Advertisement

ಆಳಂದಕ್ಕೆ ಶೈಕ್ಷಣಿಕ ಹಬ್‌: ಗುತ್ತೇದಾರ

06:16 PM Apr 10, 2021 | Team Udayavani |

ಆಳಂದ: ಪಟ್ಟಣದಿಂದ ಕೊರಳ್ಳಿ ಮಾರ್ಗದ ಸಮೀಪವಿರುವ ಸರ್ಕಾರಿ ನಿವೇಶನದಲ್ಲಿ ವಿವಿಧ ಸರ್ಕಾರಿ ಶಾಲೆ, ಕಾಲೇಜುಗಳನ್ನು ಆರಂಭಿಸಿ ಆ ಪ್ರದೇಶವನ್ನು ಶೈಕ್ಷಣಿಕ ಹಬ್‌ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು. ಪಟ್ಟಣದ ಹೊರವಲಯದ ಪಾಂಚಫುಲ್‌ ಹತ್ತಿರ ನಿರ್ಮಿಸಿರುವ 2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 1.66 ಕೋಟಿ ರೂ. ಅನುದಾನದ ಬಿಸಿಎಂ ಇಲಾಖೆಯ ಬಾಲಕರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪಟ್ಟಣದಲ್ಲಿ ಸರ್ಕಾರಿ ನಿವೇಶನದ ಕೊರತೆ ಇರುವುದರಿಂದ ಮುಂದೆ ಬರುವ ಸರ್ಕಾರದ ವಿವಿಧ ಯೋಜನೆಗಳಿಗೆ ಕೊರಳ್ಳಿ ಮಾರ್ಗದ ಹತ್ತಿರ ಇರುವ ಸರ್ಕಾರಿ ಜಾಗದಲ್ಲಿ ಅವಕಾಶ ಮಾಡಿಕೊಡಲಾಗುವುದು. ಈಗಾಗಲೇ ಕಿತ್ತೂರು ರಾಣಿ ಚನ್ನಮ್ಮ ವಸತಿ ಸೇರಿ ಎರಡು ಶಾಲೆ ನಡೆಯುತ್ತಿವೆ. ಇಲ್ಲಿಗೆ ಹೋಗಿ ಬರಲು ಜನರಿಗೆ ಅನೂಕೂಲವಾಗುವಂತೆ ಸಿಟಿ ಬಸ್‌ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸದ್ಯ ತಾಲೂಕಿನಲ್ಲಿ ಹಲವು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದರಿಂದ ಇಲಾಖೆಗಳಿಗೆ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ, ಹೆಚ್ಚಿನ ವಸತಿ ನಿಲಯಗಳನ್ನು ತಾಲೂಕಿಗೆ ಮಂಜೂರಿ ಮಾಡಿಕೊಂಡು ಸ್ವಂತ ಸ್ಥಳದಲ್ಲಿ ವಸತಿ ನಿಲಯ ನಡೆಯಲು ಅನುವು ಮಾಡಿಕೊಡುವುದಾಗಿ ಹೇಳಿದರು.

ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ ಸಂಗಾ, ಲೋಕೋಪಯೋಗಿ ಇಲಾಖೆ ಎಇಇ ಈರಣ್ಣ ಕುಣಕೇರಿ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ರಾಜಕುಮಾರ ಸನ್ಮುಖ, ಹಣಮಂತರಾವ ಪಾಟೀಲ, ಸಂದೇಶ ಜವಳಿ, ಬಿಸಿಎಂ ಅಧಿಕಾರಿ ಕಾಳೆ, ಅರುಣಕುಮಾರ ಬಿರಾದಾರ,
ಮಲ್ಲಿಕಾರ್ಜುನ ಕಲಬುರ್ಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next