Advertisement

ಸಾರ್ಥಕ ಪ್ರಯತ್ನ ಮಕ್ಕಳ ಯಕ್ಷ ಕಲರವ

12:30 AM Mar 01, 2019 | Team Udayavani |

ಸುಮಾರು ಇನ್ನೂರ ಇಪ್ಪತ್ತು ಮಕ್ಕಳು ಭಾಗವಹಿಸಿದ ಪ್ರದರ್ಶನಗಳಲ್ಲಿ ನೂರ ಹದಿನಾಲ್ಕು ಮಂದಿ ಬಾಲಕಿಯರಿದ್ದು ವಿಶೇಷ ಪ್ರಧಾನ ಪಾತ್ರಗಳನ್ನು , ಕೇಸರಿತಟ್ಟಿಯ ಬಣ್ಣ , ಹೆಣ್ಣು ಬಣ್ಣ ಮುಂತಾದ ಹಿರಿಯರಿಗೂ ಕಷ್ಟವಾಗುವ ಪಾತ್ರಗಳನ್ನು ಹುಡುಗಿಯರೇ ನಿರ್ವಹಿಸಿದ್ದು ಈ ಪ್ರದರ್ಶನಗಳ ವಿಶೇಷ ಕೊಡುಗೆ.

Advertisement

ಯಕ್ಷ ಕಲಾರಂಗ (ರಿ.) ಕಾರ್ಕಳ ಇವರ ಏಳನೆಯ ವರ್ಷದ ಕಿಶೋರ ಯಕ್ಷೋತ್ಸವ 2019ರ ಮಕ್ಕಳ ಯಕ್ಷಗಾನ ಪ್ರದರ್ಶನಗಳು ಇತ್ತೀಚೆಗೆ ನಡೆದು ಯಶಸ್ವಿ ಪ್ರಯೋಗ ಎನ್ನಿಸಿಕೊಂಡಿತು. ಕಿಶೋರ ಯಕ್ಷೋತ್ಸವ ಎಂಬ ಪರಿಕಲ್ಪನೆಯಲ್ಲಿ ಕಾರ್ಕಳ ಪರಿಸರದ ಹಿರಿಯ ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗುರುಗಳನ್ನಿಟ್ಟು ಸಂಸ್ಥೆಯು ಉಚಿತವಾಗಿ ಕಲಿಸಿ ನಡೆಸುವ ಕಾರ್ಯಕ್ರಮ ಇದು. ಕಲಾವಿದ ಪ್ರೊ| ಬಿ. ಪದ್ಮನಾಭ ಗೌಡರ ಸಂಚಾಲಕತ್ವದಲ್ಲಿ ಸಮಾನಾಸಕ್ತರ ಸಹಯೋಗದಿಂದ ನಡೆಯುವ ಕಲಿಕೆ, ಪ್ರಯೋಗಗಳು ತೆಂಕುತಿಟ್ಟಿನದ್ದು, ಭಾಗವಹಿಸಿದ ಮಕ್ಕಳೆಲ್ಲ ತೀರಾ ಗ್ರಾಮೀಣ ಪ್ರದೇಶದವರು ಎಂಬುದನ್ನು ಪರಿಗಣಿಸಿದಲ್ಲಿ ಈ ವಲಯದಲ್ಲಿ ಯಕ್ಷಗಾನಕ್ಕಿರುವ ಆಸಕ್ತಿ ಶ್ಲಾಘನೀಯ. 

 15 ಶಾಲಾ-ಕಾಲೇಜುಗಳಲ್ಲಿ ಯಕ್ಷ ಶಿಕ್ಷಣ ನಡೆಯುತ್ತಿದ್ದು, ಈ ಪೈಕಿ ಒಟ್ಟು ಹದಿಮೂರು ಪ್ರದರ್ಶನಗಳು ನಡೆದವು. ಪ್ರತೀ ತಂಡಕ್ಕೆ ಒಂದೂವರೆ ಗಂಟೆಯ ಅವಧಿ, ಎಲ್ಲಾ ತಂಡಕ್ಕೂ ಹಿಮ್ಮೇಳಕ್ಕೆ ಒದಗಿದವರು ಪ್ರಸಿದ್ಧ ಭಾಗವತರು ಮತ್ತು ಹಿಮ್ಮೇಳ ವಾದಕರು. ವೀರರಸ ಪ್ರಧಾನ, ವೇಗದ ಗತಿಗೆ ಪ್ರಸಿದ್ಧವಾದ ತೆಂಕಿನ ಪ್ರದರ್ಶನಗಳಿಗೆ ಅಂತಹ ಪ್ರಸಂಗಗಳನ್ನೇ ಆಯ್ದುಕೊಂಡದ್ದು ಕಿರಿಯರ ಉತ್ಸಾಹವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಮಕ್ಕಳಿಗೊಪ್ಪುವ, ಎಲ್ಲೂ ಪರಂಪರೆಯನ್ನು ಬಿಡದ ದೇವಕಾನ ಕೃಷ್ಣಭಟ್ಟರ ವೇಷಭೂಷಣ ಈ ಪ್ರದರ್ಶನಗಳ ಗೆಲುವಿನಲ್ಲಿ ದೊಡ್ಡ ಪಾಲನ್ನು ಪಡೆಯುತ್ತದೆ. ಈ ತಂಡದವರು ಒಂದೂವರೆ ಗಂಟೆಯಲ್ಲಿ ಸರಿಸುಮಾರು ಇಪ್ಪತ್ತು ವೇಷಗಳನ್ನು ಸಿದ್ಧಪಡಿಸಿ ಪುರಾಣ ಪುರುಷರನ್ನಾಗಿಸುವ ಕೆಲಸ ದೊಡ್ಡ ಸಾಹಸವೇ ಸರಿ. ಮೊದಲ ದಿನ ಆರು, ಎರಡನೇಯ ದಿನ ಏಳು ಆಖ್ಯಾನಗಳಿದ್ದವು. “ರಾಮಶ್ವಮೇಧ’, “ರಾಣಿ ಶಶಿಪ್ರಭೆ’, “ಮದನಾಕ್ಷಿ ತಾರಾವಳಿ’, “ಯುಗದರ್ಶನ’ (ಗರುಡಗರ್ವಭಂಗ), “ಪಂಚವಟಿ’, “ಭಾರ್ಗವರಾಮ’, “ಮಾರ್ಕಾಂಡೇಯ ಚರಿತ್ರೆ’, “ತರಣಿಸೇನ ಕಾಳಗ’, “ಸುದರ್ಶನ ಗರ್ವಭಂಗ’, “ಪಾಂಡವಾಶ್ವಮೇಧ’, “ನರಕಾಸುರ ಮೋಕ್ಷ’, “ರತ್ನಪ್ರಭಾ ಪರಿಣಯ’ ಪ್ರಸಂಗಗಳನ್ನು ವಿವಿಧ ಶಾಲಾ-ಕಾಲೇಜು ಮಕ್ಕಳು ಪ್ರದರ್ಶಿಸಿದರು. 

ಸುಮಾರು ಇನ್ನೂರ ಇಪ್ಪತ್ತು ಮಕ್ಕಳು ಭಾಗವಹಿಸಿದ ಪ್ರದರ್ಶನಗಳಲ್ಲಿ ನೂರ ಹದಿನಾಲ್ಕು ಮಂದಿ ಬಾಲಕಿಯರಿದ್ದು ವಿಶೇಷ ಪ್ರಧಾನ ಪಾತ್ರಗಳನ್ನು , ಕೇಸರಿತಟ್ಟಿಯ ಬಣ್ಣ , ಹೆಣ್ಣು ಬಣ್ಣ ಮುಂತಾದ ಹಿರಿಯರಿಗೂ ಕಷ್ಟವಾಗುವ ಪಾತ್ರಗಳನ್ನು ಹುಡುಗಿಯರೇ ನಿರ್ವಹಿಸಿದ್ದು ಈ ಪ್ರದರ್ಶನಗಳ ವಿಶೇಷ ಕೊಡುಗೆ. ಮಾತುಗಾರಿಕೆಗೆ ಕಂಠಪಾಠದ ಅನಿವಾರ್ಯತೆ ಇತ್ತು. ಮಕ್ಕಳ ಮನೋಭಾವಕ್ಕೆ ಹೊಂದುವ ಕಥೆಗಳನ್ನು ಆಯ್ದು ಪ್ರದರ್ಶಿಸಿದರೆ ಇನ್ನೂ ಹೆಚ್ಚಿನ ಯಶಸ್ಸು ಪಡೆಯಬಹುದೇನೋ. ಹೆಚ್ಚು ಹೆಚ್ಚು ಮಕ್ಕಳನ್ನು ತೊಡಗಿಸಲು ಒಂದೂವರೆ ಗಂಟೆಯ ಪ್ರಸಂಗಗಳಲ್ಲಿ ವಿಸ್ತಾರ ಕಥೆಗಳನ್ನು ತಂದುದು ತೀರಾ ಅವಸರದ ಕ್ರಮವಾಗಿತ್ತು. ಮಕ್ಕಳ ಮನಸ್ಥಿತಿಗೆ ಚೆಂಡೆಯ ಅರ್ಭಟ ಅಷ್ಟೊಂದು ಬೇಡವಿತ್ತು. 

ಹಿಮ್ಮೇಳದಲ್ಲಿ ದಿವಾಕರ ಆಚಾರ್‌ ಪೊಳಲಿ, ಮಹೇಶ್‌ ಕನ್ವಾಡಿ, ಸೀತಾರಾಮ ಭಟ್‌ ಸುರತ್ಕಲ್‌, ನಾಗರಾಜ ಭಟ್‌ ನಕ್ರೆ, ಭವ್ಯಶ್ರೀ ಕುಲ್ಕುಂದ, ಚಿನ್ಮಯಿ ಭಟ್‌ ಕಲ್ಲಡ್ಕ, ಮೈತ್ರೇಯಿ ಭಟ್‌ ಭಾಗವತರಾಗಿಯೂ ಮುರಳೀಧರ ಭಟ್‌ ಕಟೀಲು, ಚಂದ್ರಶೇಖರ್‌ ಭಟ್‌ ಕೊಂಕಣಾಚೆ , ಶಿತಿಕಂಠ ಭಟ್‌ ಉಜಿರೆ, ರವಿರಾಜ ಜೈನ್‌, ಆನಂದ ಗುಡಿಗಾರ್‌, ರಾಮಕೃಷ್ಣ ಕಾಮತ್‌, ದೇವಾನಂದ ಭಟ್‌, ವಿಕಾಸ್‌ ಕುಮಾರ್‌ ಚೆಂಡೆ ಮದ್ದಳೆಯಲ್ಲಿಯೂ ಜಯಂತ್‌ ಸಾಣೂರು, ಉದಯ ಪಾಟ್ಕರ್‌, ವೆಂಕಟೇಶ್‌ ನಾಯಕ್‌ ಚಕ್ರತಾಳದಲ್ಲಿ ಸಹಕರಿಸಿದರು.

Advertisement

ಶ್ರೀಧರ ಡಿ.ಎಸ್‌. 

Advertisement

Udayavani is now on Telegram. Click here to join our channel and stay updated with the latest news.

Next