Advertisement

ಕಾಲೇಜು ಅಕ್ರಮ ಪರಭಾರೆ; ಶಿಕ್ಷಣ ಸ್ಥಾಯಿ ಸಮಿತಿ ರದ್ದು

04:54 PM Jul 26, 2018 | Team Udayavani |

ಗದಗ: ನಿಯಮ ಮೀರಿ ಮುನ್ಸಿಪಲ್‌ ಕಾಲೇಜು ಕಟ್ಟಡವನ್ನು ಬಾಡಿಗೆ ನೀಡಿದ್ದರಿಂದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಮೇಘಾ ಮುದಗಲ್‌ ಅವರನ್ನು ವಜಾಗೊಳಿಸಿ ಸಮಿತಿಯನ್ನು ರದ್ದುಗೊಳಿಸಲಾಗಿದೆ ಎಂದು ನಗರಸಭೆ ಹಂಗಾಮಿ ಅಧ್ಯಕ್ಷ ಪ್ರಕಾಶ್‌ ಬಾಕಳೆ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ಡಿ.13ರಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸಿಡೆಂಟ್‌ ಕಲ್ಯಾಣಸರಿ ಫೌಂಡೇಶನ್‌ಗೆ ಕಾಲೇಜು ನಡೆಸಲು ಕಟ್ಟಡ ಬಾಡಿಗೆ ನೀಡುವ ಮನವಿ ಕೈಬಿಡಲಾಗಿದೆ. ಆನಂತರದ ಯಾವುದೇ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿಲ್ಲ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಯವರು ಖೊಟ್ಟಿ ಬನಾವಟಿಯಿಂದ ತಯಾರಿಸಿಕೊಂಡ ಬರುವ 200 ರೂ. ಮೌಲ್ಯದ ಛಾಪಾ ಕಾಗದದ ಮೇಲೆ ಕಟ್ಟಡ ಬಾಡಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೇಘಾ ಮುದಗಲ್‌ ಸಹಿ ಮಾಡಿದ್ದಾರೆ ಎಂದರು. ಮುನ್ಸಿಪಲ್‌ ಕಾಲೇಜು ಕಟ್ಟಡವನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಬಾಡಿಗೆ ನೀಡಿರುವುದಕ್ಕೆ ಆಕ್ಷೇಪಿಸಿ ನಿನ್ನೆ ಪ್ರತಿಪಕ್ಷ ಸದಸ್ಯರು ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಆಗ ನಗರಸಭೆ ಸಿಬ್ಬಂದಿ ವಿಚಾರಿಸಿದರೆ, ನನಗೂ ತಪ್ಪು ಮಾಹಿತಿ ನೀಡಿದರು. ಹಿಂದಿನ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗೆ ಬಾಡಿಗೆ ನೀಡಲು ಠರಾವು ಮಾಡಲಾಗಿದೆ ಎಂದಿದ್ದರು. ಇಂದು ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸತ್ಯಾಂಶ ತಿಳಿಯಿತು ಎಂದರು.

ಈ ಹಿನ್ನೆಲೆಯಲ್ಲಿ ಮುನ್ಸಿಪಲ್‌ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ವಜಾಗೊಳಿಸಲಾಗಿದೆ. ಅದರೊಂದಿಗೆ ಮುನ್ಸಿಪಲ್‌ ಕಾಲೇಜು ಕಟ್ಟಡದಲ್ಲಿರುವ ಖಾಸಗಿ ಸಂಸ್ಥೆಯನ್ನು ತೆರವುಗೊಳಿಸಿ ಅವರು ಬಳಸುತ್ತಿದ್ದ ಪೀಠೊಪಕರಣಗಳನ್ನು ವಶಕ್ಕೆ ಪಡೆಯುವಂತೆ ಕಾಲೇಜು ಪ್ರಾಚಾರ್ಯರಿಗೆ ಸೂಚಿಸಲಾಗಿದೆ. ನಗರಸಭೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ತಿಳಿದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆಂತರಿಕ ತನಿಖೆ ನಡೆಸುವಂತೆ ಪೌರಾಯುಕ್ತರಿಗೆ ನಿರ್ದೇಶಿಸಲಾಗಿದೆ. ಅಗತ್ಯವಾದರೆ, ಸದಸ್ಯರೊಂದಿಗೆ ಚರ್ಚೆ ನಡೆಸಿ, ಇದೇ ವಿಚಾರವಾಗಿ ತುರ್ತು ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಿ. ಶೇಖ್‌, ಬರ್ಕತ್‌ ಅಲಿ ಮುಲ್ಲಾ, ಕೃಷ್ಣ ಪರಾಪುರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ
ಇಲ್ಲಿನ ಮುನ್ಸಿಪಲ್‌ ಕಾಲೇಜು ಕಟ್ಟಡವನ್ನು ಖಾಸಗಿ ಕಾಲೇಜಿಗೆ ಅಧಿಕಾರ ಮೀರಿ ಬಾಡಿಗೆ ನೀಡಿರುವ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೇಘಾ ಮುದಗಲ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. ಈ ಹುದ್ದೆಯನ್ನು ನಿಭಾಯಿಸಲು ನೀವು ಎಲಿಜಿಬಲ್‌ ಇಲ್ಲ. ಕೂಡಲೇ ಈ ಹುದ್ದೆಯನ್ನು ಬಿಟ್ಟು ಬಿಟ್ರಿ ಎಂದಿದ್ದೇನೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲು ನನ್ನ ಅಧಿ ಕಾರ ಇರುವವರಿಗೆ ಪ್ರಯತ್ನ ಮಾಡುತ್ತೇನೆ.
 ಪ್ರಕಾಶ್‌ ಬಾಕಳೆ, ನಗರಸಭೆ ಹಂಗಾಮಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next