Advertisement

ಸೈಬರ್‌ ಕ್ರೈಮ್‌ ವಿರುದ್ಧ ಪರಿಣಾಮಕಾರಿ ಕ್ರಮ: ಆರಗ ಜ್ಞಾನೇಂದ್ರ

10:52 PM Dec 25, 2021 | Team Udayavani |

ವಿಟ್ಲ/ಮಂಗಳೂರು: ಸೈಬರ್‌ ಅಪರಾಧಗಳ ತನಿಖೆಗೆ ವಿಶೇಷ ಕ್ರಮ ಕೈಗೊಂಡಿದ್ದೇವೆ. ಆದರೆ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಜತೆಗೆ ಕಾಯ್ದೆಯನ್ನು ನಿಷ್ಪ್ರಯೋಜಕ ಮಾಡಬೇಕೆಂಬ ಹೋರಾಟ ನಡೆಯುತ್ತಿದೆ. ಸದುದ್ದೇಶದಿಂದ ಕಾಯ್ದೆ ತರಲಾಗಿದೆ ಮತ್ತು ಅದಕ್ಕೆ ಸರಕಾರ ಬದ್ಧವಾಗಿದೆ. ಆನ್‌ಲೈನ್‌ ಬಿಡ್ಡಿಂಗ್‌ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ. ಸೈಬರ್‌ ಕ್ರೈಂ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ವಿಟ್ಲ ಮತ್ತು ಮಂಗಳೂರಿನಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ದೇಶ ವಿರೋಧಿ  ಕೃತ್ಯ ಎಸಗುವವರನ್ನು, ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವ ಸಂಘಟನೆಗಳನ್ನು ಮುಲಾಜಿಲ್ಲದೆ ನಿಷೇಧ ಮಾಡುತ್ತೇವೆ. ಅಂತಹ ಚಟುವಟಿಕೆಯಲ್ಲಿ ತೊಡಗುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಓಲೈಕೆ ರಾಜಕಾರಣದಿಂದ ದೇಶಕ್ಕೆ ಭವಿಷ್ಯವಿಲ್ಲ:

ಮತಾಂತರ ನಿಷೇಧ ಮಸೂದೆಯ ಕುರಿತು ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹಸಚಿವರು ಓಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತ¤ ಹೋದರೆ ದೇಶಕ್ಕೆ ಭವಿಷ್ಯ ಇರುವುದಿಲ್ಲ ಎಂದರು.

ನಮ್ಮ ದೇಶ ಎಲ್ಲ ಧರ್ಮಗಳನ್ನು ಪ್ರೀತಿಸುತ್ತದೆ. ಆದರೆ ಇಂತಹ ಒಳ್ಳೆಯ ವೃಕ್ಷಕ್ಕೆ ಗೆದ್ದಲು ರೀತಿಯಲ್ಲಿ ಮತಾಂತರ ಪಿಡುಗು ಆರಂಭವಾಗಿದ್ದು, ಈಗ ಮರವನ್ನೇ ಕೊಲ್ಲುವ ಮಟ್ಟಕ್ಕೆ ಬೆಳೆದಿದೆ. 1947ರಲ್ಲಿ ನಮ್ಮ ದೇಶ ಧರ್ಮದ ಆಧಾರದಲ್ಲಿ ಒಡೆಯಿತು. ಇಂದು ಊರೂರು ಒಡೆಯುತ್ತಿದೆ. ಇದರ ಬಗ್ಗೆ ನಮ್ಮ ರಾಜಕಾರಣ ಯೋಚನೆ ಮಾಡಬೇಕು ಎಂದು ತಿಳಿಸಿದರು.

Advertisement

ಆಕ್ಷೇಪಣೆಗಳು ಸಹಜ :

ಮತಾಂತರ ನಿಷೇಧ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದೆ. ಇದಕ್ಕೆ ಆಕ್ಷೇಪಣೆಗಳು ಸಹಜ. ಆದರೆ ಎಲ್ಲರೂ ಸೇರಿ ಪಕ್ಷ ಮೀರಿ ಯೋಚನೆ ಮಾಡಬೇಕು. ನಿರ್ದಿಷ್ಟ ಸಮುದಾಯವನ್ನು ಓಲೈಸಲು ದೇಶದ ಹಿತವನ್ನು ಅವಗಣಿಸಬಾರದು. ದೇಶದ ಹಿತಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಕೂಡ ಅಗತ್ಯ ಎಂದರು.

ಪೊಲೀಸರಿಂದ ಒಳ್ಳೆಯ ನಿರ್ಧಾರ:

ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಅಶಾಂತಿ ಸೃಷ್ಟಿ ಯತ್ನ ನಡೆದಾಗ  ಪೊಲೀಸರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ಮೇಲೆಯೇ ಹಲ್ಲೆ ನಡೆಯುವವರೆಗೂ ಸಹನೆಯಲ್ಲಿದ್ದರು. ಎಲ್ಲಿಯೂ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಪೊಲೀಸ್‌ ಇಲಾಖೆ ಅದಕ್ಕಾಗಿಯೇ ಇರುವುದು ಎಂದರು.

ಎಸ್‌ಪಿ ಕಚೇರಿ ಸ್ಥಳಾಂತರಕ್ಕೆ ವ್ಯವಸ್ಥೆ :

ಎಸ್‌ಪಿ ಕಚೇರಿ ಪುತ್ತೂರಿಗೆ ಬರಬೇಕೆಂಬ ನಿಟ್ಟಿನಲ್ಲಿ ಪುತ್ತೂರು ಶಾಸಕರ ಬಹಳ ದೊಡ್ಡ ಆಗ್ರಹ ಇದೆ. ಸ್ಥಳಾಂತರಕ್ಕೆ ತುಂಬಾ ಆರ್ಥಿಕ ವ್ಯವಸ್ಥೆ ಬೇಕಾಗಿದೆ. ಎಸ್‌ಪಿ ಕಚೇರಿ ಮಾತ್ರವಲ್ಲ, ಡಿಆರ್‌ ಸೇರಿ ಬೇರೆ ಬೇರೆ ವ್ಯವಸ್ಥೆಗಳೆಲ್ಲಾ ಬರಬೇಕಾಗಿದೆ. ಆ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು.

ಕರಾವಳಿಯ ಯುವಕರೇ ಪೊಲೀಸ್‌ ಇಲಾಖೆಗೆ ಬನ್ನಿ :

ಸ್ವಾತಂತ್ರ್ಯ ಬಂದು ಇದುವರೆಗೆ ಗುರುತಿಸಲಾಗದ ನ್ಯೂನತೆಗಳನ್ನು ಗುರುತಿಸಿ ಪೊಲೀಸರ ಕೈಬಲ ಪಡಿಸುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ. ವೇತನವೂ ಉತ್ತಮವಾಗಿದೆ. ಒಂದೇ ವರ್ಷದಲ್ಲಿ 4 ಸಾವಿರ ಕಾನ್‌ಸ್ಟೆಬಲ್‌ ಹುದ್ದೆಯನ್ನು ತುಂಬಿದ್ದೇವೆ. ಖಾಲಿ ಇದ್ದ 950 ಎಸ್‌ಐ ಹುದ್ದೆಯನ್ನೂ ಭರ್ತಿ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಜನ ಪೊಲೀಸ್‌ ಇಲಾಖೆಗೆ ಅರ್ಜಿ ಹಾಕುತ್ತಿಲ್ಲ. ಹೊರ ಜಿಲ್ಲೆಯಿಂದ ಬಂದವರು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿರುತ್ತಾರೆ. ಅವರಿಗೆ ವರ್ಗಾವಣೆ ನೀಡಿದಲ್ಲಿ ಕರಾವಳಿಯಲ್ಲಿ ಸಿಬಂದಿ ಇಲ್ಲದಂತಾಗುತ್ತದೆ. ತುಳು ಹಾಗೂ ಬ್ಯಾರಿ ಭಾಷೆ ಅರಿತ ಹೆಚ್ಚು ಮಂದಿ ಯುವಕರು ಇಲಾಖೆಗೆ ಬೇಕಾಗಿದ್ದಾರೆ ಎಂದು ಸಚಿವ ಜ್ಞಾನೇಂದ್ರ ಹೇಳಿದರು.

ಎಎನ್‌ಎಫ್ ಹಿಂಪಡೆಯುವುದಿಲ್ಲ  :

ಕೆಲವು ನಕ್ಸಲರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಆದರೆ ನಕ್ಸಲ್‌ ಚಟುವಟಿಕೆ ಪೂರ್ಣವಾಗಿ ನಿಂತಿರುವ ಬಗ್ಗೆ ಪೊಲೀಸರು ವರದಿ ನೀಡುವವರೆಗೂ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್) ಅನ್ನು ಹಿಂಪಡೆಯುವುದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next