Advertisement

‘ಶೇ. 85ಕ್ಕೂ ಹೆಚ್ಚು ಮತದಾನವಾಗಲು ಶ್ರಮಿಸಿ’

11:35 AM Apr 19, 2018 | Team Udayavani |

ಬೆಳ್ತಂಗಡಿ: ತಾ|ನಲ್ಲಿ ಈ ಬಾರಿ ಶೇ. 85ಕ್ಕಿಂತಲೂ ಹೆಚ್ಚು ಮತ ದಾನವಾಗಲು ಮತದಾನ ಜಾಗೃತಿ ಸಮಿತಿ ಸದಸ್ಯರು ಶ್ರಮಿಸಬೇಕು. ಪ್ರತಿ ಮತಗಟ್ಟೆಗಳಲ್ಲಿ ಮತದಾರರು ಭಾಗವಹಿಸಿ ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯ ಮಾಡಬೇಕಿದೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ಅವರು ಚುನಾವಣೆ ಪ್ರಯುಕ್ತ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಭಾರತ ಚು.ಆಯೋಗ, ದ.ಕ. ಜಿಲ್ಲಾ ಸ್ವೀಪ್‌ ಸಮಿತಿ, ಸೆಕ್ಟರ್‌ ಅಧಿಕಾರಿಗಳು, ತಾ| ಆರೋಗ್ಯಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕ್ಷೇತದ ಎಲ್ಲ ಬಿಎಲ್‌ಒಗಳು ಹಾಗೂ ಬ್ಯಾಗ್‌ ತಂಡದ ಸದಸ್ಯರಿಗೆ ಹಮ್ಮಿಕೊಂಡಿದ್ದ ಬನ್ನಿ ಮತದಾನ ಕೇಂದ್ರಕ್ಕೆ ಇವಿಎಂ ಹಾಗೂ ವಿವಿ ಪ್ಯಾಟ್‌ ಬಳಕೆ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಹೆಚ್ಚಿನ ಮತದಾನ ನಡೆಯುವಂತೆ ಮಾಡಲು ಬಿಎಲ್‌ ಒಗಳು ಸಹಿತ ಬ್ಯಾಗ್‌ ಸಮಿತಿ ಸದಸ್ಯರು ಶ್ರಮಿಸಬೇಕು. ಮುಖ್ಯವಾಗಿ ಚುನಾವಣೆಗೂ ಮುನ್ನವೇ ಅಣಕು ಮತದಾನ ಮಾಡುವ ಮೂಲಕ ಜನರು ಮತದಾನ ಧೈರ್ಯವಾಗಿ ಮಾಡಲು ಪ್ರೇರಣೆ ನೀಡಬೇಕು. ಜನರು ಹೆಚ್ಚಾಗಿ ಸೇರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತದಾನದ ಆರಿವು ಮೂಡಿಸಬೇಕು. ಜಾತ್ರೆ, ಸಭೆ, ಸಮಾರಂಭಗಳಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಬೇಕು. ಹಿರಿಯರು, ಅಂಗವಿಕಲರು ಮತಗಟ್ಟೆಗೆ ಆಗಮಿಸಿದಲ್ಲಿ ವಿಶೇಷ ಕಾಳಜಿ ವಹಿಸಿ ಅವರಿಗೆ ಪ್ರಥಮ ಪ್ರಾತಿನಿಧ್ಯ ನೀಡಬೇಕು. ಸಂವಿಧಾನಬದ್ಧ ಹಕ್ಕುಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದರು.

ಆತುರ ತೋರದಿರಿ
ಮತಯಂತ್ರದ ಬಗ್ಗೆ ಅಪಸ್ವರ ಕೇಳಿಬಂದ ಹಿನ್ನೆಲೆ ವಿವಿ ಪ್ಯಾಟ್‌ ಯಂತ್ರ ಈ ಬಾರಿ ಚುನಾವಣೆಯಲ್ಲಿ ಉಪಯೋಗಿಸಲಾಗುತ್ತಿದೆ. ಇದು ಮುದ್ರಣ ಯಂತ್ರದಂತೆ ಕಾರ್ಯ ನಿರ್ವಹಿಸಲಿದೆ. ಮತದಾನ ವೇಳೆ ಯಾರೂ ಆತುರ ತೋರಬಾರದು. ಇವಿಎಂ ಯಂತ್ರದಲ್ಲಿ ಮತ ಹಾಕಿದ ಬಳಿಕ ವಿವಿ ಪ್ಯಾಟ್‌ನಲ್ಲಿ ಮತ ಚಲಾಯಿಸಿದ ದೃಢೀಕರಣ ಲಭಿಸುತ್ತದೆ. 7 ಸೆಕುಂಡುಗಳ ದೃಢೀಕರಣ ಮತದಾರರಿಗೆ ಕಾಣಲಿದ್ದು, ಬಳಿಕ ಪೆಟ್ಟಿಗೆಯೊಳಗೆ ಮುದ್ರಣಗೊಂಡು ಶೇಖರಣೆಯಾಗಲಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಯಾವುದಾದರೂ ಒಂದು ಬೂತ್‌ನ ಮತದಾನದ ಕುರಿತು ಪರಿಶೀಲಿಸುವ ಕಾರ್ಯವೂ ನಡೆಯಲಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಚುನಾವಣಾಧಿಕಾರಿ ಎಚ್‌.ಆರ್‌. ನಾಯ್ಕ, ಇಒ ಬಸವರಾಜ ಅಯ್ಯಣ್ಣನವರ್‌, ಮಾಸ್ಟರ್‌ ಟ್ರೈನರ್‌ ಧರಣೇಂದ್ರ ಕುಮಾರ್‌ ಜೈನ್‌, ತಾ.ಪಂ. ಸಹಾಯಕ ನಿರ್ವಹಣಾಧಿಕಾರಿ ಕುಸುಮಾಕರ್‌, ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿವಿಧೆಡೆಗಳಿಂದ ಅಧಿಕಾರಿಗಳು ಚುನಾವಣೆ ಹಿಂದಿನ ದಿನ ಮತಗಟ್ಟೆಗೆ ಆಗಮಿಸಲಿದ್ದಾರೆ. ಜತೆಗೆ ಬಿಲ್‌ಒ ಸಹಿತ ಇತರ ಸಿಬಂದಿಯ ಅನುಕೂಲಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅಕ್ಷರ ದಾಸೋಹ ಸಿಬಂದಿ ಇದರ ಜವಾಬ್ದಾರಿ ವಹಿಸಲಿದ್ದಾರೆ ಎಂದು ಡಾ| ಎಂ.ಆರ್‌. ರವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next