Advertisement

ದೇಶದಲ್ಲಿ ಮಠಗಳಿಂದ ಶೈಕ್ಷಣಿಕ ಕ್ರಾಂತಿ; ನಿರಂಜನಾನಂದಪುರಿ ಶ್ರೀ

06:31 PM Aug 18, 2022 | Team Udayavani |

ಬ್ಯಾಡಗಿ: ಧಾರ್ಮಿಕ ಕ್ಷೇತ್ರಗಳಾದ ಮಠಗಳು ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಹುಟ್ಟುಹಾಕಿದ್ದು, ಸಾರ್ವಜನಿಕರ ಸಹಕಾರದಿಂದ ಉಚಿತ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಕಾಗಿನೆಲೆ ಗ್ರಾಮದ ಕನಕಗುರುಪೀಠದ ಹಕ್ಕಬುಕ್ಕ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬಿಬಿಎಂಪಿ ಸದಸ್ಯ ಡಾ|ರಾಜು ಅವರು ನೀಡಿದ 1.50 ಲಕ್ಷ ರೂ. ವೆಚ್ಚದ ನೋಟ್‌ಬುಕ್‌ ಸೇರಿದಂತೆ ಇನ್ನಿತರ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಶಿಕ್ಷಣದ ಅವಶ್ಯಕತೆ: ಧಾರ್ಮಿಕ ಬೋಧನೆ ಜೊತೆಗೆ ಸಾಮಾಜಿಕ ಮತ್ತು ನೀತಿ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು ಶ್ರೀಮಠಗಳು ಮನಗಂಡಿವೆ. ದೇಶ ಮತ್ತು ಸಮಾಜದ ಭವಿಷ್ಯ ಸೇರಿದಂತೆ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸುತ್ತಿರುವ ಶ್ರೀಮಠಗಳು, ಪ್ರಸ್ತುತ ಸಮಾಜವನ್ನು ಶಿಕ್ಷಣ ನೀಡುವುದರಿಂದ ಮಾತ್ರ ಸುಧಾರಣೆಗೆ ತರಲು ಸಾಧ್ಯವೆಂಬ ನಿರ್ಧಾರಕ್ಕೆ ಬಂದಿವೆ. ಗುರುಕುಲ ಪದ್ಧತಿಯಿಂದ ಹಿಡಿದು ಇಂದಿನ ತಾಂತ್ರಿಕ ಶಿಕ್ಷಣದವರೆಗೂ ಬಹುತೇಕ ಧಾರ್ಮಿಕ ಮಠಗಳು ಶಾಲಾ, ಕಾಲೇಜುಗಳನ್ನು ಆರಂಭಿಸಿ ಉಚಿತ ಶಿಕ್ಷಣ ನೀಡುತ್ತಿವೆ ಎಂದರು.

ಸಾಮಾಜಿಕ ನ್ಯಾಯ: ಶಿಕ್ಷಣದಿಂದ ಮಾತ್ರ ಉಳ್ಳವರು ಮತ್ತು ಬಡವರ ನಡುವಿನ ಅಂತರ ಸರಿದೂಗಿಸಲು ಸಾಧ್ಯ. ಇದನ್ನರಿತ ಡಾ|ಅಂಬೇಡ್ಕರ್‌ ಅವರು ಸಾಮಾಜಿಕ ನ್ಯಾಯದ ಜೊತೆಗೆ ಸಮಾನಾಂತರ ಶೈಕ್ಷಣಿಕ ವ್ಯವಸ್ಥೆ ಹಾಗೂ ಅದರಲ್ಲಿ ಮೀಸಲಾತಿ ನೀಡಬೇಕೆಂಬುದನ್ನು ಬಲವಾಗಿ ಪ್ರತಿಪಾದಿಸಿದವರಲ್ಲಿ ಪ್ರಮುಖರಾಗಿದ್ದಾರೆ ಎಂದರು.

ಪುಸ್ತಕದಿಂದ ಮಸ್ತಕ ಸರಿಪಡಿಸಿ: ಶೋಷಿತ ಹಿಂದುಳಿದ ಸಮಾಜದ ಜನರ ಕೈಯಲ್ಲಿ ಪುಸ್ತಕ ನೀಡುವ ಮೂಲಕ ಮಸ್ತಕ ಸರಿಪಡಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ಅವರ ಹೋರಾಟ ಅತ್ಯಂತ ಶ್ಲಾಘನೀಯ. ಈ ನಿಟ್ಟಿನಲ್ಲಿ ಬಿಬಿಎಂಪಿ ಸದಸ್ಯ ಡಾ|ರಾಜು ಅವರು ಬಡಮಕ್ಕಳಿಗೆ 1.50 ಲಕ್ಷ ರೂ.ಮೌಲ್ಯದ ಪುಸ್ತಕಗಳ ವಿತರಣೆಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.ಈ ವೇಳೆ ಪ್ರಾಚಾರ್ಯ ಎಂ.ಬೀರಪ್ಪ, ಶಿಕ್ಷಕ ಬನ್ನಿಮಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next