Advertisement

ಶಿಕ್ಷಣ ಮಕ್ಕಳ ಸಾಮರ್ಥ್ಯಕ್ಕನುಗುಣವಿರಲಿ

12:57 PM May 26, 2017 | Team Udayavani |

ದಾವಣಗೆರೆ: ಮಕ್ಕಳ ಆಸಕ್ತಿ, ಸಾಮರ್ಥ್ಯಕ್ಕೆ ಅನುಗುಣವಾದ ಶಿಕ್ಷಣ ಕೊಡಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಪೋಷಕರಿಗೆ ಆರ್‌.ಎಲ್‌. ಕಾನೂನು ಕಾಲೇಜು ಪ್ರಾಧ್ಯಾಪಕ ಟಿ.ವಿದ್ಯಾಧರ ವೇದಮೂರ್ತಿ ಸಲಹೆ ನೀಡಿದ್ದಾರೆ. 

Advertisement

ಗುರುವಾರ ರೋಟರಿ ಬಾಲಭವನದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಹಾಗೂ ಸ್ಟೂಡೆಂಟ್‌ ಇಸ್ಲಾಮಿಕ್‌ ಅರ್ಗನೈಸೇಷನ್‌ ಆಫ್‌ ಇಂಡಿಯಾ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ಸಾಮರ್ಥ್ಯ, ಆಸಕ್ತಿಗೆ ಅನುಗುಣವಾದ ಕೋರ್ಸ್‌ ಆಯ್ಕೆಗೆ ಪೋಷಕರು ಸಹಕರಿಸಬೇಕಲ್ಲದೆ, ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು. ಈಗ ಯಾವುದೇ ಪೋಷಕರನ್ನ ಕೇಳಿದರೆ ನಮ್ಮ ಮಕ್ಕಳು ಇಂಜಿನಿಯರ್‌ ಇಲ್ಲವೇ ಡಾಕ್ಟರ್‌ ಆಗಬೇಕು ಎನ್ನುತ್ತಾರೆ. ನಾವು ಇಂಜಿನಿಯರ್‌, ಡಾಕ್ಟರ್‌ ಆಗಲಿಲ್ಲ. 

ಹಾಗಾಗಿ ನಮ್ಮ ಮಕ್ಕಳಾರೂ ಆಗಲಿ ಎಂಬ ಬಯಕೆಧಿ ಯನ್ನೂ ವ್ಯಕ್ತಪಡಿಸುತ್ತಾರೆ. ತಮ್ಮ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳುವ ಭರದಲ್ಲಿ ತಮ್ಮ ಮಕ್ಕಳ ಸಾಮರ್ಥ್ಯ, ಆಸಕ್ತಿಯ ಬಗ್ಗೆ ಗಮನ ನೀಡುವುದೇ ಇಲ್ಲ ಎಂದು ತಿಳಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿದ ನಂತರ ಮುಂದೇನು ಓದಬೇಕು. ಏನಾಗಬೇಕು ಎಂಬುದರ ಬಗ್ಗೆ ಮಕ್ಕಳು ನಿರ್ಧರಿಸಿರುತ್ತಾರೆ.

ತಾವು ಬಯಸುವಂತಹ ಕೋರ್ಸ್‌ ಮಾಡಬೇಕು ಎಂಬ ಇಚ್ಚೆಯೂ ಇರುತ್ತದೆ. ಪೋಷಕರು ಮಕ್ಕಳ ಆಯ್ಕೆಗೆ ಅವಕಾಶ ನೀಡದೆ ತಾವು ಬಯಸಿದಂತಹ ಕೋರ್ಸ್‌ ಮಾಡಲೇಬೇಕು ಎಂಬ ಒತ್ತಾಯ ಮಾಡುತ್ತಾರೆ. ಕೆಲ ಮಕ್ಕಳು ಒಲ್ಲದ ಮನಸ್ಸಿನಿಂದ ಓದುತ್ತಾರೆ. ಕೆಲವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.

Advertisement

ಇಷ್ಟ, ಆಸಕ್ತಿ ಇಲ್ಲದ ಕೋರ್ಸ್‌ ಓದುವುದು ಮಕ್ಕಳ ಮೇಲೆ ಪರಿಣಾಮ ಉಂಟು ಮಾಡುವ ಎಲ್ಲಾ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಇಲ್ಲದ ಒತ್ತಡ ಹಾಕಬಾರದು ಎಂದು ಮನವಿ ಮಾಡಿದರು. ಸ್ಟೂಡೆಂಟ್‌ ಇಸ್ಲಾಮಿಕ್‌ ಅರ್ಗನೈಸೇಷನ್‌ ಆಫ್‌ ಇಂಡಿಯಾ ರಾಜ್ಯ ಕಾರ್ಯದರ್ಶಿ ಝಿಶನ್‌  ಅಖೇಲ್‌ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ದೋಷವಿದೆ.

ವೈದ್ಯರಾಗಬೇಕಾದವರು ಪಿಯುಸಿಯಲ್ಲಿ ಗಣಿತ ಓದಬೇಕಾಗುತ್ತದೆ. ವೈದ್ಯರಾಗ ಬೇಕಾದವರಿಗೆ ಅದಕ್ಕೆ ತಕ್ಕಂತಹ ವಿಷಯ ಅಭ್ಯಾಸ ಮಾಡುವ ಅವಕಾಶ ಇರುವಂತಾಗಬೇಕು. ವಿದ್ಯಾರ್ಥಿಗಳ ಉದ್ದೇಶವೇ ಬೇರೆ. ಓದುವುದೇ ಬೇರೆಯಾಗಿರುವಾಗ ಶಿಕ್ಷಣದ ಮೂಲ, ನೈಜ ಉದ್ದೇಶ ಈಡೇರುವುದಿಲ್ಲ ಎಂದು ತಿಳಿಸಿದರು.

ಎಲ್ಲರಲ್ಲೂ ಡಾಕ್ಟರ್‌, ಎಂಜಿನಿಯರ್‌ ಆಗುವ ಕನಸು ಇದೆ. ರಾಜ್ಯದಲ್ಲಿ ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳು ಇಂಜಿನಿಯರಿಂಗ್‌ ಮುಗಿಸುತ್ತಿದ್ದಾರೆ. ಅನೇಕರಿಗೆ ಕೆಲಸ ಸಿಗುವುದೇ ಇಲ್ಲ. ಆದರೂ ಇಂಜಿನಿಯರ್‌ ಆಗುವ ಕನಸು ಕಡಿಮೆಯಾಗುತ್ತಿಲ್ಲ ಎಂದರು. 

ಕರ್ನಾಟಕ ವಿದ್ಯಾರ್ಥಿ ಸಂಘಟನೆ ರಾಜ್ಯ ಕಾರ್ಯದರ್ಶಿ ಸಂಜಯ್‌ಕುಮಾರ್‌, ಕರ್ನಾಟಕ ಜನಶಕ್ತಿಯ ಉಷಾ ಕೈಲಾಸದ್‌ ಇದ್ದರು. ಸತೀಶ್‌ ಅರವಿಂದ್‌ ಪ್ರಾಸ್ತಾವಿಕ ಮಾತುಗಳಾಡಿದರು. ಮನ್ಸೂರ್‌ ಅಹ್ಮದ್‌ ಸ್ವಾಗತಿಸಿದರು. ನಿಜಾಮುದ್ದೀನ್‌ ನಿರೂಪಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯ 100 ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next