Advertisement

ರೈಲ್ವೆ, ಕೃಷಿ, ಕೈಗಾರಿಕೆ ಸಚಿವರಾಗಿ ದಕ್ಷ ಆಡಳಿತ

09:40 PM Jul 07, 2019 | Lakshmi GovindaRaj |

ಕೆ.ಆರ್‌.ನಗರ: ವಿದ್ಯಾರ್ಥಿ ದಿಸೆಯಿಂದಲೇ ಹೋರಾಟದ ಮನೋಭಾವನೆ ರೂಢಿಸಿಕೊಂಡು ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಸ್ವಾತಂತ್ರ್ಯ ಸೇನಾನಿಯಾಗಿ ಹೋರಾಡಿದ ದೇಶ ಕಂಡ ಮಹಾನ್‌ ಚೇತನ ಡಾ.ಬಾಬು ಜಗಜೀವನರಾಮ್‌ ಎಂದು ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಎಂ.ಲೋಕೇಶ್‌ ಬಣ್ಣಿಸಿದರು.

Advertisement

ಪಟ್ಟಣದ ಪುರಸಭಾ ವೃತ್ತದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 33ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಸಚಿವರಾಗಿ ಕೃಷಿಗೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದ ಹಸಿರು ಕ್ರಾಂತಿಯ ಹರಿಕಾರ ಎಂದರು.

ಸಮಾಜಮುಖೀ ಯೋಜನೆ: ಜಗಜೀವನರಾಮ್‌ ಜಾರಿಗೆ ತಂದ ಸಮಾಜಮುಖೀ ಯೋಜನೆಗಳು ಮತ್ತು ಅವರ ಪರಿಶ್ರಮದಿಂದ ಆಧುನಿಕ ಯುಗದಲ್ಲಿ ದೇಶದ ಜನತೆ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ. ಅಂತಹ ಮಹನೀಯರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಇಂದಿನ ಯುವ ಪೀಳಿಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಂಸದೀಯ ಪಟು: ಉತ್ತಮ ಸಂಸದೀಯ ಪಟುವಾಗಿದ್ದ ಅವರು ತಮ್ಮ ಆಡಳಿತದ ಅವಧಿಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹಲವಾರು ತಿದ್ದುಪಡಿ ಸೇರಿದಂತೆ ಜನಪರ ಯೋಜನೆ ಜಾರಿಗೊಳಿಸಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿ, ಜನಮನ್ನಣೆ ಗಳಿಸಿದ್ದರು. ರೈಲ್ವೆ ಮಂತ್ರಿಯಾಗಿ ಇಲಾಖೆಯಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತರುವುದರ ಜತೆಗೆ ಮೀಸಲಾತಿ ಕಲ್ಪಿಸಿದರು. ಕೈಗಾರಿಕಾ ಮಂತ್ರಿಯಾಗಿ ಕಾರ್ಮಿಕರ ದುಡಿಮೆಗೆ ನಿಗದಿಪಡಿಸಿದ್ದ ಸಮಯವನ್ನು ಕಡಿತಗೊಳಿಸಿ ಅವರಿಗೂ ಸೌಕರ್ಯ ಒದಗಿಸಿ ದಕ್ಷ ಆಡಳಿತ ನೀಡಿದ ಮಹಾನ್‌ ನಾಯಕ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಂ.ಮಂಜುಳಾ, ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಾ.ಮಾ.ಯೋಗೇಶ್‌, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣಾ ಸಮಿತಿ ಸದಸ್ಯ ಹನಸೋಗೆ ನಾಗರಾಜು, ಮುಖಂಡರಾದ ಕಾಳಯ್ಯ, ಕೃಷ್ಣಯ್ಯ ಮಾತನಾಡಿದರು. ತಾಪಂ ಸದಸ್ಯ ಶ್ರೀನಿವಾಸಪ್ರಸಾದ್‌, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಎಂ.ಎಸ್‌.ರವಿಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಹದೇವ್‌, ಮುಖಂಡರಾದ ಈರಯ್ಯ, ಸ್ವಾಮಿ, ಮಹದೇವ್‌, ವೃತ್ತ ನಿರೀಕ್ಷಕ ಪಿ.ಕೆ.ರಾಜು, ಉಪನಿರೀಕ್ಷಕ ಸುಬ್ರಹ್ಮಣ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್‌ ಇತರರಿದ್ದರು.

Advertisement

ರಾಜಕೀಯ ವೇದಿಕೆಯಾದ ಪುಣ್ಯಸ್ಮರಣೆ: ಬಡವರು ಮತ್ತು ದೀನ ದಲಿತರ ಏಳಿಗೆಗಾಗಿ ದುಡಿದ ಮಹನೀಯರನ್ನು ಸ್ಮರಣೆ ಮಾಡಬೇಕಾದ ಕಾರ್ಯಕ್ರಮವನ್ನು ಜನಪ್ರತಿನಿಧಿಗಳು ರಾಜಕೀಯ ಪ್ರದರ್ಶನ ಮಾಡುವ ವೇದಿಕೆ ಮಾಡಿಕೊಂಡ ಘಟನೆ ನಡೆಯಿತು.

ಪಟ್ಟಣದ ಪುರಸಭಾ ವೃತ್ತದಲ್ಲಿರುವ ಡಾ.ಬಾಬುಜಗಜೀವನರಾಮ್‌ ಪ್ರತಿಮೆ ಬಳಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ 33ನೇ ಪುಣ್ಯಸ್ಮರಣೆಯಲ್ಲಿ ರಾಜಕೀಯ ಮುಖಂಡರ ವಾಗ್ವಾದದ ನಡುವೆ ಕಾರ್ಯಕ್ರಮದ ಉದ್ದೇಶವೇ ಮರೆಯಾಗಿತ್ತು.

ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣಾ ಸಮಿತಿ ಸದಸ್ಯ ಹನಸೋಗೆ ನಾಗರಾಜು ಮಾತನಾಡಿ, ಪಟ್ಟಣದ ಅಂಬೇಡ್ಕರ್‌ ಭವನದ ನಿರ್ಮಾಣ ಕಾಮಗಾರಿಗೆ ಸಚಿವ ಸಾ.ರಾ.ಮಹೇಶ್‌ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಹೊಗಳಿದರು. ನಂತರ ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಾ.ಮಾ.ಯೋಗೇಶ್‌ ಮಾತನಾಡಿ,

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡರು ಮುತುವರ್ಜಿ ವಹಿಸಿ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ಕೆಲವರು ಅದನ್ನು ತಡೆ ಹಿಡಿದು ಈಗ ಅದೇ ಅನುದಾನವನ್ನು ಬಿಡುಗಡೆ ಮಾಡಿಸಿ ಇದು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಮುಖಂಡ ಕೃಷ್ಣಯ್ಯ ಮಾತನಾಡಿ, ಇಂದು ಸರ್ಕಾರಗಳು ಮತ್ತು ರಾಜಕಾರಣಿಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ಲಿಂಗಾಯಿತ ಸಮುದಾಯದವರನ್ನು ಜಂಗಮರೆಂದು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿ 35 ಮಂದಿಗೆ ಪ್ರಮಾಣ ಪತ್ರ ನೀಡಲಾಗಿದ್ದು, ಇದರಿಂದಾಗಿ ನಿಜವಾದ ಶೋಷಿತ ಸಮುದಾಯಗಳ ಫ‌ಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾರ್ಯಕ್ರಮ ಮುಗಿದು ಎಲ್ಲರೂ ಹೊರಡುವ ಸಮಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ನಮ್ಮ ಪಕ್ಷದ ನಾಯಕರು ಅನುದಾನ ಮಂಜೂರು ಮಾಡಿಸಿದ್ದು ಎಂದು ಅಧಿಕಾರಿಗಳ ಮುಂದೆಯೇ ವಾಗ್ವಾದಕ್ಕಿಳಿದರು. ನಂತರ ಸ್ಥಳದಲ್ಲಿಯೇ ಇದ್ದ ಕೆಲ ಮುಖಂಡರು ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next