ಕಲಬುರಗಿ: ಪೊಲೀಸ್ ಇಲಾಖೆಗೆ ಉನ್ನತ ಮತ್ತು ಅರ್ಹತೆಗಿಂತ ಹೆಚ್ಚು ಶಿಕ್ಷಣ ಪಡೆದ ಯುವಕ-ಯುವತಿಯರು ಬರುತ್ತಿದ್ದಾರೆ. ಇದರಿಂದ ಇಲಾಖೆಗೆ ಹೊಸ ಮಾನವ ಸಂಪನ್ಮೂಲ ದೊರೆತಂತೆ ಆಗಿದೆ. ಇದು ಇಲಾಖೆಯ ಬೆಳವಣಿಗೆಗೆ ಸಹಕಾರದ ಜತೆಗೆ ಗೌರವ ಸಹ ಹೆಚ್ಚಿಸಿದೆ ಎಂದು ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ದಯಾನಂದ ಬಣ್ಣಿಸಿದರು.
ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ರಾಜ್ಯ ಪೊಲೀಸ್ ತರಬೇತಿ ಮಹಾವಿದ್ಯಾಲಯ (ಪಿಟಿಸಿ)ದ ಕವಾಯತು ಮೈದಾನದಲ್ಲಿ ಸೋಮವಾರ 3ನೇ ತಂಡದ ಪಿಎಸ್‌ಐ (ಗುಪ್ತವಾರ್ತೆ), 5ನೇ ತಂಡದ ಪಿಎಸ್‌ಐ (ವೈರ್‌ಲೆಸ್) ಮತ್ತು ವಿಶೇಷ ಆರ್‌ಎಸ್‌ಐ, ಆರ್‌ಎಸ್‌ಐನ 108 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪರಿವೀಕ್ಷಣೆ ಮಾಡಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಗೂ ವಿಜ್ಞಾನ, ತಂತ್ರಜ್ಞಾನ, ತಂತ್ರಿಕ, ಪತ್ರಿಕೋದ್ಯಮ ಸೇರಿದಂತೆ ಮತ್ತಿತರ ಪದವೀಧರರು ಸೇರಿಕೊಳ್ಳುವುದು ಸಂತೋಷದಾಯಕ ವಿಷಯ. ಕೌಶಲ ಆಧರಿತವಾಗಿ ಅಂತವರನ್ನು ಇಲಾಖೆ ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತದೆ. ಅದೇ ರೀತಿ ಸರ್ಕಾರಿ ನೌಕರಿ ಸಿಕ್ಕಿದ್ದೇ ಸಾಕು ಎಂದು ಕುಳಿತುಕೊಳ್ಳಬಾರದು. ಪ್ರತಿಯೊಬ್ಬರು ನಿಮ್ಮಲ್ಲಿರುವ ಕೌಶಲವನ್ನು ಬೆಳಕಿಗೆ ತರಬೇಕು. ಕೌಶಲಯುಳ್ಳವರಿಗೆ ಇಲಾಖೆಯಲ್ಲಿ ಪ್ರೋತ್ಸಾಹ ಹಾಗೂ ಗೌರವವಿದೆ ಎಂದು ಹೇಳಿದರು.
ಪಿಟಿಸಿ ಪ್ರಾಂಶುಪಾಲ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಪ್ರಶಿಕ್ಷಣಾರ್ಥಿಗಳ ಪ್ರತಿಜ್ಞಾವಿಧಿ ಬೋಧಿಸಿ, ವರದಿ ವಾಚಿಸಿದರು. 108 ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿ, ರಾಷ್ಟ್ರಧ್ವಜ, ಪೊಲೀಸ್ ಧ್ವಜಗಳಿಗೆ ಗೌರವ ವಂದನೆ ಸಲ್ಲಿಸಿದರು. ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಉಪ ಪ್ರಾಂಶುಪಾಲ ಅರುಣ್ ರಂಗರಾಜನ್ ಹಾಗೂ ಪೊಲೀಸ್ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಪೋಷಕರು, ಕುಟುಂಬದವರು ಪಾಲ್ಗೊಂಡಿದ್ದರು.