Advertisement

ಶೈಕ್ಷಣಿಕ ಪ್ರವಾಸ: ಮಕ್ಕಳ ಸುರಕ್ಷೆಗಿರಲಿ ಮೊದಲ ಆದ್ಯತೆ

11:48 PM Dec 11, 2024 | Team Udayavani |

ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಭರಾಟೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ, ಕರಾವಳಿ ಭಾಗದ ವಿದ್ಯಾರ್ಥಿಗಳು ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಳ್ಳುವುದು ಈ ಹಿಂದಿನಿಂದಲೂ ಬಂದ ರೂಢಿ. ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಒಂದಲ್ಲ ಒಂದು ಶೈಕ್ಷಣಿಕ ಪ್ರವಾಸ ದುಃಖಾಂತ್ಯ ಕಾಣುವುದು ತೀರಾ ನೋವಿನ ವಿಷಯ.

Advertisement

ಪ್ರವಾಸದ ವೇಳೆ ಅರೆಕ್ಷಣ ಮೈಮರೆತರೂ ವಿದ್ಯಾರ್ಥಿಗಳು ಒಂದಲ್ಲ ಒಂದು ಅವಘಡಕ್ಕೆ ಸಿಲುಕುವ ಅಪಾಯವಿದ್ದೇ ಇರುತ್ತದೆ. ಇಂತಹುದೇ ಒಂದು ದಾರುಣ ಘಟನೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಸಂಭವಿಸಿದೆ. ಶೈಕ್ಷಣಿಕ ಪ್ರವಾಸಕ್ಕಾಗಿ ಬಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ. ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಪ್ರವಾಸದ ಸಂತಸದ ಗುಂಗಿನಲ್ಲಿದ್ದ ಸಹಪಾಠಿಗಳು ಕಣ್ಣೀರು ಹಾಕುತ್ತಲೇ ಕಹಿನೆನಪುಗಳೊಂದಿಗೆ ಪ್ರವಾಸಕ್ಕೆ ಅಂತ್ಯ ಹಾಡುವಂತಾದುದು ವಿಪರ್ಯಾಸವೇ ಸರಿ.

ಇಂತಹ ದುರ್ಘ‌ಟನೆ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ ಮೊದ ಲೇನಲ್ಲ. ಪ್ರತೀ ವರ್ಷ ಈ ತೆರನಾದ ದುರಂತ ಕರಾವಳಿಯ ಕಡಲತಡಿಯಲ್ಲಿ ನಡೆ ಯುತ್ತಲೇ ಇರುತ್ತದೆ. ಸಾಗರದ ಸೌಂದರ್ಯವನ್ನು ಆಸ್ವಾದಿಸುವ ಭರ ದಲ್ಲಿ ಮಕ್ಕಳು, ಪ್ರವಾಸಿಗರು ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗಿಯೂ ಸಮು ದ್ರಕ್ಕಿಳಿದು ಅಲೆಗಳೊಂದಿಗೆ ಚೆಲ್ಲಾಟವಾಡಿ ದುರಂತವನ್ನು ಮೈಮೇಲೆ ಎಳೆದು ಕೊಳ್ಳುವಂತಹ ಘಟನೆಗಳು ಪದೇಪದೆ ವರದಿಯಾಗುತ್ತಲೇ ಇರುತ್ತವೆ.

ಇನ್ನು ಶೈಕ್ಷಣಿಕ ಪ್ರವಾಸ ಎಂದಾಗ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಸುರ ಕ್ಷಿತವಾಗಿ ಮಕ್ಕಳನ್ನು ಮರಳಿ ಅವರವರ ಮನೆಗಳಿಗೆ ತಲುಪಿಸುವುದು ಆ ಶಾಲಾ ಶಿಕ್ಷಕರ ಜವಾಬ್ದಾರಿ. ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಾಗ ಹೆಚ್ಚಿನ ಎಚ್ಚರಿಕೆ, ಮುಂಜಾ ಗ್ರತೆ ಯನ್ನು ವಹಿಸುವುದು ಅತೀಮುಖ್ಯ. ಕಡಲ ಕಿನಾರೆಗಳ ಸಹಿತ ಅಪಾಯಕಾರಿ ಸ್ಥಳಗಳಲ್ಲಿ ಮಕ್ಕಳ ಮೋಜು-ಮಸ್ತಿಗೆ ಅವಕಾಶ ನೀಡಕೂಡದು. ಮಕ್ಕಳನ್ನು ಪ್ರವಾ ಸಕ್ಕೆ ಕರೆದೊಯ್ಯುವ ಮುನ್ನ ಶಿಕ್ಷಕರು ಅವರನ್ನು ಕರೆದೊಯ್ಯ ಲಾಗುತ್ತಿರುವ ಪ್ರವಾಸಿ ಸ್ಥಳಗಳ ಬಗೆಗೆ ಸವಿವರವಾಗಿ ತಿಳಿಹೇಳಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಬೇಕು. ಆಯಾಯ ಪ್ರವಾಸಿ ತಾಣಗಳಲ್ಲಿನ ಸುರಕ್ಷ ಸಿಬಂದಿ, ಸ್ಥಳೀಯರು ನೀಡುವ ಎಚ್ಚರಿಕೆಯನ್ನು ಗಮನವಿಟ್ಟು ಕೇಳಿ ಬಳಿಕ ಮಕ್ಕಳನ್ನು ಕಡಲತಡಿ ಸಹಿತ ಯಾವುದೇ ಪ್ರವಾಸಿ ತಾಣದಲ್ಲಿ ಸುತ್ತಾಡಲು ಬಿಡಬೇಕು. ರಾಜ್ಯದ ಕಡಲತಡಿಗಳಲ್ಲಿ ಪ್ರತೀವರ್ಷ ಎಂಬಂತೆ ಇಂತಹ ದಾರುಣ ಘಟನೆಗಳು ನಡೆಯುತ್ತಲೇ ಬಂದಿದ್ದರೂ ಶಿಕ್ಷಣ ಇಲಾಖೆ ಮತ್ತು ಶಿಕ್ಷಕ ವರ್ಗ ಎಚ್ಚೆತ್ತು¤ಕೊಂಡಂತೆ ತೋರುತ್ತಿಲ್ಲ. ಈ ಬಗ್ಗೆ ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತಗಳು ಕೂಡ ಹೆಚ್ಚು ಮುತುವರ್ಜಿ ವಹಿಸುವ ಅಗತ್ಯವಿದೆ. ಕಡಲ ಕಿನಾರೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿಯಮಗಳನ್ನು ಮೀರುವವರಿಗೆ ದಂಡ ವಿಧಿಸುವ ಕ್ರಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ಅಷ್ಟು ಮಾತ್ರವಲ್ಲದೆ ಪ್ರವಾಸಿ ಗರು ಅದರಲ್ಲೂ ಮಕ್ಕಳು ಕಡಲತಡಿಯಲ್ಲಿ ನಿರ್ದಿಷ್ಟ ಪ್ರದೇಶದವರೆಗೆ ತೆರಳಲು ಮಾತ್ರವೇ ಅವಕಾಶ ನೀಡುವ ನಿಯಮವನ್ನು ರೂಪಿಸಬೇಕು. ಈ ಬಗ್ಗೆ ಎಲ್ಲ ಜಿಲ್ಲೆಗಳ ಶಿಕ್ಷಣ ಇಲಾಖೆಗಳಿಗೆ ಮಾರ್ಗಸೂಚಿಯೊಂದನ್ನು ರವಾನಿಸಿ, ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಕರೆದೊಯ್ಯುವ ವೇಳೆ ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next