ಬೀದರ: ಪ್ರಕೃತಿಯ ಸೊಬಗಿನಲ್ಲಿರುವ ರಾಜ್ಯದ ಏಕೈಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಈಗ “ಫಲ-ಪುಷ್ಪ ಪ್ರಪಂಚ’ವೇ ಅನಾವರಣಗೊಂಡಿದೆ.
ರಂಗು ರಂಗಿನ, ಬಗೆ ಬಗೆಯ ಹೂಗಳ ಜತೆ ವಿವಿಧ ಬಗೆಯ ಹಣ್ಣು ಹಾಗೂ ಪುಷ್ಪದಲ್ಲಿ ಅರಳಿರುವ ಕಲಾಕೃತಿಗಳು ಪರಿಸರ ಪ್ರೇಮಿಗಳನ್ನು ಮನಸೂರೆಗೊಳ್ಳುತ್ತಿವೆ. ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ಮೂರು ದಿನಗಳ ರಾಜ್ಯಮಟ್ಟದ ಪಶು ಮೇಳ ನಿಮಿತ್ತ ಆಯೋಜಿಸಿದ್ದ “ಫಲ-ಪುಷ್ಪ ಪ್ರದರ್ಶನ’ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿ ಎರಡನೇ ಬಾರಿಗೆ ಇಂಥದೊಂದು ಪ್ರದರ್ಶನ ಆಯೋಜಿಸುವ ಮೂಲಕ ಇಲಾಖೆ ಮೆಚ್ಚುಗೆಗೆ ಪಾತ್ರವಾಗಿದ್ದು, ಬೆಂಗಳೂರಿನ ಲಾಲ್‌ಬಾಗ್ ಮಾದರಿಯ ಪ್ರದರ್ಶನ ನೆನಪಿಗೆ ಬರುತ್ತಿದೆ. ರೈತರು, ಯುವಕರು, ವಿದ್ಯಾರ್ಥಿಗಳು ಈ ಸೊಬಗನ್ನು ಕಣ್ತುಂಬಿಕೊಳ್ಳುವುದಷ್ಟೇ ಅಲ್ಲ ಮೊಬೈಲ್‌ನಲ್ಲೂ ಸೆರೆ ಹಿಡಿದುಕೊಳ್ಳುತ್ತಿದ್ದಾರೆ.
ಹಣ್ಣಿನಲ್ಲಿ ಅರಳಿದ ದೇವರು-ಮಹಾತ್ಮರು: ಹಣ್ಣು ಮತ್ತು ತರಕಾರಿಗಳಲ್ಲಿ ದೇವರು, ಮಹಾತ್ಮರು, ಕ್ರಿಕೆಟ್ ತಾರೆಗಳು ಮತ್ತು ಪಕ್ಷಿಗಳ ಕಲಾಕೃತಿಗಳು ಅರಳಿ ನಿಂತಿವೆ. ಕುಂಬಳಕಾಯಿ, ಸೋರೆಕಾಯಿ, ತರಬೂಜ್ ಮತ್ತು ಪೈನಾಪಲ್ ಗಳ ಮೂಲಕ ಈ ಎಲ್ಲ ಕಲಾಕೃತಿಗಳನ್ನು ತಯಾರಿಸಲಾಗಿದೆ. ಬದನೆಕಾಯಿ ತರಕಾರಿಯಿಂದ ನವಿಲು ಸೋರೆಕಾಯಿಯಲ್ಲಿ ಮೊಸಳೆ ರಚಿಸಿರುವುದು ಪ್ರದರ್ಶನದ ಮುಖ್ಯ ಕೇಂದ್ರ ಬಿಂದುಗಳಾಗಿವೆ. ಬೀದರನಲ್ಲಿ ನಾಗರಿಕ ವಿಮಾನಯಾನ ಆರಂಭವಾದ ಸಂದರ್ಭದಲ್ಲೇ ಪುಷ್ಪದಲ್ಲಿ ವಿನ್ಯಾಸಗೊಂಡಿರುವ ವಿಮಾನ ಪ್ರದರ್ಶನ ವಿಶೇಷ ಎನಿಸಿದೆ. 10 ಅಡಿ ಉದ್ದ, 6 ಅಡಿ ಎತ್ತರದಲ್ಲಿ ಜಿರೇನಿಯಂ ಮತ್ತು ಗುಲಾಬಿ 50 ಕೆಜಿ ಹೂವುಗಳನ್ನು ಬಳಸಲಾಗಿದೆ. ಅದರೊಟ್ಟಿಗೆ ನೃತ್ಯ ಮಾಡುತ್ತಿರುವ ಬೃಹದಾಕಾರದ ರಾಷ್ಟ್ರೀಯ ಪಕ್ಷಿ ನವಿಲು ನಾನಾ ಬಗೆಯ ಪುಷ್ಪದಲ್ಲಿ ಅರಳಿರುವುದು ಗಮನ ಸೆಳೆಯುತ್ತಿದೆ. ವಿಶೇಷ ಮತ್ತು ನೋಡಲು ಆಕರ್ಷಣೀಯವಾಗಿ ಕಾಣುವ, ಬರ್ಡ್ ಆಫ್ ಪ್ಯಾರಾಡೈಸ್, ಸೇವಂತಿಗೆ, ಸಿತಾಲೆ, ಜರ್ಜಿರಾ ಮತ್ತು ಗ್ಲ್ಯಾಡಿಯೋಲಸ್ ಹೂಗಳು ಪುಷ್ಪಪ್ರಿಯರನ್ನು ಆಕರ್ಷಿಸುತ್ತಿವೆ.
ಒಂದು ವಾರದ ಶ್ರಮ: ತೋಟಗಾರಿಕೆ ಇಲಾಖೆಯ ಕಲಬುರಗಿ ಮತ್ತು ಬೀದರ ಜಿಲ್ಲೆಯ ಅ ಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಕಳೆದ ಒಂದು ವಾರದಿಂದ ಫಲ ಪುಷ್ಪ ಪ್ರದರ್ಶನಕ್ಕಾಗಿ ಶ್ರಮ ಪಟ್ಟಿದ್ದಾರೆ. ಇದಕ್ಕಾಗಿ ಬೆಂಗಳೂರು, ಹೈದ್ರಾಬಾದ ಮತ್ತು ಪುಣೆಯಿಂದ ಹತ್ತಾರು ಜಾತಿಯ ಅಲಂಕಾರಿಕ ಪುಷ್ಪಗಳನ್ನು ತರಿಸಲಾಗಿದೆ. ಹೂ ಕುಂಡಗಳನ್ನು ಸಾಲಾಗಿ ಜೋಡಿಸಲಾಗಿದ್ದು, ಸಾಲು ಸಾಲಾಗಿ ಕಾಣುವ ಹೂಗಳು ನೋಡುಗರನ್ನು ತಣಿಸುತ್ತಿವೆ. ಫಲಪುಷ್ಪ ಆಸಕ್ತರು ಬಗೆ ಬಗೆಯ ಹೂಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇನ್ನು ಮುಖ್ಯ ದ್ವಾರದಲ್ಲಿ “ಸಿರಿಧಾನ್ಯ ಬಳಸಿರಿ-ಸಿರಿವಂತರಾಗಿರಿ’ ಶೀರ್ಷಿಕೆಯಡಿ ಸಿರಿಧಾನ್ಯಗಳನ್ನೇ ಬಳಸಿ ಸ್ವಾಗತ ಕಲೆಯನ್ನು ಅನಾವರಣ ಮಾಡಲಾಗಿದೆ. ರಾಣಿ, ಉದಲು, ನವಣೆ, ಸಜ್ಜೆ, ಹಾರಕ, ಬರಗು, ಕೂರಲೆ ಧಾನ್ಯಗಳನ್ನು ಉಪಯೋಗಿಸಲಾಗಿದೆ. ಅದರೆದುರಿಗೆ ಜಿಲ್ಲೆಯಲ್ಲಿ ಬೆಳೆಯುವ ವಿವಿಧ ಬಗೆಯ ಪುಷ್ಪಗಳ ಹೂಕುಂಡಗಳನ್ನು ಪ್ರದರ್ಶನಕ್ಕಿಡಲಾಗಿದೆ. ಜತೆಗೆ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯ ಮಾದರಿ ಆಕರ್ಷಣೀಯವಾಗಿದೆ.
ಫಲಪುಷ್ಪ ಪ್ರದರ್ಶನ ಕೇವಲ ಮನಸ್ಸಿಗೆ ರಂಜನೆ ನೀಡುವುದಷ್ಟೇ ಅಲ್ಲ. ತೋಟಗಾರಿಕೆ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರ, ತಂತ್ರಜ್ಞಾನ ಕುರಿತು ತಿಳಿಸುವುದು ಹಾಗೂ ರೈತರು, ಪರಿಸರ ಆಸಕ್ತರಿಗೆ ಹಣ್ಣು, ತರಕಾರಿ, ಹೂಗಳನ್ನು ಬೆಳೆಸಲು ಪ್ರೇರೇಪಿಸುವುದು ಫಲಪುಷ್ಪ ಪ್ರದರ್ಶನದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳ ವೀಕ್ಷಣೆಗೂ ಅವಕಾಶ ಮಾಡಿಕೊಡಲಾಗಿದ್ದು, ನಿತ್ಯ 10 ಸಾವಿರ ಜನರು ಪ್ರದರ್ಶನ ವೀಕ್ಷಿಸುತ್ತಿದ್ದಾರೆ.
ಮಲ್ಲಿಕಾರ್ಜುನ ಬಾವಗೆ
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ.
ಶಶಿಕಾಂತ ಬಂಬುಳಗೆ