ಬೆಳಗಾವಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದರು.
ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್.ಪಟೇಲ್ ಅವರ ಮನೆಗೆ ಭೇಟಿ ನೀಡಿದ ಸಚಿವ ರಮೇಶ ಜಾರಕಿಹೊಳಿ, ತಮ್ಮಲ್ಲಿರುವ ವೈಮನಸ್ಸು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವಂತೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಎಪಿಎಂಸಿ ಅಧ್ಯಕ್ಷ ಸುಭಾಷಗೌಡ ಪಾಟೀಲ, ರಾಯಬಾಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ ಮಾಳಗೆ, ಗಂಗಾಧರ ದೇವರುಷಿ, ಧನರಾಜ ಶೇಂಡೂರೆ, ಚಂದ್ರಕಾಂತ ಎಲ್ಲಾಯಿಗೋಳ, ವಿಠಲ ಕೇಸ್ತಿ, ಯೂಸುಫ್ ಪಟೇಲ್, ಓಂಕಾರ ಶೇಂಡೂರೆ, ಸಿದ್ರಾಮ ಹಿರೇಕುರುಬರ, ಬಾಬುರಾವ ಝಿಪರೆ ಉಪಸ್ಥಿತರಿದ್ದರು.